ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗೂರಿನ ಯಲ್ಲಮ್ಮನಿಗೆ ಜನಪದವೇ ಉಸಿರು

Last Updated 13 ಅಕ್ಟೋಬರ್ 2018, 19:31 IST
ಅಕ್ಷರ ಗಾತ್ರ

ಹೂವಿನಹಡಗಲಿ: ಟಿ.ವಿ., ಸಿನಿಮಾ ಅಬ್ಬರದಲ್ಲಿ ಜಾನಪದ ಕಲೆಗಳು ನೇಪಥ್ಯಕ್ಕೆ ಸರಿದಿವೆ. ದೇಸಿ, ವಿದೇಶಿ ಸಂಗೀತ ಪ್ರಕಾರಗಳು ಬೆರಳ ತುದಿಯಲ್ಲೇ ಲಭ್ಯವಾಗುವ ಪ್ರಸ್ತುತ ದಿನಗಳಲ್ಲಿ ಜನಪದ ಹಾಡುಗಾರರು ವಿರಳವಾಗಿದ್ದರೆ. ಯಾವುದೇ ಗೀತ ಗಾಯನ ಕೇಳಿಸಿಕೊಳ್ಳುವ ಪುರುಸೊತ್ತು ಜನರಿಗೂ ಇದ್ದಂತಿಲ್ಲ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಹೂವಿನಹಡಗಲಿ ತಾಲ್ಲೂಕು ಅಂಗೂರು ಗ್ರಾಮದ ಸಿಳ್ಳಿಕ್ಯಾತರ ಯಲ್ಲಮ್ಮ ಹಾಡುಗಾರಿಕೆಯನ್ನು ಉಸಿರಾಗಿಸಿಕೊಂಡು ಕಲೆ ಉಳಿಸಿ, ಬೆಳೆಸಲು ಎಲೆಮರೆಯ ಕಾಯಿಯಂತೆ ಶ್ರಮಿಸುತ್ತಿದ್ದಾರೆ.

ಅಂಗೂರು ಸುತ್ತಮುತ್ತಲ ಗ್ರಾಮಗಳಲ್ಲಿ ಮದುವೆ, ಅರಿಶಿಣ ಶಾಸ್ತ್ರ ಇನ್ನಿತರೆ ಶುಭ ಸಮಾರಂಭಗಳು ನಡೆದರೆ ಅಲ್ಲಿ ಯಲ್ಲಮ್ಮ ಇರಲೇಬೇಕು. ಅವರಿಂದ ಸಂಪ್ರದಾಯದ ಪದ, ಸೋಬಾನೆ ಪದ, ಜನಪದ ಗೀತೆಗಳನ್ನು ಹಾಡಿಸಿದರೆ ಮಾತ್ರ ಶುಭ ಕಾರ್ಯಗಳು ಪರಿಪೂರ್ಣವಾಗುತ್ತವೆ ಎಂಬಷ್ಟರ ಮಟ್ಟಿಗೆ ಯಲ್ಲಮ್ಮ ಸಂಗಡಿಗರು ಹಾಡುಗಾರಿಕೆಯಲ್ಲಿ ಛಾಪು ಮೂಡಿಸಿದ್ದಾರೆ.

ಯಲ್ಲಮ್ಮ ಶಾಲೆ ಮೆಟ್ಟಿಲು ಹತ್ತಿದವರಲ್ಲ. ಓದು, ಬರಹ ಗೊತ್ತೇ ಇಲ್ಲ. ಆದರೂ, ಅವರ ಬಾಯಲ್ಲಿ ದೇಶದ ಚರಿತ್ರೆ ಸಾರುವ ವೀರಗೀತೆಗಳು ನಲಿದಾಡುತ್ತವೆ. ಜನಪದ ಪ್ರಕಾರಗಳ ನೂರಾರು ಹಾಡುಗಳು ಅವರ ಸ್ಮೃತಿ ಪಟಲದಲ್ಲಿ ಅಚ್ಚಾಗಿವೆ. ಸಂಪ್ರದಾಯದ ಪದ, ಸೋಬಾನೆ ಪದ, ಲಾವಣಿ ಪದ, ಗೀಗಿ ಪದ, ಸುಗ್ಗಿಯ ಹಾಡು, ಕುಟ್ಟುವ, ಬೀಸುವ ಕಲ್ಲಿನ ಪದ, ಮಳೆರಾಯನ ಮೇಲೆ ಹಾಡುವ ಗುರ್ಜಿಪದ, ಶಿಶು ಗೀತೆಗಳನ್ನು ಸುಶ್ರಾವ್ಯವಾಗಿ ಹಾಡುತ್ತಾರೆ.

70 ವರ್ಷ ವಯಸ್ಸಿನ ಯಲ್ಲಮ್ಮ ಓರಗೆಯವರೊಂದಿಗೆ ಹಾಡಲು ಕುಳಿತರೆ ಇಡೀ ರಾತ್ರಿ ಹಾಡುತ್ತಲೇ ಇರುತ್ತಾರೆ. ಅಷ್ಟೊಂದು ಹಾಡುಗಳ ಸಂಗ್ರಹ ಅವರಲ್ಲಿದೆ. ಜನಪದ ಹಾಡುಗಾರಿಕೆ ಅವರಿಗೆ ರಕ್ತಗತವಾಗಿ ಬಂದಿದೆ. ತಂದೆ ನರಸಪ್ಪ, ತಾಯಿ ಯಲ್ಲಮ್ಮ ಕಲಾವಿದರಾಗಿದ್ದರು. ಅವರ ಪುತ್ರ ಕೆ.ಸಿ.ಪರಶುರಾಮ ಕೂಡ ಅದ್ಭುತ ಕಂಠಸಿರಿಯ ಜನಪದ ಗಾಯಕರಾಗಿ ಹೊರ ಹೊಮ್ಮಿದ್ದಾರೆ.

ಹಚ್ಚೆ ಹಾಕುವ ಕಲೆಯೂ ಅವರಿಗೆ ಕರಗತವಾಗಿದೆ. ಆಸಕ್ತಿಯಿಂದ ಕಲಿಯಲು ಬರುವ ಮಹಿಳೆಯರು, ಯುವತಿಯರಿಗೆ ಹಾಡುಗಾರಿಕೆ ಮತ್ತು ಹಚ್ಚೆ ಹಾಕುವ ಕಲೆಯನ್ನು ಕಲಿಸಿಕೊಡುತ್ತಿದ್ದಾರೆ.

ಹಂಪಿ ಉತ್ಸವ, ರಾಜ್ಯ ಮಟ್ಟದ ಜಾನಪದ ಉತ್ಸವ, ಕನ್ನಡ ಸಾಹಿತ್ಯ ಸಮ್ಮೇಳನ, ಸುಗ್ಗಿ ಹುಗ್ಗಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಿತ ಕಾರ್ಯಕ್ರಮಗಳಲ್ಲಿ ಅವರು ತಮ್ಮ ಕಲೆ ಪ್ರಸ್ತುತಪಡಿಸಿದ್ದಾರೆ. ಕಲಾ ಸೇವೆಯನ್ನು ಗುರುತಿಸಿ ಸಂಘ, ಸಂಸ್ಥೆಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿದೆ. ಆದರೆ, ತೀರಾ ಬಡತನದಲ್ಲಿ ಜನಪದ ಕಲೆ ಉಳಿಸಿ ಬೆಳೆಸುತ್ತಿರುವ ಈ ಹಿರಿಯ ಕಲಾವಿದೆಗೆ ಇನ್ನೂ ಕಲಾವಿದರ ಮಾಸಾಶನ ಸಿಕ್ಕಿಲ್ಲ.

‘ತಂದೆ, ತಾಯಿ ಇಬ್ರೂ ಹಾಡು ಹೇಳುತ್ತಿದ್ದರು. ಅವರಿಂದಲೇ ನಾನು ಸಾಕಷ್ಟು ಹಾಡುಗಳನ್ನು ಕಲಿತಿರುವೆ. ಈಗ ನನ್ನ ಮಗನೂ ಹಾಡಿಗಾರಿಕೆಯಲ್ಲಿ ಹೆಸರು ಮಾಡಿರೋದ್ರಿಂದ ಬಹಳ ಸಂತೋಷ ಆಗೇತಿ. ದೊಡ್ಡ ದೊಡ್ಡ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡೀವಿ. ಅವರು ಕೊಡೋ ಬಿಡಿಗಾಸಿನಿಂದ ಕಲಾವಿದರ ಪರಿಸ್ಥಿತಿ ಸುಧಾರಿಸಲ್ಲ. ಸರ್ಕಾರದವರು ನಮ್ಮಂತಹ ಕಲಾವಿದರು ಬದುಕು ಕಟ್ಟಿಕೊಳ್ಳಿಕ್ಕ ಏನಾದ್ರೂ ವ್ಯವಸ್ಥೆ ಮಾಡಿದ್ರ ಚಲೋ ಇರ್ತೈತಿ’ ಎಂದು ಯಲ್ಲಮ್ಮ ತಮ್ಮ ಮನದಾಳದ ಇಂಗಿತ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT