ಶನಿವಾರ, ಡಿಸೆಂಬರ್ 5, 2020
25 °C
ಅಕಾಲಿಕ ಮಳೆ, ಭತ್ತಕ್ಕೆ ಬಂದ ಕಣೆ ನೊಣ ಬಾಧೆ: ಕಾಳುಕಟ್ಟದೆ ಜೊಳ್ಳಾದ ಬೆಳೆ

ಇಳುವರಿ, ದರ ಕುಸಿತ; ಕಂಗಾಲಾದ ರೈತ

ವಾಗೀಶ ಕುರುಗೋಡು Updated:

ಅಕ್ಷರ ಗಾತ್ರ : | |

Prajavani

ಕುರುಗೋಡು: ಕಾಳುಕಟ್ಟುವ ಹಂತದಲ್ಲಿದ್ದ ಭತ್ತದ ಬೆಳೆಯು, ಅಕ್ಟೋಬರ್‌ನಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಕಣೆನೊಣ ಬಾಧೆಗೀಡಾಗಿದೆ. ಕಾಳುಕಟ್ಟದೆ ಜೊಳ್ಳಾಗಿರುವುದು ತಾಲ್ಲೂಕಿನ ಭತ್ತದ ಬೆಳೆಗಾರರ ನಿದ್ದೆಕೆಡಿಸಿದೆ.

ಪ್ರಸಕ್ತ ವರ್ಷ ಕಾಲಕಾಲಕ್ಕೆ ಉತ್ತಮ ಮಳೆಯಾಗಿದೆ. ತುಂಗಭದ್ರಾ ಜಲಾಶಯ ಅವಧಿಗೂ ಮುನ್ನವೇ ತುಂಬಿತ್ತು. ಅವಧಿಗೂ ಮುನ್ನವೇ ನಾಲೆಗಳಿಗೆ ನೀರು ಹರಿದಿತ್ತು. ಉತ್ತಮ ಬೆಳೆ ಪಡೆಯುವ ಭರವಸೆ ಮಾತ್ರ ಈಗ ಇಲ್ಲವಾಗಿದೆ.

ತಾಲ್ಲೂಕಿನ ಗೆಣಿಕೆಹಾಳು, ಓರ್ವಾಯಿ, ಗುತ್ತಿಗನೂರು, ಸೋಮಲಾಪುರ, ಎಚ್.ವೀರಾಪುರ, ಮುಷ್ಟಗಟ್ಟೆ, ಬಾದನಹಟ್ಟಿ ಭಾಗರ ರೈತರು ಬೆಳೆದ ಭತ್ತದ ಬೆಳೆಯಲ್ಲಿ ರೋಗ ಕಾಣಿಸಿಕೊಂಡಿದೆ.

ನಡಿವಿ, ನಿಟ್ಟೂರು, ಉಡೇಗೋಳ, ಎಂ.ಸೂಗೂರು, ಸಿರಿಗೇರಿ ರೈತರು ಬೆಳೆದಿರುವ ಭತ್ತದ ಬೆಳೆ ನೋಡಲು ಆಕರ್ಷಕವಾಗಿ ಕಂಡರೂ ‘ಕಣಿನೊಣ’ ಬಾಧೆಯಿಂದ ಕಾಳುಕಟ್ಟದೆ ಜೊಳ್ಳಾಗಿ ರೈತರ ಉತ್ತಮ ಇಳುವರಿಯ ನಿರೀಕ್ಷೆಯನ್ನು ಹುಸಿಗೊಳಿಸಿದೆ.

ದರ ಕುಸಿತ: ಹಿಂದಿನ ಕಳೆದ ಮಳೆಯ ಕೊರತೆ ಮತ್ತು ಕಾಲುವೆ ನೀರಿನ ಅಭಾವದ ನಡುವೆಯೂ ಪ್ರತಿ ಎಕರೆಗೆ 45 ಕ್ವಿಂಟಲ್‌ವರೆಗೆ ಇಳುವರಿ ಪಡೆದಿದ್ದರು. ಕ್ವಿಂಟಾಲ್‍ಗೆ ₹1,800ವರೆಗೆ ದರ ದೊರೆತಿತ್ತು.

ಈ ವರ್ಷ ಅಕಾಲಿಕ ಮಳೆಯ ಪರಿಣಾಮ ಪ್ರತಿ ಎಕರೆಗೆ 10 ರಿಂದ 15 ಕ್ವಿಂಟಲ್ ಕಡಿಮೆ ಇಳುವರಿ ದೊರಕಿದೆ. ದರ ಪ್ರತಿ ಕ್ವಿಂಟಲ್‍ಗೆ ₹1,200ಕ್ಕೆ ಕುಸಿದಿದೆ. ಇಳುವರಿಯ ಕೊರತೆ ಮತ್ತು ಅಧಿಕ ನಿರ್ವಹಣಾ ವೆಚ್ಚ ಮತ್ತು ದರ ಕುಸಿತದಿಂದ ರೈತರು ಕಂಗಾಲಾಗಿದ್ದಾರೆ.

‘25 ಎಕರೆ ಸೋನಾ ಮಸೂರಿ ಭತ್ತ ಬೆಳೆದೀನಿ. ಎಕರೆಗೆ ₹ 35 ಸಾವಿರ ಖರ್ಚು ಬಂದೈತೆ. ಬೆಳೆ ಕೈಸೇರೋ ಟೈಮಿನ್ಯಾಗ ಮಳೆಬಂದು ಹಾಳುಮಾಡಿಬುಡ್ತು’ ನಡಿವಿ ಗ್ರಾಮದ ಬೆಳೆಗಾರ ಎನ್.ಎಚ್. ಪುರುಷೋತ್ತಮ ಗೌಡ ‘ಪ್ರಜಾವಾಣಿ’ ಪ್ರತಿನಿಧಿ ಬಳಿ ಅಳಲು ತೋಡಿಕೊಂಡರು.

‘ಈಗ ಎಕರೆಗೆ 15 ಕ್ವಿಂಟಲ್ ಇಳುವರಿ ಬಂದ್ರೆ ಹೆಚ್ಚಾತು. ಇದರಿಂದ ಮದ್ದು, ಗೊಬ್ಬರ ಕೊಟ್ಟಾರಿಗೆ ಬಾಕಿ ಕೊಡಾದು ಹ್ಯಾಂಗ ಅಂತ ಚಿಂತಿ ಮಾಡಂಗಾಗೈತೆ’ ಎಂದು ವಿಷಾದಿಸಿದರು.

‘ಮಲೆನಾಡಿನಲ್ಲಿ ಕಾಣಿಸಿಕೊಳ್ಳುವ ‘ಕಣಿನೊಣ’ ಬಾಧೆ ಇಲ್ಲಿಯೂ ಕಾಣಿಸಿಕೊಂಡು ಸಮಸ್ಯೆ ಉಂಟಾಗಿದೆ. ಹೆಚ್ಚು ಮಳೆಯಾಗಿರುವುದರಿಂದ ವಾತಾವರಣದಲ್ಲಿ ತೇವಾಂಶ ಹೆಚ್ಚಿದ್ದೇ ಇದ್ದಕ್ಕೆ ಕಾರಣ’ ಎಂದು ರೈತ ಸಂಪರ್ಕ ಕೇಂದ್ರದ ಅಧಿಕಾರಿ ದೇವರಾಜ್ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.