ಜೀವನ ಶೈಲಿ ಬದಲಿಸಿದ ಯೋಗಾಸನ

7
ಬಳ್ಳಾರಿ ಕ್ರೀಡಾ ಸಂಕೀರ್ಣದಲ್ಲಿ ಯೋಗ ಕೇಂದ್ರ, ಮಾನಸಿಕ ಸ್ವಾಸ್ಥ್ಯಕ್ಕೂ ಯೋಗ ಬಲ

ಜೀವನ ಶೈಲಿ ಬದಲಿಸಿದ ಯೋಗಾಸನ

Published:
Updated:
ಬಳ್ಳಾರಿ ಕ್ರೀಡಾ ಸಂಕೀರ್ಣದ ಯೋಗ ಕೇಂದ್ರದಲ್ಲಿ ಅಭ್ಯಾಸ ನಿರತರು

ಬಳ್ಳಾರಿ: ‘ನಾನು ಇಲ್ಲಿಗೆ ಬೆನ್ನು ನೋವಿನ ಸಮಸ್ಯೆಯ ನಿವಾರಣೆಗಾಗಿ ಬಂದೆ. ಆದರೆ ನನ್ನ ಜೀವನ ಶೈಲಿಯೇ ಬದಲಾಯಿತು. ಮೊದಲಿಗಿಂತಲೂ ಈಗ ಸಂತೋಷವಾಗಿದ್ದೇನೆ....’

–ನಗರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಬಳ್ಳಾರಿ ಕ್ರೀಡಾ ಸಂಕೀರ್ಣದ ಆವರಣದ ಯೋಗ ಕೇಂದ್ರದಲ್ಲಿ ಬುಧವಾರ ಬೆಳಿಗ್ಗೆ ಹೀಗೆ ಹೇಳುವಾಗ 43 ವಯಸ್ಸಿನ ಶಿಕ್ಷಕ ಗೂಳೆಪ್ಪ ಬಳ್ಳೇಕಟ್ಟಿ ಅವರ ಮುಖದಲ್ಲಿ  ಸಂತಸ, ಸಮಾಧಾನವಿತ್ತು.

ಎರಡು ವರ್ಷದ ಹಿಂದೆ ಅವರು ಇಲ್ಲಿ ಸಾಮಾನ್ಯ ಯೋಗಾಭ್ಯಾಸಿಯಾಗಿ ಬಂದರು. ನಂತರ ಇಲ್ಲಿಯೇ ಯೋಗ ಶಿಕ್ಷಕರಾಗಿದ್ದಾರೆ.  ನಗರದ ನಿವಾಸಿಯಾಗಿರುವ ಅವರು 30 ಕಿ.ಮೀ ದೂರದ ತಾಳೂರಿನ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ. ಈ ಮುನ್ನ ತೀವ್ರ ಬೆನ್ನು ನೋವಿನಿಂದ ನರಳುತ್ತಿದ್ದವರು.

‘ಕೇಂದ್ರದಲ್ಲಿ ಈ ಮುಂಚೆ ಯೋಗ ಶಿಕ್ಷಕರಾಗಿದ್ದ ರಾಘವೇಂದ್ರ ಅವರ ಮಾರ್ಗದರ್ಶನದಿಂದ ನನ್ನ ನೋವುಗಳು ದೂರವಾದವು. ಅವರಿಂದ ಕಲಿತ ವಿದ್ಯೆಯನ್ನು ಈಗ ಇನ್ನಿತರರಿಗೆ ಹೇಳಿಕೊಡುತ್ತಿರುವೆ’ ಎಂದರು.

‘ಯೋಗಾಸನಗಳ ಜೊತೆಗೆ ಕಪಾಲಭಾತಿ ಮತ್ತು ಪ್ರಾಣಾಯಾಮ ಅಭ್ಯಾಸ ಮಾಡುತ್ತಿರುವುದರಿಂದ ಅನಾರೋಗ್ಯ ದೂರ ಉಳಿದಿದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಖಿನ್ನತೆ ದೂರವಾಯಿತು: ಈ ಕೇಂದ್ರದಲ್ಲಿ ಮೂರು ತಿಂಗಳಿಂದ ಅಭ್ಯಾಸ ನಡೆಸುತ್ತಿರುವ 28ರ ಯುವಕ ನರೇಂದ್ರ ‘ಅತಿ ಕಡಿಮೆ ಅವಧಿಯಲ್ಲೇ ಖಿನ್ನತೆಯಿಂದ ಹೊರಬಂದೆ’ ಎಂದರು.

ಖಾಸಗಿ ಕಂಪನಿಯ ಉದ್ಯೋಗಿಯಾಗಿರುವ ಅವರು ಕೌಟುಂಬಿಕ ಕಾರಣಗಳಿಂದಾಗಿ ನೆಮ್ಮದಿ, ಉತ್ಸಾಹ ಕಳೆದುಕೊಂಡಿದ್ದರು. ಖಿನ್ನತೆ ಆವರಿಸಿತ್ತು, ಗೆಳೆಯರೊಬ್ಬರ ಸಲಹೆ ಅವರ ಜೀವನ ಉತ್ತಮಪಡಿಸಿದೆ.

ಮಧುಮೇಹ ನಿಯಂತ್ರಣ: 60ರ ಅಂಚಿನಲ್ಲಿರುವ ನಗರದ ಗುಗ್ಗರಹಟ್ಟಿ ನಿವಾಸಿ ಅಣ್ಬಲಗನ್‌ ಅವರ ಮಧುಮೇಹ ಯೋಗಾಭ್ಯಾಸದಿಂದ ನಿಯಂತ್ರಣಕ್ಕೆ ಬಂದಿದೆ.

‘ಬೆಳಗಿನ ಹೊತ್ತು ಉಪಾಹಾರಕ್ಕೆ ಮುನ್ನ ರಕ್ತದಲ್ಲಿ ಸಕ್ಕರೆ ಪ್ರಮಾಣ 350 ರಿಂದ 380 ಎಂ.ಜಿ ಇರುತ್ತಿತ್ತು. ಈಗ 250ಕ್ಕೆ ಇಳಿದಿದೆ. ಮೊದಲಿನಂತೆ ಸುಸ್ತಾಗುವುದಿಲ್ಲ’ ಎನ್ನುವ ಅವರು ಖಾಸಗಿ ಟ್ರಾನ್ಸ್‌ಪೋರ್ಟ್‌ ಕಂಪನಿಯ ಉದ್ಯೋಗಿಯಾಗಿದ್ದಾರೆ.

ವಾಣಿಜ್ಯ ತೆರಿಗೆ ಇಲಾಖೆಯ ವಾಹನ ಚಾಲಕರಾಗಿರುವ, 48 ವಯಸ್ಸಿನ ಜೆ.ಎ.ಶೇಖರ್‌ ಮಾನಸಿಕ ಸ್ವಾಸ್ಥ್ಯದ ಸಡಿ ಲತೆಯಿಂದ ಬಳಲುತ್ತಿದ್ದರು. ಅದಕ್ಕಾಗಿ ಔಷಧಿಗಳನ್ನೂ ಸೇವಿಸುತ್ತಿದ್ದರು.

‘ಈ ಕೇಂದ್ರಕ್ಕೆ ಬಂದ ಬಳಿಕ ಬೇಸರ, ಜಿಗುಪ್ಸೆ ಕಡಿಮೆಯಾಗಿದೆ. ಲವಲವಿಕೆಯಿಂದ ಇದ್ದೇನೆ’ ಎಂದು ಸಂತಸ ವ್ಯಕ್ತಪಡಿಸಿದರು. ‘ತೀವ್ರವಾಗಿ ಬಾಧಿಸುತ್ತಿದ್ದ ಬೆನ್ನು ನೋವು ಯೋಗಾಸನಗಳ ಅಭ್ಯಾಸದಿಂದ ಮಾಯವಾಗಿದೆ’ ಎಂದು ಉದ್ಯಮಿ ಕೊಂಡಾರೆಡ್ಡಿ ತಿಳಿಸಿದರು.

ಕೇಂದ್ರದಲ್ಲಿ ಪ್ರತಿದಿನವೂ ಮೊದಲು ಓಂಕಾರ, ಸಂಕಲ್ಪ ಮಂತ್ರ, ನಂತರ ಪ್ರಾಣಾಯಾಮ, ಸೂರ್ಯ ನಮಸ್ಕಾರ, ಯೋಗಾಸನಗಳು, ಹಾಸ್ಯಾಸನ, ಯೋಗಿಕ್‌ ಜಾಗಿಂಗ್‌ ಮತ್ತು ಶಾಂತಿಮಂತ್ರವನ್ನು ಹೇಳಿಕೊಡಲಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !