ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಾದ ಕಾರ್ಯಕ್ರಮ: ಚರ್ಚೆಗೊಳಗಾದ ಅನಂತಮೂರ್ತಿಯ ಚಿಂತನೆಗಳು

‘ದಿ ಎಸ್ಸೆನ್ಸಿಯಲ್‌ ಯು.ಆರ್‌. ಅನಂತಮೂರ್ತಿ’ ಕೃತಿಯ ಹಿನ್ನೆಲೆಯಲ್ಲಿ ನಡೆದ ಸಂವಾದ
Published 8 ಜುಲೈ 2023, 23:31 IST
Last Updated 8 ಜುಲೈ 2023, 23:31 IST
ಅಕ್ಷರ ಗಾತ್ರ

ಬೆಂಗಳೂರು: ಸಾಹಿತಿ ಯು.ಆರ್‌. ಅನಂತಮೂರ್ತಿಯ ಬದುಕು ಮತ್ತು ಚಿಂತನೆಗಳನ್ನು ಮೆಲುಕು ಹಾಕಲು, ಚರ್ಚೆಗೆ ಒಳಪಡಿಸಲು ‘ಸಮಾಜವಾದಿ ಭವಿಷ್ಯ’ ಅನಂತಮೂರ್ತಿ ಚಿಂತನೆ ಸಂವಾದ ಕಾರ್ಯಕ್ರಮವು ವೇದಿಕೆಯಾಯಿತು.

ಎನ್‌. ಮನು ಚಕ್ರವರ್ತಿ ಮತ್ತು ಚಂದನ್‌ ಗೌಡ ಸಂಪಾದಿಸಿದ ‘ದಿ ಎಸ್ಸೆನ್ಸಿಯಲ್‌ ಯು.ಆರ್‌. ಅನಂತಮೂರ್ತಿ’ ಕೃತಿಯ ಹಿನ್ನೆಲೆಯಲ್ಲಿ ಶನಿವಾರ ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ ಈ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

‘ಕಾದಂಬರಿ’, ‘ಸಣ್ಣ ಕಥೆಗಳು’, ‘ಕವನಗಳು’, ‘ಪ್ರಬಂಧ ಮತ್ತು ಭಾಷಣಗಳು’, ‘ನೆನಪುಗಳು’ ಈ ಐದು ವಿಭಾಗಗಳನ್ನು ಒಳಗೊಂಡು ‘ದಿ ಎಸ್ಸೆನ್ಸಿಯಲ್‌ ಯು.ಆರ್‌. ಅನಂತಮೂರ್ತಿ’ ಕೃತಿ ಸಂಪಾದಿಸಲಾಗಿದೆ. ಕೃತಿಯ ಹೆಸರು ಮತ್ತು ಆಯ್ಕೆ ಮಾಡಿಕೊಂಡ ವಿಷಯಗಳ ಬಗ್ಗೆ ಮೆಚ್ಚುಗೆ ಮತ್ತು ಪ್ರಶ್ನೆಗಳು ವೇದಿಕೆಯಲ್ಲಿ ಮೂಡಿದವು.

‘ಅನಂತಮೂರ್ತಿ ಅವರು ಕಾದಂಬರಿಕಾರ ನಿಜ. ಆದರೆ, ಅವೆಲ್ಲವನ್ನು ಮೀರಿದ್ದು ಅವರ ಚಿಂತನೆಯ ಬರಹ ಮತ್ತು ಭಾಷಣಗಳು. ಅವು ರೂಪಕಗಳನ್ನು ಕಥೆ, ಕಾದಂಬರಿ, ಕವನಗಳಲ್ಲಿ ಮಾತ್ರ ಬಳಸಿದ್ದಲ್ಲ. ಪ್ರಬಂಧಗಳಲ್ಲಿಯೂ ಬಳಸಿದ್ದಾರೆ. ರಾಜಕೀಯ ಬದ್ಧ ಕಥೆಗಾರ’ ಎಂದು ಉಪನ್ಯಾಸಕ ಎನ್‌.ಎಸ್‌. ಗುಂಡೂರ ಬಣ್ಣಿಸಿದರು.

‘ಪ್ರಸ್ತುತ ವಿದ್ಯಮಾನಗಳಿಗೆ ತಕ್ಷಣ ನೇರವಾಗಿ ಪ್ರತಿಕ್ರಿಯಿಸುವ ಗುಣ ಅನಂತಮೂರ್ತಿಯವರದ್ದಾಗಿತ್ತು. ಸ್ಥಳೀಯ ಭಾಷೆ ಕನ್ನಡಕ್ಕೆ ಪಶ್ಚಿಮದ ಜತೆಗೆ ಸಂಬಂಧ ಬೆಸೆಯಲು ಪ್ರಯತ್ನಿಸಿದ್ದರು’ ಎಂದು ಲೇಖಕಿ ಅಂಜುಂ ಹಸನ್‌ ನೆನಪು ಮಾಡಿಕೊಂಡರು.

‘ಅನಂತಮೂರ್ತಿ ಆಳಕ್ಕೆ ಹೋಗಿ ಪಾಂಡಿತ್ಯದಿಂದ ಬರೆದವರಲ್ಲ. ಹಾಗೆ ಬರೆದಿದ್ದರೆ ಅದು ಯಾವುದೋ ನಾಲ್ಕು ಪಂಡಿತರ ನಡುವೆ ಚರ್ಚೆಗೆ ಒಳಗಾಗುತ್ತಿತ್ತು. ಅನಂತಮೂರ್ತಿ ಅನುಭವದಿಂದ ಮತ್ತು ಅನುಭವಕ್ಕೆ ಬೆಲೆ ಕಟ್ಟುವ ರೀತಿಯಲ್ಲಿ ಬರೆದರು. ಜನಸಾಮಾನ್ಯರಿಗೂ ಮುಟ್ಟುವಂತೆ ಬರೆದರು’ ಎಂದು ಸಾಹಿತ್ಯ ವಿಮರ್ಶಕ ಎಚ್‌.ಎಸ್‌. ರಾಘವೇಂದ್ರ ರಾವ್‌ ತಿಳಿಸಿದರು.

‘ರಾಜಕೀಯ, ಧರ್ಮ, ಪರಿಸರ, ಅಭಿವೃದ್ಧಿ, ಕೋಮುವಾದಗಳ ಬಗ್ಗೆ ಎಚ್ಚರಿಸಿದ, ಅದಕ್ಕಾಗಿ ಜೀವನಪೂರ್ತಿ ಒದ್ದಾಡಿದ ಅನಂತಮೂರ್ತಿಯನ್ನು ಹಿಡಿದಿಡುವುದು ಸುಲಭದ ಕೆಲಸವಲ್ಲ. ಎಲ್ಲರಿಗೂ ಕಾಣದ್ದನ್ನು ಕಾಣಿಸುವ ಕೆಲಸವನ್ನು ಅನಂತಮೂರ್ತಿ ಮಾಡಿದ್ದರು’ ಎಂದು ಉಪನ್ಯಾಸಕ ನಿತ್ಯಾನಂದ ಬಿ. ಶೆಟ್ಟಿ ಸ್ಮರಿಸಿದರು.

ಉಪನ್ಯಾಸಕರು ಎತ್ತಿದ ಪ್ರಶ್ನೆಗಳಿಗೆ ಕೃತಿ ಸಂಪಾದಕರಾದ ಎನ್‌. ಮನು ಚಕ್ರವರ್ತಿ ಮತ್ತು ಚಂದನ್‌ ಗೌಡ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT