ಭಾನುವಾರ, ಜನವರಿ 19, 2020
23 °C
ಟಿಕೆಟ್‌ರಹಿತ ಪ್ರಯಾಣಕ್ಕೆ ಬಿತ್ತು ಭಾರಿ ದಂಡ

ಟಿಕೆಟ್ ನೋಡ್ಕೊಳಿ | ಟಿಕೆಟ್ ರಹಿತ ಪ್ರಯಾಣ ಒಂದೇ ದಿನ 16.22 ಲಕ್ಷ ದಂಡ ವಸೂಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಟಿಕೆಟ್‌ ಇಲ್ಲದೇ ಪ್ರಯಾಣಿಸಿದವರಿಂದ ಹಾಗೂ ಪ್ಲ್ಯಾಟ್‌ಫಾರಂ ಟಿಕೆಟ್‌ ಪಡೆಯದೆ ನಿಲ್ದಾಣ ಪ್ರವೇಶಿಸಿದವರಿಂದ ಬೆಂಗಳೂರು ವಿಭಾಗದ ರೈಲ್ವೆ ಅಧಿಕಾರಿಗಳು ಕೇವಲ 24 ಗಂಟೆಗಳಲ್ಲಿ ಬರೋಬ್ಬರಿ ₹ 16.22 ಲಕ್ಷ ದಂಡವನ್ನು ವಸೂಲಿ ಮಾಡಿದ್ದಾರೆ.

ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಎ.ಎನ್‌.ಕೃಷ್ಣ ರೆಡ್ಡಿ ನೇತೃತ್ವದಲ್ಲಿ ಸೋಮವಾರ ಸಂಜೆ 4ಗಂಟೆಯಿಂದ ಮಂಗಳವಾರ ಸಂಜೆ 4 ಗಂಟೆವರೆಗೆ ಟಿಕೆಟ್‌ ತಪಾಸಣೆ ಅಭಿಯಾನ ನಡೆಯಿತು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಹಾಗೂ ಯಶವಂತಪುರ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ಟಿಕೆಟ್‌ ತಪಾಸಣೆ ನಡೆಸಲಾಯಿತು. ಈ ಅಭಿಯಾನಕ್ಕೆ ನಿತ್ಯ ತಪಾಸಣೆ ನಡೆಸುವವರಲ್ಲದೇ ಹೆಚ್ಚುವರಿ ಸಿಬ್ಬಂದಿಯನ್ನು ಒಳಗೊಂಡ ತಂಡಗಳನ್ನು ನಿಯೋಜಿಸಲಾಗಿತ್ತು.

ಬೆಂಗಳೂರು ವಿಭಾಗದಲ್ಲಿ ಈ ಹಿಂದೆಯೂ ಇದೇ ತೆರದಲ್ಲಿ ಟಿಕೆಟ್‌ ತಪಾಸಣೆ ಅಭಿಯಾನ ನಡೆಸಲಾಗಿತ್ತು. ಆದರೆ, ಇಷ್ಟೊಂದು ಪ್ರಮಾಣದಲ್ಲಿ ಟಿಕೆಟ್‌ ರಹಿತ ಪ್ರಯಾಣಿಕರು ಸಿಕ್ಕಿಬಿದ್ದಿರಲಿಲ್ಲ. ಇಷ್ಟು ಪ್ರಮಾಣದಲ್ಲಿ ದಂಡ ವಸೂಲಿ ಮಾಡಿದ್ದು ಇದೇ ಮೊದಲು ಎಂದು ರೈಲ್ವೆ ಇಲಾಖೆಯ ಪ್ರಕಟಣೆ ತಿಳಿಸಿದೆ.

ಪ್ಲಾಟ್‌ಫಾರಂ ಟಿಕೆಟ್‌ ಇಲ್ಲದೇ ರೈಲು ನಿಲ್ದಾಣ ಪ್ರವೇಶಿಸಿದವರಿಗೆ ₹ 250 ದಂಡ ಹಾಕಲಾಗುತ್ತದೆ ಮತ್ತು ಅವರಿಂದ ಪ್ಲಾಟ್‌ಫಾರಂ ಟಿಕೆಟ್‌ ಮೊತ್ತವನ್ನು (₹ 10 ) ಸೇರಿಸಿ ದಂಡ ವಸೂಲಿ ಮಾಡಲಾಗುತ್ತದೆ. ಟಿಕೆಟ್‌ ಇಲ್ಲದೆಯೇ ರೈಲಿನಲ್ಲಿ ಪ್ರಯಾಣಿಸಿದರೆ, ಕನಿಷ್ಠ ₹ 250 ದಂಡ ಹಾಗೂ ಪ್ರಯಾಣದ ದೂರಕ್ಕೆ ಅನುಗುಣವಾಗಿ ಹೆಚ್ಚುವರಿ ದಂಡ ವಸೂಲಿ  ಮಾಡಲಾಗುತ್ತದೆ ಎಂದು ಬೆಂಗಳೂರು ವಿಭಾಗದ ಸಾರ್ವಜನಿಕ ಸಂಪರ್ಕಾಧಿಕಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಅಭಿಯಾನದ ಬಗ್ಗೆ ಕೆಲವು ಪ್ರಯಾಣಿಕರು ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ. ‌ಅಭಿಯಾನದ ವೇಳೆ ಅಧಿಕಾರಿಗಳು ಪ್ರಯಾಣಿಕರ ಜೊತೆ ಸೌಜನ್ಯದಿಂದ ವರ್ತಿಸಿಲ್ಲ ಎಂದೂ ಕೆಲವರು ದೂರಿದ್ದಾರೆ.

‘ತರಾತುರಿಯಲ್ಲಿ ಪ್ಲಾಟ್‌ಫಾರಂ ಟಿಕೆಟ್‌ ಖರೀದಿಸದೇ ನಿಲ್ದಾಣ ಪ್ರವೇಶಿಸಿದ್ದು ನಿಜ. ನಾವು ಅದಕ್ಕೆ ದಂಡ ಕಟ್ಟಿದ್ದೇವೆ. ಕೆಲವು ಸಿಬ್ಬಂದಿ ಬಾಯಿಗೆ ಬಂದಂತೆ ದಂಡ ಕೇಳುತ್ತಿದ್ದರು. ನಿಗದಿತ ಮೊತ್ತಕ್ಕಿಂತ ಹೆಚ್ಚು ಹಣ ನೀಡುವಂತೆ ಒತ್ತಾಯಿಸಿದ್ದರು. ನಾವು ಪ್ರತಿರೋಧ ವ್ಯಕ್ತಪಡಿಸಿದ ಬಳಿಕ ದಂಡದ ಮೊತ್ತ ಕಡಿಮೆ ಮಾಡಿದರು’ ಎಂದು ಮಹಿಳಾ ಪ್ರಯಣಿಕರೊಬ್ಬರು ದೂರಿದರು.

ಅಂಕಿ ಅಂಶ

2,841 - ಟಿಕೆಟ್ ಇಲ್ಲದ ಕಾರಣಕ್ಕೆ ದಂಡ ತೆತ್ತವರು

113 -ಅಭಿಯಾನದಲ್ಲಿ ಭಾಗವಹಿಸಿದ ರೈಲ್ವೆ ಇಲಾಖೆಯ ವಾಣಿಜ್ಯ ಸಿಬ್ಬಂದಿ

10 -ಭಾಗವಹಿಸಿದ ರೈಲ್ವೆ ರಕ್ಷಣಾ ಪಡೆಯ ಸಿಬ್ಬಂದಿ 

4 -ಅಧಿಕಾರಿಗಳು ಮೇಲ್ವಿಚಾರಣೆ ವಹಿಸಿದರು

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು