ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಂಟಿಸಿಗೆ 1 ಸಾವಿರ ಹೊರ ಗುತ್ತಿಗೆ ಚಾಲಕರು: ಟೆಂಡರ್ ಪ್ರಕ್ರಿಯೆ ಆರಂಭ

ನೌಕರರ ಸಂಘಟನೆಗಳ ಆಕ್ಷೇಪ
Last Updated 10 ಜನವರಿ 2023, 15:21 IST
ಅಕ್ಷರ ಗಾತ್ರ

ಬೆಂಗಳೂರು: ಚಾಲಕರ ಕೊರತೆ ಎದುರಿಸುತ್ತಿರುವ ಬಿಎಂಟಿಸಿ ಈಗ ಹೊರಗುತ್ತಿಗೆ ಆಧಾರದಲ್ಲಿ ಒಂದು ಸಾವಿರ ಚಾಲಕರನ್ನು ನೇಮಿಸಿಕೊಳ್ಳಲು ಮುಂದಾಗಿದ್ದು, ಈ ಸಂಬಂಧ ಟೆಂಡರ್ ಪ್ರಕ್ರಿಯೆ ಆರಂಭಿಸಿದೆ.

ಚಾಲಕರನ್ನು ಒದಗಿಸುವ ಏಜೆನ್ಸಿಗಳನ್ನು ಆಹ್ವಾನಿಸಿ ಟೆಂಡರ್ ಕರೆದಿದೆ. ಕನಿಷ್ಠ ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆ ಪಡೆದವರು, ಚಾಲ್ತಿಯಲ್ಲಿರುವ ಚಾಲಕ ಬ್ಯಾಡ್ಜ್ ಸಹಿತ ಭಾರಿ ವಾಹನ ಚಾಲನೆಯಲ್ಲಿ ಎರಡು ವರ್ಷಗಳ ಅನುಭವ ಇರುವವರನ್ನು ನೇಮಿಸಿಕೊಳ್ಳಬೇಕು ಎಂದು ಬಿಎಂಟಿಸಿ ಟೆಂಡರ್‌ನಲ್ಲಿ ಉಲ್ಲೇಖಿಸಿದೆ.

ಆಯ್ಕೆ ಮಾಡಿಕೊಳ್ಳುವ ಚಾಲಕರ ವಯಸ್ಸು 50 ವರ್ಷ ಮೀರಿರಬಾರದು. ಗುತ್ತಿಗೆ ಅವಧಿ 11 ತಿಂಗಳಾಗಿದ್ದು, 30 ದಿನ ಮುಂಚಿತವಾಗಿ ನೋಟಿಸ್ ನೀಡಿ ಗುತ್ತಿಗೆ ರದ್ದುಪಡಿಸುವ ಅಧಿಕಾರ ಬಿಎಂಟಿಸಿಗೆ ಇದೆ ಎಂದು ತಿಳಿಸಿದೆ.

ಬಿಎಂಟಿಸಿ ಐದು ವಲಯಗಳಿಗೆ ತಲಾ 200 ಚಾಲಕರನ್ನು ಒದಗಿಸಬೇಕು. ವಾರದ ರಜೆ, ಪಿಎಫ್‌, ಇಎಸ್‌ಐ ಸೇರಿ ಪ್ರತಿ ಚಾಲಕರಿಗೆ ₹24,200 ವೇತನ ನೀಡಲಾಗುವುದು. ಚಾಲಕರನ್ನು ಒದಗಿಸುವ ಸಂಸ್ಥೆಯು ಇದರ ಜತೆಗೆ ಸೇವಾ ಶುಲ್ಕವನ್ನು ನಮೂದಿಸಬಹುದು. ಚಾಲಕರಿಗೆ ಪ್ರತಿ ತಿಂಗಳು 5ನೇ ತಾರೀಖಿನೊಳಗೆ ಸಂಬಳ ಪಾವತಿಸಬೇಕು.

ಒಪ್ಪಂದದಂತೆ ಚಾಲಕರನ್ನು ಒದಗಿಸಲು ಏಜೆನ್ಸಿ ವಿಫಲವಾದರೆ, ಪ್ರತಿದಿನ ಒಬ್ಬ ಚಾಲಕನಿಗೆ ಗೈರಿಗೆ ₹1 ಸಾವಿರದಂತೆ(ಶೇ 18ರಷ್ಟು ಜಿಎಸ್‌ಟಿ ಹೊರತುಪಡಿಸಿ) ದಂಡವನ್ನು ಬಿಎಂಟಿಸಿಗೆ ಪಾವತಿಸಬೇಕಾಗುತ್ತದೆ. ದಂಡದ ಮೊತ್ತವನ್ನು ಸೇವಾ ಶುಲ್ಕದಲ್ಲೇ ಕಡಿತ ಮಾಡಿಕೊಳ್ಳಲಾಗುತ್ತದೆ ಎಂಬ ಷರತ್ತನ್ನೂ ವಿಧಿಸಿದೆ.

ಗುತ್ತಿಗೆ ಪಡೆದ ಏಜೆನ್ಸಿಯು ಕಾರ್ಯಾದೇಶ ನೀಡಿದ 15 ದಿನಗಳಲ್ಲಿ ಚಾಲಕರನ್ನು ಒದಗಿಸಬೇಕು. ಚಾಲಕರ ಕೌಶಲವನ್ನು ಬಿಎಂಟಿಸಿ ಕೂಡ ಪರಿಶೀಲಿಸಲಿದ್ದು, ಅದರಲ್ಲಿ ಅರ್ಹತೆ ಪಡೆದವರನ್ನಷ್ಟೆ ನಿಯೋಜನೆ ಮಾಡಿಕೊಳ್ಳಲಾಗುವುದು. ಯಾವುದೇ ಸಾರಿಗೆ ಸಂಸ್ಥೆಯಿಂದ ವಜಾಗೊಂಡ ಸಿಬ್ಬಂದಿಯನ್ನು ನೇಮಿಸಿಕೊಳ್ಳಬಾರದು ಎಂದು ತಿಳಿಸಿದೆ.

ಗುತ್ತಿಗೆ ಆಧಾರದಲ್ಲಿ ಚಾಲಕರನ್ನು ನೇಮಿಸಿಕೊಳ್ಳಲು ಸಾರಿಗೆ ನೌಕರರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಖಾಲಿ ಹುದ್ದೆಗಳಿಗೆ ಕಾಯಂ ನೌಕರರನ್ನು ನೇಮಿಸಿಕೊಳ್ಳಬೇಕು ಎಂದು ಒತ್ತಾಯಿಸಿವೆ.

‘ಮತ್ತೊಂದು ಸಮಸ್ಯೆಗೆ ರಹದಾರಿ’
‘ಚಾಲಕರ ಕೊರತೆ ಸಮಸ್ಯೆಯನ್ನು ತಾತ್ಕಾಲಿಕವಾಗಿ ನಿವಾರಿಸಿಕೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ. ಆದರೆ, ದೂರದೃಷ್ಟಿಯಿಂದ ಯೋಚಿಸದರೆ ಬಿಎಂಟಿಸಿ ಮೇಲೆ ಮತ್ತೊಂದು ಸಮಸ್ಯೆಯನ್ನು ಹೇರಿದಂತೆ ಆಗಲಿದೆ’ ಎಂದು ಕೆಎಸ್‌ಆರ್‌ಟಿಸಿ ಸ್ಟಾಫ್ ಅ್ಯಂಡ್ ವರ್ಕರ್ಸ್ ಫೆಡರೇಷನ್ ಅಧ್ಯಕ್ಷ ಎಚ್‌.ವಿ.ಅನಂತ ಸುಬ್ಬರಾವ್ ಹೇಳಿದರು.

ನಾಲ್ಕು ಸಂಸ್ಥೆಗಳಲ್ಲಿ 16,000 ಹುದ್ದೆಗಳು ಖಾಲಿ ಇದ್ದು, ಬಸ್‌ಗಳು ಬರುತ್ತಿಲ್ಲ ಎಂಬ ದೂರು ಎಲ್ಲೆಡೆ ಇದೆ. ಈ ಸಮಸ್ಯೆಗೆ ಹೊರಗುತ್ತಿಗೆಯಲ್ಲಿ ಚಾಲಕರನ್ನು ನೇಮಸಿಕೊಳ್ಳುವುದು ಪರಿಹಾರವಲ್ಲ ಎಂದರು.

ಇವು ಹೊಸದಾಗಿ ಸೃಜನೆಯಾದ ಹುದ್ದೆಗಳಲ್ಲ. ನಿವೃತ್ತಿ ಮತ್ತಿತರ ಕಾರಣಗಳಿಂದ ಮಂಜೂರಾದ ಹುದ್ದೆಗಳು ಖಾಲಿ ಇವೆ. ಅವುಗಳನ್ನು ಭರ್ತಿ ಮಾಡದೆ ಹೊರಗುತ್ತಿಗೆ ಹಾದಿ ಹಿಡಿದರೆ ದೂರದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ. ಕಾಯಂ ನೌಕರರ ನೇಮಕಕ್ಕೆ ಒಂದು ತಿಂಗಳ ಕಾಲಾವಕಾಶ ಸಾಕಾಗುತ್ತದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT