ಶನಿವಾರ, ಜನವರಿ 28, 2023
23 °C

ವಿಧಾನಸೌಧದಲ್ಲಿ ₹ 10 ಲಕ್ಷ ಜಪ್ತಿ: ಹಣದ ಮಾಹಿತಿ ಬಾಯ್ಬಿಡದ ಜೆ. ಜಗದೀಶ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಧಾನಸೌಧಕ್ಕೆ ಬಂದಿದ್ದ ಲೋಕೋಪಯೋಗಿ ಇಲಾಖೆಯ ಕಿರಿಯ ಎಂಜಿನಿಯರ್ ಜೆ.ಜಗದೀಶ್ ಬ್ಯಾಗ್‌ ನಲ್ಲಿ ₹ 10 ಲಕ್ಷ ಪತ್ತೆಯಾಗಿದ್ದು, ಪ್ರಕರಣ ಸಂಬಂಧ ಅವರನ್ನು ವಿಧಾನಸೌಧ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.

‘ಮಂಡ್ಯದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಜಗದೀಶ್, ಹಣವಿದ್ದ ಬ್ಯಾಗ್‌ ಸಮೇತ ಬುಧವಾರ ಸಂಜೆ 4.15ರ ಸುಮಾರಿಗೆ ವಿಧಾನಸೌಧ‌ದ ಒಳಗೆ ಹೋಗಲು ಪಶ್ಚಿಮ ಪ್ರವೇಶ ದ್ವಾರಕ್ಕೆ ಬಂದಿದ್ದರು. ಅವರನ್ನು ತಡೆದಿದ್ದ ಭದ್ರತಾ ಸಿಬ್ಬಂದಿ, ಬ್ಯಾಗ್ ಪರಿಶೀಲಿಸಿದಾಗ ಹಣ ಪತ್ತೆಯಾಗಿದೆ’ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದ ಭದ್ರತಾ ಸಿಬ್ಬಂದಿ, ಹಣದ ಸಮೇತ ಜಗದೀಶ್ ಅವರನ್ನು ವಿಧಾನಸೌಧ ಠಾಣೆ ಪೊಲೀಸರ ಸುಪರ್ದಿಗೆ ನೀಡಿದ್ದಾರೆ. ಯಾವುದೇ ದಾಖಲೆ ನೀಡದಿದ್ದರಿಂದ ಅಕ್ರಮವಾಗಿ ಹಣ ಸಾಗಿಸುತ್ತಿದ್ದ ಆರೋಪದಡಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಜಪ್ತಿ ಮಾಡಿದ ಹಣ ಯಾರಿಗೆ ಸೇರಿದ್ದು? ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದರು? ಎಂಬುದನ್ನು ತಿಳಿಯಲು ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗುವುದು’ ಎಂದು ಹೇಳಿದರು.

ನೋಟಿಸ್ ನೀಡಿ ವಿಚಾರಣೆ: ‘ಆರೋಪಿ ಜಗದೀಶ್ ಅವರನ್ನು ಬುಧವಾರ ಪ್ರಾಥಮಿಕ ವಿಚಾರಣೆ ನಡೆಸಲಾಗಿತ್ತು. ಪುನಃ ವಿಚಾರಣೆಗೆ ಬರುವಂತೆ ಹೇಳಿ ಬಿಟ್ಟು ಕಳುಹಿಸಲಾಗಿತ್ತು. ಗುರುವಾರ ಅವರು ವಿಚಾರಣೆಗೆ ಬಂದಿದ್ದರು. ಆದರೆ, ಹಣದ ಬಗ್ಗೆ ಯಾವುದೇ ಮಾಹಿತಿ ನೀಡಲಿಲ್ಲ. ತನಿಖೆಗೂ ಸಹಕರಿಸಲಿಲ್ಲ. ಹೀಗಾಗಿ, ಅವರನ್ನು ಬಂಧಿಸಲಾಗಿದೆ. ಶುಕ್ರವಾರ ನ್ಯಾಯಾಧೀಶರ ಎದುರು ಹಾಜರುಪಡಿಸಲಾಗುವುದು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ಸೇರಿದ್ದ ಹಣ’

‘ಸಹಾಯಕ ಎಂಜಿನಿಯರ್ ಜಗದೀಶ್ ಬಳಿ ಸಿಕ್ಕಿರುವ ಹಣ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರೊಬ್ಬರಿಗೆ ಸೇರಿದ್ದೆಂಬುದು ಸದ್ಯದ ತನಿಖೆಯಿಂದ ಗೊತ್ತಾಗಿದೆ. ಈ ಬಗ್ಗೆಯೂ ಜಗದೀಶ್ ಯಾವುದೇ ಮಾಹಿತಿ ನೀಡುತ್ತಿಲ್ಲ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ಗೋಡೆ ಮುಟ್ಟಿದರೆ ಕಾಂಚಾಣದ ಸದ್ದು: ಡಿಕೆಶಿ

‘ವಿಧಾನಸೌಧದಿಂದ ಹಿಡಿದು ಗ್ರಾಮ ಪಂಚಾಯಿತಿವರೆಗೂ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಗೋಡೆ ಮುಟ್ಟಿದರೆ ಸಾಕು, ಕಾಸು, ಕಾಸು ಎನ್ನುವ ಶಬ್ದ ಬರುತ್ತದೆ. ಯಾವುದೇ ಕಾಮಗಾರಿ ಬಿಲ್ ಪಾವತಿ ಆಗಬೇಕಾದರೆ ಕಮಿಷನ್ ನೀಡಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಆರೋಪಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ವಿಧಾನಸೌಧದ ಅಧಿಕಾರಿಗಳಿಂದ ಹಿಡಿದು ಮಂತ್ರಿಗಳವರೆಗೆ ಎಲ್ಲರಿಗೂ ಹಣ ನೀಡಬೇಕು. ಇಡೀ ದೇಶದಲ್ಲಿ ಕರ್ನಾಟಕದ್ದು ಅತ್ಯಂತ ಭ್ರಷ್ಟ ಸರ್ಕಾರವೆಂಬ ಕಳಂಕ ಬಂದಿದೆ’ ಎಂದರು. ‘ಆದರೆ, ಎಲ್ಲ ಪ್ರಕರಣಗಳನ್ನು ಸರ್ಕಾರ ಮುಚ್ಚಿಹಾಕುತ್ತಿದೆ. ಯಾವುದೇ ಪ್ರಕರಣವನ್ನು ಇ.ಡಿ.ಗಾಗಲಿ, ಬೇರೆ ತನಿಖೆಗಾಗಲಿ ವಹಿಸುವುದಿಲ್ಲ. ಮಂತ್ರಿಗಳು, ಶಾಸಕರ ಮೇಲೆ ಎಫ್ಐಆರ್ ದಾಖಲಾದರೂ ಅವುಗಳನ್ನು ವ್ಯವಸ್ಥಿತ ವಾಗಿ ಮುಚ್ಚಿ ಹಾಕಲಾಗುತ್ತಿದೆ. ಬೇರೆಯವರ ಮೇಲಾದರೆ ಎಫ್ಐಆರ್ ದಾಖಲಿಸಿ ಆರೋಪ ಪಟ್ಟಿ ಸಲ್ಲಿಸುತ್ತಾರೆ’ ಎಂದರು.

   ವಿಧಾನಸೌಧದಲ್ಲಿ ಅಕ್ರಮ ಹಣ ಪತ್ತೆಯಂಥ ಪ್ರಕರಣಗಳು ಬೇಕಾದಷ್ಟಿವೆ. ಈ ಸರ್ಕಾರವನ್ನು ಗುತ್ತಿಗೆದಾರರ ಸಂಘದವರು 40 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಕರೆಯಲು ಇದುವೇ ಕಾರಣ.

-ಸಿದ್ದರಾಮಯ್ಯ, ವಿಧಾನಸಭೆ ವಿರೋಧ ಪಕ್ಷದ ನಾಯಕ

  ಇಷ್ಟು ಭ್ರಷ್ಟಾಚಾರ ಹಿಂದೆಂದೂ ಕಂಡಿಲ್ಲ. ಬಹಳ ಸಚಿವರು, ಮುಖ್ಯಮಂತ್ರಿಗಳ ಜೊತೆ ಕೆಲಸ ಮಾಡಿದ್ದೇನೆ. ಆದರೆ, ಈಗ ಸುಳ್ಳು, ಭ್ರಷ್ಟಾಚಾರ, ಬಾಯಿಗೆ ಬಂದಂತೆ ಮಾತನಾಡುವುದು ಜಾಸ್ತಿಯಾಗಿದೆ.

-ಎಚ್‌. ವಿಶ್ವನಾಥ್, ವಿಧಾನ ಪರಿಷತ್ ಬಿಜೆಪಿ ಸದಸ್ಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು