ಮಂಗಳವಾರ, ನವೆಂಬರ್ 29, 2022
29 °C
ಸಂಜೆ ವೇಳೆಗೆ ಸಹಾಯವಾಣಿ ಕರೆ ಸೇವೆ ಪುನರಾರಂಭ

108 ಸಹಾಯವಾಣಿ: ಆಂಬುಲೆನ್ಸ್ ಸೇವೆ ವ್ಯತ್ಯಯ; ಸಂಜೆ ಪುನರಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯದ‌ ‘108’ ಸಹಾಯವಾಣಿಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಭಾನುವಾರ ವಿವಿಧೆಡೆ ಆಂಬುಲೆನ್ಸ್ ಸೇವೆಯಲ್ಲಿ ವ್ಯತ್ಯಯವಾಗಿ, ರೋಗಿಗಳು ಪರದಾಡಬೇಕಾಯಿತು. ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಐಡಿಹಳ್ಳಿ ಗ್ರಾಮ
ದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಜಯಮ್ಮ (65) ಎಂಬುವವರು ಸಕಾಲಕ್ಕೆ ಆಂಬುಲೆನ್ಸ್ ಬಾರದ ಕಾರಣ ಮನೆಯಲ್ಲೇ ಮೃತಪಟ್ಟರು.

108 ಆಂಬುಲೆನ್ಸ್‌ ಸೇವೆಯನ್ನು ಜಿವಿಕೆ– ಇಎಂಆರ್‌ಐ ಸಂಸ್ಥೆ ನಿರ್ವಹಿಸುತ್ತಿದೆ. ಮದರ್‌ ಬೋರ್ಡ್, ತಂತ್ರಾಂಶಹಾಗೂ ಸರ್ವರ್ ಸಮಸ್ಯೆ ಉಂಟಾಗಿತ್ತು. ಇದರಿಂದಾಗಿ, ದೂರವಾಣಿ ಕರೆಗಳ ಮೇಲ್ವಿಚಾರಣೆ ಸಿಬ್ಬಂದಿಗೆ ಸಮಸ್ಯೆಯಾಗಿ, ಆಂಬುಲೆನ್ಸ್ ಸೇವೆಯಲ್ಲಿ ವ್ಯತ್ಯಯವಾಯಿತು. ತುರ್ತು ಸಂದರ್ಭಕ್ಕಾಗಿ ಇಲಾಖೆ 112 ಸಂಖ್ಯೆಗೂ ಕರೆ ಮಾಡುವಂತೆ ಮನವಿ ಮಾಡಿಕೊಂ
ಡಿತ್ತು. ಇಷ್ಟಾಗಿಯೂ ಆಂಬುಲೆನ್ಸ್ ಸೇವೆ ಸಿಗದೆ, ಕೆಲವರು ಖಾಸಗಿ ವಾಹನಗಳನ್ನು ಅವಲಂಬಿಸಬೇಕಾಯಿತು. ಸಂಜೆ ವೇಳೆಗೆ ಸಮಸ್ಯೆ ನಿವಾರಿಸಿ, ಸಹಾಯವಾಣಿ ಕರೆ ಸೇವೆ ಪುನರಾರಂಭಿಸಲಾಯಿತು. 

ಸೇವೆ ವ್ಯತ್ಯಯದ ಬಗ್ಗೆ ಸ್ಪಷ್ಟನೆ ನೀಡಿದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ‘108 ಆಂಬುಲೆನ್ಸ್ ಸೇವೆ
ಗಳ ಸಹಾಯವಾಣಿಯಲ್ಲಿ ಕೆಲ ತಾಂತ್ರಿಕ ಸಮಸ್ಯೆಗಳು ಸೃಷ್ಟಿಯಾಗಿದ್ದವು. 15 ವರ್ಷಗಳಷ್ಟು ಹಳೆಯ ತಾಂತ್ರಿಕ ವ್ಯವಸ್ಥೆ ಇದಾಗಿರುವುದರಿಂದ ಸರ್ವರ್‌ಗೆವೈರಸ್‌ ದಾಳಿ ಆಗಿತ್ತು. ಜಿವಿಕೆ– ಇಎಂಆರ್‌ಐ ಸಂಸ್ಥೆ ಸಮಸ್ಯೆ ಬಗೆಹರಿಸಿದೆ’ ಎಂದು ಹೇಳಿದರು.

‘ಈ ಮೊದಲು 108 ಸಹಾಯವಾಣಿ ಕರೆಗಳನ್ನು ಸ್ವಯಂಚಾಲಿತವಾಗಿ ಸ್ವೀಕರಿಸಿ, 2 ನಿಮಿಷಗಳಲ್ಲಿ ಆಂಬುಲೆನ್ಸ್ ವಾಹನಗಳ ಹಂಚಿಕೆ ಕಾರ್ಯ ಮಾಡಲಾಗುತ್ತಿತ್ತು. ತಾಂತ್ರಿಕ ಸಮಸ್ಯೆಯಿಂದ ಈ ಪ್ರಕ್ರಿಯೆಗೆ 6 ರಿಂದ 7 ನಿಮಿಷಗಳ ಕಾಲ ತೆಗೆದುಕೊಳ್ಳಲಾಯಿತು. ಪ್ರತಿದಿನ 7 ರಿಂದ 8 ಸಾವಿರ ಕರೆಗಳನ್ನು ಸ್ವೀಕರಿಸಲಾಗುತ್ತಿತ್ತು. ಆ ಸಂಖ್ಯೆ 2 ರಿಂದ 2.5 ಸಾವಿರಕ್ಕೆ ಇಳಿಕೆಯಾಯಿತು. ಆಂಬುಲೆನ್ಸ್‌
ನಲ್ಲಿ ಕಾರ್ಯ ನಿರ್ವಹಿಸುತ್ತಿರುವವರುತಮ್ಮ ಮೊಬೈಲ್ ಸಂಖ್ಯೆಗಳಿಗೆ ಕರೆ ಬಂದರೂ ಸ್ವೀಕರಿಸಿ, ಅಗತ್ಯ ಸೇವೆಗಳನ್ನು ನೀಡುವಂತೆ ಸೂಚಿಸಲಾಗಿದೆ’ ಎಂದು ತಿಳಿಸಿದರು. 

ಹೆಚ್ಚಿನ ಸಿಬ್ಬಂದಿ: ‘ತುರ್ತು ಸೇವೆ ಒದಗಿಸುವ 112 ಸಹಾಯವಾಣಿಯಲ್ಲಿ 2-3 ಸಿಬ್ಬಂದಿ ಇರುತ್ತಿದ್ದರು. ಆ ಸಂಖ್ಯೆಯನ್ನು 7-8ಕ್ಕೆ ಹೆಚ್ಚಿಸಲು ಸೂಚಿಸಲಾಗಿದೆ. 104 ಸಹಾಯವಾಣಿಯನ್ನೂ ಬಳಸಿಕೊಂಡು, 108 ಸಹಾಯವಾಣಿ ಮೇಲಿನ ಒತ್ತಡ ಕಡಿಮೆ ಮಾಡಲಾಯಿತು’ ಎಂದು ಸುಧಾಕರ್ ಹೇಳಿದರು. 

ಸೇವೆ ಪುನರಾರಂಭ: ಇಲಾಖೆ ಆಯುಕ್ತ ಡಿ. ರಂದೀಪ್, ‘ಕರೆ ಸ್ವೀಕಾರ ಸೇವೆ ಪುನರಾರಂಭಗೊಂಡಿದೆ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ  ತುರ್ತು ಸಂದರ್ಭದಲ್ಲಿ ಸಂಪರ್ಕ ಸಾಧಿಸಲು ಜಿಲ್ಲಾ ಆರೋಗ್ಯಾಧಿಕಾರಿಗಳು ಪರ್ಯಾಯದೂರವಾಣಿ ಸಂಖ್ಯೆಯನ್ನೂ ಜನರಿಗೆ ಒದಗಿಸುತ್ತಿದ್ದಾರೆ’ ಎಂದು ಟ್ವೀಟ್ ಮಾಡಿದ್ದಾರೆ.  ಇದಕ್ಕೆ ಮೊದಲು, ಮೈಸೂರಿನಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಮದರ್ ಬೋರ್ಡ್‌ನಲ್ಲಿ ತಾಂತ್ರಿಕತೊಡಕಾಗಿದ್ದು, ಆರೋಗ್ಯ ಸಚಿವರೊಂದಿಗೆ ಚರ್ಚಿಸಿದ್ದೇನೆ. ಶೀಘ್ರವೇ ಪರಿಹರಿಸಲಾಗುತ್ತದೆ’ ಎಂದು ಹೇಳಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು