ಜುಲೈನಲ್ಲಿ 1.15 ಕೋಟಿ ಮಂದಿ ಪ್ರಯಾಣ

7

ಜುಲೈನಲ್ಲಿ 1.15 ಕೋಟಿ ಮಂದಿ ಪ್ರಯಾಣ

Published:
Updated:

ಬೆಂಗಳೂರು: ‘ನಮ್ಮ ಮೆಟ್ರೊ’ ಮೊದಲ ಹಂತದಲ್ಲಿ ಪೂರ್ಣ ಪ್ರಮಾಣದಲ್ಲಿ ಸಂಚಾರ ಆರಂಭವಾದ ಬಳಿಕ ಪ್ರಯಾಣಿಕರ ಸಂಖ್ಯೆ ಪ್ರತಿ ತಿಂಗಳು ಹೆಚ್ಚಳ ಕಾಣುತ್ತಿದೆ. ಜುಲೈ ತಿಂಗಳಲ್ಲಿ ಮೊದಲ ಬಾರಿ ಪ್ರಯಾಣಿಕರ ಸಂಖ್ಯೆ 1.15 ಕೋಟಿ ತಲುಪಿದೆ.

‘ಜುಲೈ ತಿಂಗಳಿನಲ್ಲಿ ಒಟ್ಟು 1.15 ಕೋಟಿ ಮಂದಿ ಮೆಟ್ರೊದಲ್ಲಿ ಪ್ರಯಾಣಿಸಿದ್ದಾರೆ’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಕಾರ್ಯಾಚರಣೆ ಮತ್ತು ನಿರ್ವಹಣೆ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಶಂಕರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆರು ಬೋಗಿಗಳ ರೈಲು ಸೇವೆಯನ್ನು ಆರಂಭಿಸಿದ್ದರಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ ಎನ್ನಲಾಗದು. ಪೂರ್ವ ಪಶ್ಚಿಮ ಕಾರಿಡಾರ್‌ನಲ್ಲಿ ದಟ್ಟಣೆ ಅವಧಿಯಲ್ಲಿ ಇನ್ನಷ್ಟು ಆರು ಬೋಗಿಗಳ ರೈಲು ಸೇವೆ ಆರಂಭಿಸುವ ಚಿಂತನೆ ಇದೆ. ನಮಗೆ ಬಿಇಎಂಎಲ್‌ ಸಂಸ್ಥೆಯಿಂದ ಬೋಗಿಗಳು ಪೂರೈಕೆ ಆಗುತ್ತಿದ್ದಂತೆಯೇ ಇನ್ನಷ್ಟು ರೈಲುಗಳಲ್ಲಿ ಬೋಗಿಗಳ ಸಂಖ್ಯೆ ಹೆಚ್ಚಿಸುತ್ತೇವೆ’ ಎಂದು ಅವರು ತಿಳಿಸಿದರು.

ಕೆಲವು ನಿಲ್ದಾಣಗಳಲ್ಲಿ ಆಸನಗಳ ಕೊರತೆ ಇರುವ ಕುರಿತು ಪ್ರತಿಕ್ರಿಯಿಸಿದ ಅವರು, ‘ಇದೂ ಗಮನಕ್ಕೆ ಬಂದಿದೆ. ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಉತ್ತಮ ಸೇವೆ ಒದಗಿಸಲು ನಾವು ಬದ್ಧ. ರೈಲುಗಳಲ್ಲಿ ದಟ್ಟಣೆಯಿಂದಾಗಿ ಪ್ರಯಾಣಿಕರು ಎದುರಿಸುತ್ತಿರುವ ಸಮಸ್ಯೆ ಬಗೆಹರಿಸುವುದು ನಮ್ಮ ಆದ್ಯತೆ. ಈ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಿದ್ದೇವೆ’ ಎಂದರು.

‘94 ಸಾವಿರ ಸ್ಮಾರ್ಟ್‌ಕಾರ್ಡ್‌ ಮಾರಾಟ’

ನಿಗಮವು ಸ್ಮಾರ್ಟ್‌ಕಾರ್ಡ್ ಮಾರಾಟಕ್ಕೆ ಜುಲೈ ತಿಂಗಳಲ್ಲಿ ವಿಶೇಷ ಅಭಿಯಾನ ಆರಂಭಿಸಿತ್ತು. ಇದರ ಪರಿಣಾಮ ಕಾರ್ಡ್‌ ಮಾರಾಟ ದುಪ್ಪಟ್ಟಾಗಿದೆ.

‘ನಗದುರಹಿತ ಪ್ರಯಾಣ ಉತ್ತೇಜಿಸುವ ನಮ್ಮ ಪ್ರಯತ್ನ ಫಲ ನೀಡಿದೆ. ಜುಲೈ ತಿಂಗಳಲ್ಲಿ 94 ಸಾವಿರ ಸ್ಮಾರ್ಟ್‌ಕಾರ್ಡ್‌ಗಳು ಮಾರಾಟವಾಗಿವೆ. ಜೂನ್‌ಗೆ ಹೋಲಿಸಿದರೆ ಜುಲೈ ತಿಂಗಳಿನಲ್ಲಿ ಸ್ಮಾರ್ಟ್‌ಕಾರ್ಡ್‌ ಬಳಸಿದವರ ಸಂಖ್ಯೆ 6.88 ಲಕ್ಷ ಹೆಚ್ಚಳವಾಗಿದೆ. ಅದರಿಂದ ಬರುವ ವರಮಾನದ ಪಾಲು ಶೇ 4ರಷ್ಟು ಹೆಚ್ಚಾಗಿದೆ. ಜೂನ್‌ಗೆ ಹೋಲಿಸಿದರೆ ಟೋಕನ್‌ ಮಾರಾಟ ಜುಲೈನಲ್ಲಿ 2.46 ಲಕ್ಷದಷ್ಟು ಕಡಿಮೆ ಆಗಿದೆ’ ಎಂದು ಶಂಕರ್‌ ತಿಳಿಸಿದರು.

ಬರಹ ಇಷ್ಟವಾಯಿತೆ?

 • 11

  Happy
 • 1

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !