ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಹಾಂತರ ದ್ವಾರದ 12 ಜ್ಯೋತಿರ್ಲಿಂಗಗಳ ದರ್ಶನ

Last Updated 10 ಮಾರ್ಚ್ 2021, 21:13 IST
ಅಕ್ಷರ ಗಾತ್ರ

ಕೆ.ಆರ್.ಪುರ: ಕೆ.ಆರ್.ಪುರದ ವೆಂಗಯ್ಯನಕೆರೆ ಬಳಿ ಇರುವ ಮಹಾಬಲೇಶ್ವರಸ್ವಾಮಿ ಮತ್ತು ಲಕ್ಷ್ಮಿ ನಾರಾಯಣಸ್ವಾಮಿ ದೇವಾಲಯದಲ್ಲಿ ಮಹಾ ಶಿವರಾತ್ರಿ ಮಹೋತ್ಸವ ಹಾಗೂ ಗುಹಾಂತರ ದ್ವಾರದ 12 ಜ್ಯೋತಿರ್ಲಿಂಗಗಳ ದಿವ್ಯ ದರ್ಶನವನ್ನು ಏರ್ಪಡಿಸಲಾಗಿದೆ.

ಕಳೆದ ಹತ್ತು ವರ್ಷಗಳಿಂದ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ಕೆ.ಆರ್.ಪುರ ಗ್ರಾಮಸ್ಥರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ದೇವಸ್ಥಾನಕ್ಕೆ ಸುಣ್ಣಬಣ್ಣಗಳನ್ನು ಬಳಿದು ವಿಶೇಷವಾಗಿ ಸಿಂಗರಿಸಿದ್ದಾರೆ. ಗುಹಾಂತರ ದ್ವಾರದ ಹನ್ನೆರಡು ಜ್ಯೋತಿರ್ಲಿಂಗಗಳನ್ನು ಪ್ರತಿಷ್ಠಾಪಿಸಿ ಆಕರ್ಷಕವಾಗಿ ಕಾಣಲು ಹಾಗೂ ಕಣ್ಮನ ಸೆಳೆಯಲು ಜಗಮಗಿಸುವ ವಿದ್ಯುತ್ ದ್ವೀಪದ ಅಲಂಕಾರ ಮಾಡಲಾಗಿದೆ.

ಗುರುವಾರ ಬೆಳಿಗ್ಗೆ 4.30 ಗಂಟೆಯಿಂದ ಮಹಾನ್ಯಾಸ ಪೂರ್ವಕ ರುದ್ರಾಭಿಷೇಕದೊಂದಿಗೆ ಮಹಾ ಶಿವರಾತ್ರಿ ಕಾರ್ಯಕ್ರಮ ಆರಂಭಗೊಳ್ಳುತ್ತದೆ. ಬೆಳಿಗ್ಗೆಯಿಂದಲೇ ಯಾಮದ ಪೂಜೆ, ಪಂಚಾಮೃತ ಅಭಿಷೇಕ, ಪುಷ್ಪಾರ್ಚನೆ, ಮಹಾಮಂಗಳರಾತಿ ಪ್ರಸಾದ ವಿನಿಯೋಗ ಮಾಡಲಾಗುತ್ತದೆ. ದೇವಸ್ಥಾನದ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಸೋಮನಾಥ ಜ್ಯೋತಿರ್ಲಿಂಗ, ತ್ರಯಂಭಕೇಶ್ವರ ಜ್ಯೋತಿರ್ಲಿಂಗ, ರಾಮೇಶ್ವರ ಜ್ಯೋತಿರ್ಲಿಂಗ, ವೃಷಭನಾಭ ಜ್ಯೋತಿರ್ಲಿಂಗ, ಭೀಮಾಶಂಕರ ಜ್ಯೋತಿರ್ಲಿಂಗ, ಕೇದಾರನಾಥ ಜ್ಯೋತಿರ್ಲಿಂಗ, ನಾಗೇಶ್ವರ ಜ್ಯೋತಿರ್ಲಿಂಗ, ಕಾಶೀ ವಿಶ್ವೇಶ್ವರ ಜ್ಯೋತಿರ್ಲಿಂಗ, ಗೃಷ್ಣೇಶ್ವರ ಜ್ಯೋತಿರ್ಲಿಂಗ, ಮಹಾಕಾಳೇಶ್ವರ ಜ್ಯೋತಿರ್ಲಿಂಗ, ಶ್ರೀಶೈಲ ಮಲ್ಲಿಕಾರ್ಜುನ ಜ್ಯೋತಿರ್ಲಿಂಗ, ಓಂಕಾರೇಶ್ವರ ಜ್ಯೋತಿರ್ಲಿಂಗಗಳನ್ನು ಪ್ರತಿಷ್ಠಾಪಿಸಲಾಗಿದೆ. ಕೆ.ಆರ್.ಪುರ ಸುತ್ತಮುತ್ತಲಿನ ಮಹದೇವಪುರ, ಆನಂದಪುರ, ಮೇಡಹಳ್ಳಿ, ಭಟ್ಟರಹಳ್ಳಿ, ಅವಲಹಳ್ಳಿ, ಬಸವನಪುರ, ದೇವಸಂದ್ರ, ರಾಮಮೂರ್ತಿನಗರ, ಐಟಿಐ ಕಾಲೋನಿ ಮರಗೊಂಡಹಳ್ಳಿ, ಟಿ.ಸಿ.ಪಾಳ್ಯ ಮುಂತಾದ ಕಡೆಗಳಿಂದ ಅಪಾರ ಭಕ್ತ ಸಮೂಹ ಇಲ್ಲಿಗೆ ಬಂದು ದೇವರ ಕೃಪೆಗೆ ಪಾತ್ರರಾಗಲಿದ್ದಾರೆ. ಭಕ್ತರಿಗೆ ಪ್ರಸಾದ ವಿನಿಯೋಗ ಇರುತ್ತದೆ.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ, ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಬಿಎಂಟಿಸಿ ಅಧ್ಯಕ್ಷ ಎನ್‌.ಎಸ್‌.ನಂದೀಶ್ ರೆಡ್ಡಿ, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸಚ್ಚಿದಾನಂದಮೂರ್ತಿ, ತಹಶೀಲ್ದಾರ್ ಅಜಿತ್ ಕುಮಾರ್, ಪಾಲಿಕೆಯ ಮಾಜಿ ಸದಸ್ಯ ಪಿ.ಜೆ.ಅಂತೋಣಿಸ್ವಾಮಿ ಪಾಲ್ಗೊಳ್ಳಲಿದ್ದಾರೆ.

ಮಹಾಭಲೇಶ್ವರ ದೇವಸ್ಥಾನದಲ್ಲಿ ಸಂಕ್ರಾಂತಿ, ಕಾರ್ತಿಕ ಮಾಸದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತದೆ. ಪ್ರತಿ ವರ್ಷದಂತೆ ಈ ವರ್ಷವೂ ಮಹಾ ಶಿವರಾತ್ರಿ ಪ್ರಯುಕ್ತ ಭಕ್ತರಿಗೆ ಜ್ಯೋರ್ತಿಲಿಂಗ ದರ್ಶನದ ವ್ಯವಸ್ಥೆ ಮಾಡಲಾಗಿದೆ. 25 ಸಾವಿರಕ್ಕೂ ಹೆಚ್ಚು ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ ಎಂದು ದೇವಸ್ಥಾನದ ಟ್ರಸ್ಟ್‌ ಅಧ್ಯಕ್ಷ ಕೆ.ಎನ್.ಶ್ರೀನಿವಾಸ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT