ಶುಕ್ರವಾರ, ಫೆಬ್ರವರಿ 26, 2021
18 °C
6,500 ಪ್ರಯಾಣಿಕರು ಇದೇ 11ರ ಬಳಿಕ ಬೆಂಗಳೂರಿನಲ್ಲಿ ಬಂದಿಳಿಯುವ ನಿರೀಕ್ಷೆ

ವಿದೇಶದಿಂದ ಮರಳುವವರಿಗೆ 14 ದಿನ ಪ್ರತ್ಯೇಕವಾಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್‌–19 ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ದೇಶದಲ್ಲಿ ಅಂತರರಾಷ್ಟ್ರೀಯ ವಿಮಾನಯಾನ ರದ್ದುಪಡಿಸಿದ ಬಳಿಕ ವಿದೇಶಗಳಲ್ಲಿ ಸಿಲುಕಿದ್ದ ಕನ್ನಡಿಗರು ಇದೇ 11ರಿಂದ ವಿಶೇಷ ವಿಮಾನಗಳಲ್ಲಿ ತವರಿಗೆ ಮರಳಲಿದ್ದಾರೆ. ನಗರದ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಬಂದಿಳಿಯುವ ಪ್ರಯಾಣಿಕರ ಆರೋಗ್ಯ ತಪಾಸಣೆಗೆ ಹಾಗೂ ಅವರ ಪ್ರತ್ಯೇಕ ವಾಸಕ್ಕೆ (ಕ್ವಾರಂಟೈನ್‌) ಸರ್ಕಾರ ಸಿದ್ಧತೆ ಮಾಡಿಕೊಂಡಿದೆ.  

ಪ್ರಯಾಣಿಕರ ಆರೋಗ್ಯ ತಪಾಸಣೆಗೆ ವಿಮಾನನಿಲ್ದಾಣದಲ್ಲಿ ಮಾಡಿಕೊಂಡಿರುವ ಸಿದ್ಧತೆಯನ್ನು ಗೃಹಸಚಿವ ಬಸವರಾಜ ಬೊಮ್ಮಾಯಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಗುರುವಾರ ಪರಿಶೀಲಿಸಿದರು. ವಿಮಾನನಿಲ್ದಾಣದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಸಚಿವರು, ಕೈಗೊಳ್ಳಬೇಕಾಗಿರುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಲಹೆ–ಸೂಚನೆ ನೀಡಿದರು.

‘ಕೇಂದ್ರ ಸರ್ಕಾರದ ಮಾಹಿತಿ ಪ್ರಕಾರ 6,500ಕ್ಕೂ ಅಧಿಕ ಪ್ರಯಾಣಿಕರು ಬೆಂಗಳೂರಿಗೆ ಬರುವ ನಿರೀಕ್ಷೆ ಇದೆ. ಅವರೆಲ್ಲರ ಆರೋಗ್ಯ ತಪಾಸಣೆ ನಡೆಸಲಿದ್ದೇವೆ. ಎರಡು ಹಂತಗಳಲ್ಲಿ ಕೋವಿಡ್ –19 ಪರೀಕ್ಷೆಗೆ ಒಳಪಡಿಸಲಿದ್ದೇವೆ. ಯಾವುದೇ ಸೋಂಕು ಇಲ್ಲ ಎಂಬುದು ದೃಢಪಟ್ಟ ನಂತರವಷ್ಟೇ ಮನೆಗೆ ಕಳುಹಿಸುತ್ತೇವೆ’ ಎಂದು ಸಚಿವ ಸುಧಾಕರ್ ತಿಳಿಸಿದರು.

‘ಎಲ್ಲ ಪ್ರಯಾಣಿಕರಿಗೂ 14 ದಿನಗಳ ಪ್ರತ್ಯೇಕವಾಸ ಕಡ್ಡಾಯ. ಇದಕ್ಕಾಗಿ ಹೋಟೆಲ್, ಶಾಲಾ ಕಾಲೇಜು, ಹಾಸ್ಟೆಲ್‌ಗಳನ್ನು ಅಣಿಗೊಳಿಸಲಾಗಿದೆ. ಅವರ ಪ್ರತ್ಯೇಕವಾಸದಿಂದ ಅಕ್ಕಪಕ್ಕದವರಿಗೆ ಯಾವುದೇ ತೊಂದರೆ ಆಗುವುದಿಲ್ಲ. ಈ ಬಗ್ಗೆ ಆತಂಕ ಬೇಡ’ ಎಂದರು. 

‘ಆರೋಗ್ಯ ತಪಾಸಣೆ ನಡೆಸಿದ ಬಳಿಕ ಪ್ರಯಾಣಿಕರ ದೈಹಿಕ ಲಕ್ಷಣಗಳನ್ನು ಆಧರಿಸಿ ಮೂರು ಗುಂಪುಗಳಾಗಿ ವರ್ಗೀಕರಿಸಲಾಗುತ್ತದೆ. ಸೋಂಕಿನ ಲಕ್ಷಣಗಳು ಕಂಡು ಬಂದರೆ ನೇರವಾಗಿ ಕೋವಿಡ್‌ –19 ಚಿಕಿತ್ಸೆ ನೀಡುವ ಆಸ್ಪತ್ರೆಗಳಿಗೆ ದಾಖಲಿಸಲಾಗುತ್ತದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

**

ಪ್ರಯಾಣಿಕರ ಸುರಕ್ಷತೆ ಹಾಗೂ ರಕ್ಷಣೆಗಾಗಿ ಪೊಲೀಸ್‌ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಪ್ರಯಾಣಿಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ.
-ಬಸವರಾಜ ಬೊಮ್ಮಾಯಿ, ಗೃಹಸಚಿವ

ಕ್ವಾರಂಟೈನ್: ಹೈಕೋರ್ಟ್‌ಗೆ ಅರ್ಜಿ

‘ವಿದೇಶಗಳಿಂದ ರಾಜ್ಯಕ್ಕೆ ವಾಪಸ್ ಆಗಲಿರುವವರನ್ನು ಕಡ್ಡಾಯವಾಗಿ ರೂಂ‌ ಕ್ವಾರಂಟೈನ್‌ಗೆ ಒಳಪಡಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿ ಹೈಕೋರ್ಟ್‌ಗೆ ಮಧ್ಯಂತರ ಅರ್ಜಿ‌ ಸಲ್ಲಿಸಲಾಗಿದೆ.

‘ವಿದೇಶದಿಂದ ಬಂದವರನ್ನು ಹೋಂ‌‌‌ ಕ್ವಾರಂಟೈನ್‌ ಬದಲಿಗೆ ರೂಂ ಕ್ವಾರಂಟೈನ್‌ ಮಾಡಬೇಕು. ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ವಕೀಲೆ‌ ಗೀತಾ ಮಿಶ್ರಾ ಮನವಿ ಮಾಡಿದ್ದಾರೆ.

‘ಕೇಂದ್ರ ಸರ್ಕಾರದ ಮಾಹಿತಿ ಪ್ರಕಾರ 4,408 ಪ್ರವಾಸಿಗರು, 3,074 ವಿದ್ಯಾರ್ಥಿಗಳು, 2,784 ವಲಸಿಗರು ಹಾಗೂ ವೃತ್ತಿಪರರು, 557 ಹಡಗು ಸಿಬ್ಬಂದಿ ಸೇರಿದಂತೆ ಒಟ್ಟು 10,823 ಜನ ಕರ್ನಾಟಕದವರು ವಿದೇಶಗಳಲ್ಲಿ‌ ಇದ್ದಾರೆ.‌ ಇವರಲ್ಲಿ 6,100 ಜನ ರಾಜ್ಯಕ್ಕೆ ವಾಪಸ್ ಆಗುತ್ತಿದ್ದಾರೆ‌‌’ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು