ಮಂಗಳವಾರ, ಡಿಸೆಂಬರ್ 10, 2019
17 °C

ಮರ್ಯಾದೆಗೆ ಅಂಜಿ ಅಜ್ಜಿಯೇ ಮಾರಿದ್ದ ಮಗು ಮತ್ತೆ ತಾಯಿ ಮಡಿಲು ಸೇರಿತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅವಿವಾಹಿತ ತಾಯಿ ಜನ್ಮ ನೀಡಿದ್ದ 17 ದಿನದ ಹೆಣ್ಣುಮಗು ನಾಪತ್ತೆಯಾಗಿದ್ದ ಪ್ರಕರಣ ಸುಖಾಂತ್ಯ ಕಂಡಿದೆ. ಮಗುವಿನ ಅಜ್ಜಿಯೇ ₹ 30,000ಕ್ಕೆ ಮಗು ಮಾರಾಟ ಮಾಡಿದ್ದರು ಎಂದು ಶಂಕಿಸಲಾಗಿದೆ.

ಮಗಳಿಗೆ ಕಳಂಕ ತಟ್ಟುವುದು ಬೇಡ ಎಂದು ಆಕೆಯ ತಾಯಿಯೇ ಮೊಮ್ಮಗುವನ್ನು ದೂರ ಮಾಡುವ ನಿರ್ಧಾರ ಕೈಗೊಂಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವೈಟ್‌ಫೀಲ್ಡ್ ನಿವಾಸಿ ಪ್ರಿಯಾ (ಹೆಸರು ಬದಲಾಯಿಸಲಾಗಿದೆ) ಮಗು ಕಳೆದಿದೆ ಎಂದು ಹಲಸೂರು  ಪೊಲೀಸರಿಗೆ ದೂರು ನೀಡಿದ್ದರು. ಶೀಘ್ರ ಕಾರ್ಯಪ್ರವೃತ್ತರಾದ ಪೊಲೀಸರು, ಮಗುವನ್ನು ಪತ್ತೆ ಮಾಡಿ ತಾಯಿಯ ಮಡಿಲಿಗೆ ಸೇರಿಸುವಲ್ಲಿ  ಯಶಸ್ವಿಯಾದರು.

23ರ ಹರೆಯದ ಪ್ರಿಯಾ ಕೆಲ ಸಮಯದಿಂದ ಯುವಕನೊಬ್ಬನ ಜೊತೆ ಸಂಬಂಧ ಹೊಂದಿದ್ದರು. ಪ್ರಿಯಾ ಗರ್ಭಿಣಿಯಾದ ವಿಷಯ ತಿಳಿದ ಯುವಕ ಆಕೆಯನ್ನು ಬಿಟ್ಟು ಹೋಗಿದ್ದ. ಸಂಬಂಧ ಮುರಿದ ನಂತರ ಪ್ರಿಯಾ ತಾಯಿ ಮನೆಯಲ್ಲಿ ವಾಸವಾಗಿದ್ದರು. ನ.13ರಂದು ಹಲಸೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡಿದ್ದರು. ಸಮಾಜ ಮತ್ತು ಕುಟುಂಬದ ಬಹಿಷ್ಕಾರಕ್ಕೆ ಒಳಗಾಗುವ ಸಾಧ್ಯತೆಯಿರುವುದರಿಂದ ಆತಂಕಗೊಂಡ ಅಜ್ಜಿ ಆಸ್ಪತ್ರೆಯ ಸಿಬ್ಬಂದಿಯೊಬ್ಬರಿಗೆ ಮಗುವನ್ನು ಮಾರಾಟ ಮಾಡಿದ್ದರು ಎಂದು ತಿಳಿದುಬಂದಿದೆ.

ಈ ಬೆಳವಣಿಗೆಯನ್ನು ಅರಿಯದ ಪ್ರಿಯಾ, ಮಗುವಿನ ಬಗ್ಗೆ ತಿಳಿಸುವಂತೆ ತಾಯಿಯೊಂದಿಗೆ ಕೇಳಿಕೊಂಡಿದ್ದಾಳೆ . ತಾಯಿಯು ನೀನು ಮಗುವನ್ನು ಮರೆತು ಮುಂದಿನ ಬದುಕು ನೋಡು ಹೇಳಿದ್ದರು. 

ಶುಕ್ರವಾರ ಪ್ರಿಯಾ ಅವರು ಮಕ್ಕಳು ಮತ್ತು ಮಹಿಳಾ ಕಲ್ಯಾಣ ಇಲಾಖೆಗೆ ತೆರಳಿ ತನ್ನ ಸಮಸ್ಯೆ ಹೇಳಿಕೊಂಡಿದ್ದರು. ಇಲಾಖೆಯ ಅಧಿಕಾರಿಗಳು ಅವರನ್ನು ಪೊಲೀಸ್ ಆಯುಕ್ತರ ಬಳಿ ಕರೆದುಕೊಂಡು ಹೋಗಿದ್ದರು. ಶನಿವಾರ ಹಲಸೂರು ಪೊಲೀಸರು ಮಗುವನ್ನು  ಪತ್ತೆಹಚ್ಚಿರುವುದಾಗಿ ತಿಳಿದು ಬಂದಿದೆ.

ಮಗುವನ್ನು ತಾಯಿಗೆ ಹಿಂದುರಿಗಿಸಲಾಗಿದ್ದು ಯಾವುದೇ ದೂರುಗಳು ದಾಖಲಾಗಿಲ್ಲ ಎಂದು ಡಿಸಿಪಿ (ದಕ್ಷಿಣ) ಶರಣಪ್ಪ ಅವರು ಹೇಳಿದ್ದಾರೆ. ಮಗುವನ್ನು ನಿಜವಾಗಿಯೂ ಮಾರಲಾಗಿತ್ತೆ ಎಂಬುದರ ಬಗ್ಗೆ ತನಿಖೆ ನಡೆಯಬೇಕಿದೆ.

ಮಗುವನ್ನು ತೊರೆದಿದ್ದಕ್ಕಾಗಿ ಮಗುವಿನ ತಂದೆಯ ವಿರುದ್ಧ ಪ್ರಕರಣ ದಾಖಲಿಸಲು ಪ್ರಿಯಾ ಚಿಂತನೆ ನಡೆಸುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು