ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟನ್‌ನಿಂದ ಬಂದ 18 ಮಂದಿಗೆ ಸೋಂಕು

ಸೋಂಕು ದೃಢಪಟ್ಟವರು ಆಸ್ಪತ್ರೆಗೆ ದಾಖಲು, ನೇರ–ಪರೋಕ್ಷ ಸಂಪರ್ಕಿತರಿಗೆ ಹೋಟೆಲ್‌ನಲ್ಲಿ ಕ್ವಾರಂಟೈನ್
Last Updated 30 ಡಿಸೆಂಬರ್ 2020, 22:00 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ಬ್ರಿಟನ್‌ನಿಂದ ಇಲ್ಲಿಗೆ ವಾಪಸ್‌ ಆದವರಲ್ಲಿ ಬುಧವಾರ ಮತ್ತೊಬ್ಬರು ಕೋವಿಡ್‌ ಪೀಡಿತರಾಗಿದ್ದಾರೆ. ಇದರಿಂದಾಗಿ ಈವರೆಗೆ ಅಲ್ಲಿಂದ ಬಂದ ವಲಸಿಗರಲ್ಲಿ ಸೋಂಕಿತರಾದವರ ಸಂಖ್ಯೆ 18ಕ್ಕೆ ಏರಿಕೆಯಾಗಿದೆ.

ಕೋವಿಡ್ ಪೀಡಿತರ 54 ಮಂದಿ ನೇರ ಸಂಪರ್ಕಿತರು ಹಾಗೂ 92 ಮಂದಿ ದ್ವಿತೀಯ ಸಂಪರ್ಕಿತರನ್ನು ಬಿಬಿಎಂಪಿ ಸಿಬ್ಬಂದಿ ಪತ್ತೆ ಮಾಡಿದ್ದಾರೆ. ಸೋಂಕು ದೃಢಪಟ್ಟವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನೇರ ಮತ್ತು ಪರೋಕ್ಷ ಸಂಪರ್ಕಿತರನ್ನು ಪಾಲಿಕೆ ಗುರುತಿಸಿರುವ ಹೋಟೆಲ್‌ಗಳಲ್ಲಿ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ಕಳೆದ ನ.22ರಿಂದ ನಗರಕ್ಕೆ ಬ್ರಿಟನ್‌ ನಿಂದ 1,433 ಮಂದಿ ಬಂದಿದ್ದು, ಅವರಲ್ಲಿ 1,382 ಮಂದಿಯನ್ನು ಪತ್ತೆ ಮಾಡಲಾಗಿದೆ. ಇದರಲ್ಲಿ 1,293 ಮಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಈಗಾಗಲೇ 1,090 ಮಂದಿಯ ಪರೀಕ್ಷೆಯ ಫಲಿತಾಂಶ ಬಂದಿದೆ. ಕೋವಿಡ್ ದೃಢಪಟ್ಟ 18 ಮಂದಿಯ ಮಾದರಿಯನ್ನು ಜೆನೆಟಿಕ್ ಸೀಕ್ವೆನ್ಸ್ ಪರೀಕ್ಷೆಗೆ ನಿಮ್ಹಾನ್ಸ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. 185 ಮಂದಿ ಫಲಿತಾಂಶಕ್ಕೆ ಎದುರುನೋಡುತ್ತಿದ್ದಾರೆ. ಈವರೆಗೆ ಮೂವರಿಗೆ ಹೊಸ ಸ್ವರೂಪದ ಕೊರೊನಾ ವೈರಾಣು ತಗುಲಿರುವುದು ದೃಢಪಟ್ಟಿದ್ದು, ಉಳಿದವರ ವರದಿ ಬರಬೇಕಿದೆ.

ಭಿತ್ತಿ ಪತ್ರ ಅಳವಡಿಕೆ: ಕೋವಿಡ್ ಕಾಣಿಸಿಕೊಂಡ ಪ್ರಾರಂಭಿಕ ದಿನಗಳಲ್ಲಿ ಸೋಂಕಿತರ ಮನೆಗೆ ಭಿತ್ತಿ ಪತ್ರವನ್ನು ಅಂಟಿಸಿ, ಅವರ ಕೈಗೆ ಮುದ್ರೆ ಹಾಕಲಾಗುತ್ತಿತ್ತು. ಅಧಿಕ ಪ್ರಕರಣಗಳು ನಿಗದಿತ ಸ್ಥಳದಲ್ಲಿ ವರದಿಯಾದಲ್ಲಿ ಬ್ಯಾರಿಕೇಡ್ ಹಾಕಿ, ನಿರ್ಬಂಧಿತ ಸ್ಥಳ ಎಂದು ಗುರುತಿಸಲಾಗುತ್ತಿತ್ತು. ಇದರಿಂದ ರೋಗಿಗಳನ್ನು ಕಳಂಕಿತರ ರೀತಿಯಲ್ಲಿ ಸುತ್ತಮುತ್ತಲಿನ ನಿವಾಸಿಗಳು ನೋಡುತ್ತಾರೆ ಎಂಬ ಕಾರಣಕ್ಕೆ ಈ ನಿರ್ಬಂಧಗಳನ್ನು ಸಂಪೂರ್ಣವಾಗಿ ಸಡಿಲಿಸಲಾಗಿತ್ತು. ಆದರೆ, ಈಗ ಹೊಸ ಸ್ವರೂಪದ ಕೊರೊನಾ ವೈರಾಣು ನಗರದಲ್ಲಿ ಪತ್ತೆಯಾದ ಕಾರಣ ಬಿಬಿಎಂಪಿಯು ಮತ್ತೆ ಭಿತ್ತಿ ಪತ್ರಗಳನ್ನು ಅಂಟಿಸಿ, ಬ್ಯಾರಿಕೇಡ್ ಹಾಕಲಾರಂಭಿಸಿದೆ.

ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ರಾಜೇಂದ್ರ ಚೋಳನ್, ‘ಸೋಂಕಿತರ ಕುಟುಂಬದ ಸದಸ್ಯರು ಹೋಟೆಲ್‌ಗೆ ಸ್ಥಳಾಂತರವಾಗಲು ನಿರಾಕರಿಸಿದ ಕಾರಣ ಬ್ಯಾರಿಕೇಡ್ ಹಾಕಿ, ಭಿತ್ತಿಪತ್ರವನ್ನು ಅಂಟಿಸಲಾಗಿದೆ. ಸೋಂಕಿತರನ್ನು ಕ್ವಾರಂಟೈನ್‌ಗೆ ಒಳಪಡಿಸಲು ಐದು ಹೋಟೆಲ್‌ಗಳನ್ನು ಗುರುತಿಸಲಾಗಿದೆ. ಆ ಹೋಟೆಲ್‌ಗಳ ಮುಂದೆ ಬ್ಯಾರಿಕೇಡ್ ಹಾಕಲಾಗಿದೆ. ಮನೆಗಳಿಗೆ ಬ್ಯಾರಿಕೇಡ್ ಹಾಕದಂತೆ ಸೂಚನೆ ನೀಡಲಾಗಿದೆ’ ಎಂದು ಹೇಳಿದರು.

ತ್ವರಿತ ಸಂಪರ್ಕ ಪತ್ತೆಗೆ ಸೂಚನೆ
ಬ್ರಿಟನ್‌ನಿಂದ ನಗರಕ್ಕೆ ಬಂದವರಲ್ಲಿ ರೂಪಾಂತರ ವೈರಾಣು ಕಾಣಿಸಿಕೊಂಡ ಕಾರಣ ಸೋಂಕಿತರ ಸಂಪರ್ಕಿತರನ್ನು ತ್ವರಿತವಾಗಿ ಪತ್ತೆಮಾಡಬೇಕು ಎಂದು ಬಿಬಿಎಂಪಿ ಆಡಳಿತಾಧಿಕಾರಿ ಗೌರವ್‌ ಗುಪ್ತಾ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಹೊಸ ಸ್ವರೂಪದ ವೈರಾಣು ಕಾಣಿಸಿಕೊಂಡ ಕಾರಣ ಅವರು ಅಧಿಕಾರಿಗಳ ಜತೆಗೆ ಬುಧವಾರ ಸಭೆ ನಡೆಸಿದರು. ‘ನಗರದಲ್ಲಿ ರೂಪಾಂತರ ಕೊರೊನಾ ವೈರಾಣು ಹರಡದಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಸರ್ಕಾರದ ಪ್ರಮಾಣೀಕೃತ ಕಾರ್ಯಾಚರಣೆ ವಿಧಾನವು (ಎಸ್ಒಪಿ) ಪಾಲನೆಯಾಗುವಂತೆ ನೋಡಿಕೊಳ್ಳಬೇಕು’ ಎಂದು ತಿಳಿಸಿದರು.

ಲಸಿಕೆಗೆ ಅನುಮೋದನೆ: ನಾಳೆ ಮತ್ತೆ ಸಭೆ
ನವದೆಹಲಿ:
ದೇಶದಲ್ಲಿ ಕೋವಿಡ್ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡುವಂತೆ ಸೆರಂ ಇನ್‌ಸ್ಟಿಟ್ಯೂಟ್, ಫೈಝರ್ ಹಾಗೂ ಭಾರತ್ ಬಯೋಟೆಕ್ ಸಂಸ್ಥೆ ಸಲ್ಲಿಸಿದ್ದ ಅರ್ಜಿಗಳನ್ನು ಭಾರತೀಯ ಔಷಧ ಗುಣಮಟ್ಟ ನಿಯಂತ್ರಕರ ಸಂಘಟನೆ (ಸಿಡಿಎಸ್‌ಸಿಒ) ಬುಧವಾರ ಪರಿಶೀಲನೆ ನಡೆಸಿತು. ಜನವರಿ 1ರಂದು ಮತ್ತೆ ಸಭೆ ಸೇರಿ ಚರ್ಚೆ ಮುಂದುವರಿಸಲು ನಿರ್ಧರಿಸಿತು ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಕೋವಿಡ್-19 ಕುರಿತ ವಿಷಯ ತಜ್ಞರ ಸಮಿತಿಯು (ಎಸ್‌ಇಸಿ) ಸೆರಂ ಸಂಸ್ಥೆ (ಎಸ್‌ಐಐ) ಮತ್ತು ಭಾರತ್ ಬಯೋಟೆಕ್ ಸಲ್ಲಿಸಿದ ಹೆಚ್ಚುವರಿ ದತ್ತಾಂಶ ಮತ್ತು ಮಾಹಿತಿಯನ್ನು ಪರಿಶೀಲಿಸಿತು. ಸೆರಂ ಸಂಸ್ಥೆಯು ‘ಕೋವಿಶೀಲ್ಡ್’, ಭಾರತ್ ಬಯೋಟೆಕ್ ಸಂಸ್ಥೆಯು ‘ಕೊವ್ಯಾಕ್ಸಿನ್’ ಹೆಸರಿನ ಲಸಿಕೆಗಳನ್ನು ಉತ್ಪಾದಿಸುತ್ತಿವೆ.

‘ಫೈಝರ್ ಪ್ರತಿನಿಧಿಗಳು ಹೆಚ್ಚಿನ ಸಮಯವನ್ನು ಕೋರಿದರು. ಎಸ್‌ಐಐ ಮತ್ತು ಭಾರತ್ ಬಯೋಟೆಕ್ ಸಂಸ್ಥೆಗಳು ಪ್ರಸ್ತುತಪಡಿಸಿದ ಹೆಚ್ಚುವರಿ ದತ್ತಾಂಶ ಮತ್ತು ಮಾಹಿತಿಯನ್ನು ಎಸ್‌ಇಸಿ ಪರಿಶೀಲಿಸಿತು. ಮಾಹಿತಿಯ ವಿಶ್ಲೇಷಣೆ ನಡೆಯುತ್ತಿದೆ’ ಎಂದು ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT