ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ಸುಲಿಗೆ ಮಾಡಿದ್ದ ಕಾನ್‌ಸ್ಟೆಬಲ್‌ಗಳ ಅಮಾನತು: ಟ್ವಿಟರ್ ಮೂಲಕ ನೀಡಿದ್ದ ದೂರು!

Last Updated 16 ಜನವರಿ 2023, 10:14 IST
ಅಕ್ಷರ ಗಾತ್ರ

ಬೆಂಗಳೂರು: ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಖಾಸಗಿ ಕಂಪನಿ ಉದ್ಯೋಗಿ ವೈಭವ್ ಪಟೇಲ್ ಎಂಬುವರನ್ನು ಅಡ್ಡಗಟ್ಟಿ ಗಾಂಜಾ ಸೇವನೆ ಪ್ರಕರಣ ದಾಖಲಿಸುವ ಬೆದರಿಕೆಯೊಡ್ಡಿ ₹ 2,500 ಸುಲಿಗೆ ಮಾಡಿದ್ದ ಆರೋಪದಡಿ ಕಾನ್‌ಸ್ಟೆಬಲ್‌ಗಳಾದ ಮಲ್ಲೇಶ್ ಹಾಗೂ ಕೀರ್ತಿಕುಮಾರ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಜ.11ರಂದು ತಡರಾತ್ರಿ ನಡೆದಿದ್ದ ಘಟನೆ ಸಂಬಂಧ ವೈಭವ್ ಪಟೇಲ್ ಅವರು ಟ್ವೀಟ್ ಮೂಲಕ ಪೊಲೀಸ್ ಕಮಿಷನರ್ ಅವರಿಗೆ ದೂರು ನೀಡಿದ್ದರು. ಬಳಿಕ ವೈಭವ್ ಅವರನ್ನು ಸಂಪರ್ಕಿಸಿದ್ದ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ, ಲಿಖಿತ ದೂರು ಪಡೆದು ತನಿಖೆ ನಡೆಸಿದ್ದರು.

ಇಬ್ಬರು ಕಾನ್‌ಸ್ಟೆಬಲ್‌ಗಳು ಹಣ ಸುಲಿಗೆ ಮಾಡಿದ್ದ ಸಂಗತಿ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಹೀಗಾಗಿ, ಇಬ್ಬರನ್ನೂ ಅಮಾನತು ಮಾಡಿ ಸಿ.ಕೆ.ಬಾಬಾ ಆದೇಶ ಹೊರಡಿಸಿದ್ದಾರೆ.

ದೂರಿನ ವಿವರ: ‘ಜ. 11ರಂದು ತಡರಾತ್ರಿ ಕೆಲಸ ಮುಗಿಸಿ ರ‍್ಯಾಪಿಡೊ ಬೈಕ್‌ನಲ್ಲಿ ಮನೆಯತ್ತ ಹೊರಟಿದ್ದೆ. ಎಚ್‌ಎಸ್‌ಆರ್‌ ಲೇಔಟ್‌ನ ಅಯ್ಯಪ್ಪಸ್ವಾಮಿ ದೇವಸ್ಥಾನದ ಬಳಿ ಗಸ್ತಿನಲ್ಲಿದ್ದ ಇಬ್ಬರು ಪೊಲೀಸರು (ಬಂಡೇಪಾಳ್ಯ ಠಾಣೆ), ಬೈಕ್ ಅಡ್ಡಗಟ್ಟಿದ್ದರು. ಎಲ್ಲಿಗೆ ಹೊರಟಿದ್ದೀರಾ ಎಂದು ಪ್ರಶ್ನಿಸಿ ಬ್ಯಾಗ್‌ ಪರಿಶೀಲಿಸಿದ್ದರು. ಇದೇ ವೇಳೆ ಗಮನಕ್ಕೆ ಬಾರದಂತೆ ಬ್ಯಾಗ್‌ನಲ್ಲಿ ಯಾವುದೋ ಸೊಪ್ಪು ಇರಿಸಿದ್ದರು’ ಎಂದು ವೈಭವ್ ಅವರು ಟ್ವೀಟ್‌ನಲ್ಲಿ ತಿಳಿಸಿದ್ದರು.

‘ಬ್ಯಾಗ್‌ನಿಂದ ಸೊಪ್ಪು ಹೊರಗೆ ತೆಗೆದಂತೆ ನಟಿಸಿದ್ದ ಪೊಲೀಸರು, ಗಾಂಜಾ ಸೇವನೆ ಮಾಡುತ್ತೀಯಾ? ಎಂದು ಬೆದರಿಸಿದ್ದರು. ಗಾಂಜಾ ಸೇವಿಸುವುದಿಲ್ಲ ಎಂದು ಬೇಡಿಕೊಂಡಿದ್ದೆ. ರ‍್ಯಾಪಿಡೊ ಬೈಕ್ ಸವಾರನಿಗೆ ನನ್ನಿಂದ ₹100 ಕೊಡಿಸಿ ಆತನನ್ನು ಸ್ಥಳದಿಂದ ಕಳುಹಿಸಿದ್ದರು. ನನ್ನನ್ನು ಹಿಡಿದುಕೊಂಡಿದ್ದ ಪೊಲೀಸರು, ‘ನಿನ್ನನ್ನು ಪೊಲೀಸ್‌ ಠಾಣೆಗೆ ಕರೆದೊಯ್ದು ಜೈಲಿಗೆ ಹಾಕಿದರೆ, ನಮಗೆ ತಲಾ ₹ 15 ಸಾವಿರ ಬಹುಮಾನ ಬರಲಿದೆ’ ಎಂದಿದ್ದರು. ನಾನು ಗಾಂಜಾ ಸೇವಿಸಿಲ್ಲವೆಂದರೂ ತಪ್ಪೊಪ್ಪಿಕೊಳ್ಳುವಂತೆ ಪೀಡಿಸಿದರು.

‘ಸುಲಿಗೆ ಮಾಡುವುದೇ ಪೊಲೀಸರ ಉದ್ದೇಶವಾಗಿತ್ತು. ಹೀಗಾಗಿಯೇ ಅವರು ಪ್ರಕರಣ ದಾಖಲಿಸುವ ಬೆದರಿಕೆಯೊಡುತ್ತಿದ್ದರು. ನನ್ನನ್ನು ಬಿಡಲು ಏನು ಮಾಡಬೇಕೆಂದು ಕೇಳಿದ್ದೆ. ಆಗ ಅವರು, ಜೇಬಿನಲ್ಲಿದ್ದ ಪರ್ಸ್‌ ತೆಗೆದುಕೊಂಡು ₹ 2,500 ಕಿತ್ತುಕೊಂಡರು. ಎಟಿಎಂ ಘಟಕಕ್ಕೆ ಹೋಗಿ ಪುನಃ ₹ 4 ಸಾವಿರ ತರುವಂತೆ ಹೇಳಿದರು. ಖಾತೆಯಲ್ಲಿ ಹಣವಿಲ್ಲವೆಂದು ಹೇಳಿ ಗೋಗರೆದ ಬಳಿಕವೇ ನನ್ನನ್ನು ಬಿಟ್ಟು ಕಳುಹಿಸಿದರು’ ಎಂದೂ ಅವರು ಟ್ವೀಟ್‌ನಲ್ಲಿ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT