ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಐದು ವರ್ಷಗಳಲ್ಲಿ ರಸ್ತೆ ಕಾಮಗಾರಿಗೆ ₹ 20,060 ಕೋಟಿ!

ಬಿಬಿಎಂಪಿ ವ್ಯಾಪ್ತಿಯಲ್ಲಿ ಲೋಪವಿಲ್ಲದ 1 ಕಿ.ಮೀ. ರಸ್ತೆಯೂ ಇಲ್ಲ
Last Updated 23 ಸೆಪ್ಟೆಂಬರ್ 2021, 20:35 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿರುವ 11,283.05 ಕಿ.ಮೀ. ಉದ್ದದ ರಸ್ತೆಗಳ ಕಾಮಗಾರಿಗೆ ಐದು ವರ್ಷಗಳಲ್ಲಿ ₹ 20,060 ಕೋಟಿ ವೆಚ್ಚ ಮಾಡಲಾಗಿದೆ. ಆದರೆ, ನಗರದ ವ್ಯಾಪ್ತಿಯಲ್ಲಿ ಸಂಪೂರ್ಣ ದೋಷರಹಿತವಾಗಿರುವ 1 ಕಿ.ಮೀ. ರಸ್ತೆ ಕೂಡ ಇಲ್ಲ!

ವಿಧಾನ ಪರಿಷತ್‌ನಲ್ಲಿ ಗುರುವಾರ ಕಾಂಗ್ರೆಸ್‌ನ ಪಿ.ಆರ್‌. ರಮೇಶ್‌ ಪ್ರಶ್ನೆಗೆ ಉತ್ತರ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಮಾಹಿತಿ ಬಹಿರಂಗಪಡಿಸಿದರು. ‘ಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲ ರಸ್ತೆಗಳೂ ಒಂದಿಲ್ಲೊಂದು ಸಮಸ್ಯೆಗಳಿಂದ ಕೂಡಿವೆ. ಯಾವ ರಸ್ತೆಯೂ ಪರಿಪೂರ್ಣವಾಗಿ ದೋಷಮುಕ್ತವಾಗಿದೆ ಎಂದು ಪ್ರಮಾಣೀಕರಿಸಲು ಸಾಧ್ಯವಿಲ್ಲ’ ಎಂದರು.

ಬಿಬಿಎಂಪಿ ವ್ಯಾಪ್ತಿಯಯಲ್ಲಿ 1,344.34 ಕಿ.ಮೀ. ಉದ್ದದ ವಾಹನ ಸಂಚಾರ ಯೋಗ್ಯವಾದ ಮುಖ್ಯ ಮತ್ತು ಉಪ ಮುಖ್ಯ ರಸ್ತೆಗಳಿವೆ. 9,938.71 ಕಿ.ಮೀ. ಉದ್ದದ ಚಿಕ್ಕ ರಸ್ತೆಗಳಿವೆ. ಎಲ್ಲವನ್ನೂ ಡಾಂಬರೀಕರಣ ಮಾಡಲಾಗಿದೆ. ಮೂರೂ ಬಗೆಯ ರಸ್ತೆಗಳಲ್ಲಿ ಕೆಲವು ಕಡೆ ವಿವಿಧ ಕಾಮಗಾರಿಗಳಿಗಾಗಿ ರಸ್ತೆಯ ಭಾಗವನ್ನು ಕತ್ತರಿಸಲಾಗಿದೆ. ಇದರಿಂದ ವಾಹನಗಳ ಸಂಚಾರಕ್ಕೆ ಸಮಸ್ಯೆಯಾಗಿದೆ ಎಂದು ತಿಳಿಸಿದರು.

‘ಪಾಲಿಕೆ ವ್ಯಾಪ್ತಿಯಲ್ಲಿ ಯಾವುದಾದರೂ ಭಾಗದಲ್ಲಿ 1 ಕಿ.ಮೀ. ಉದ್ದದಷ್ಟಾದರೂ ಬಿರುಕು ರಹಿತ, ಗುಂಡಿಗಳಿಲ್ಲದ, ಉಬ್ಬು ಮತ್ತು ತಗ್ಗುಗಳಿಲ್ಲದ, ದೋಷರಹಿತ ರಸ್ತೆ ಇದೆಯೆ’ ಎಂದು ರಮೇಶ್‌ ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ಬೊಮ್ಮಾಯಿ, ‘ಸಂಪೂರ್ಣ ದೋಷರಹಿತವಾದ ರಸ್ತೆ ಭಾರತದ ಎಲ್ಲಿಯೂ ಸಿಗುವುದು ಕಷ್ಟ. ಬಿಬಿಎಂಪಿ ವ್ಯಾಪ್ತಿಯಲ್ಲೂ ಅಂತಹ ರಸ್ತೆ ಇಲ್ಲ’ ಎಂದರು.

ರಸ್ತೆಗಳ ಲೆಕ್ಕಪರಿಶೋಧನೆ: ‘ರಸ್ತೆಗಳ ಕಾಮಗಾರಿಗಳಲ್ಲಿ ದೋಷ ಮತ್ತು ದುಂದುವೆಚ್ಚ ತಡೆಯಲು ರಸ್ತೆಗಳ ಲೆಕ್ಕ ಪರಿಶೋಧನೆ ನಡೆಸಲಾಗುವುದು. ಎಲ್ಲ ರಸ್ತೆಗಳ ಇತಿಹಾಸ ಮತ್ತು ಕಾಮಗಾರಿಗಳ ವಿವರಗಳನ್ನು ದಾಖಲಿಸಲಾಗುವುದು. ರಸ್ತೆ ಕಾಮಗಾರಿಗಳಲ್ಲಿ ಆಗುವ ಲೋಪ ಹಾಗೂ ಅವ್ಯವಹಾರಗಳಿಗೆ ಅಧಿಕಾರಿಗಳನ್ನು ಹೊಣೆ ಮಾಡುವ ವ್ಯವಸ್ಥೆ ಜಾರಿಗೊಳಿಸಲಾಗುವುದು’ ಎಂದು ಮುಖ್ಯಮಂತ್ರಿ ಪ್ರಕಟಿಸಿದರು.

ಪ್ರತಿ ರಸ್ತೆಯ ಕಾಮಗಾರಿಯನ್ನೂ ಲೆಕ್ಕ ಪರಿಶೋಧನೆಗೆ ಒಳಪಡಿಸಲಾಗುವುದು. ಕಾಮಗಾರಿಯ ಅಂದಾಜು ಪಟ್ಟಿ, ನಿರ್ವಹಣೆ, ಬಿಲ್‌ ಪಾವತಿ, ಮೂರನೇ ವ್ಯಕ್ತಿಯ ತಪಾಸಣೆಯ ವಿವರಗಳನ್ನು ಪರಿಶೀಲಿಸಲಾಗುವುದು. ಗುತ್ತಿಗೆದಾರ ಮತ್ತು ಉಸ್ತುವಾರಿ ಅಧಿಕಾರಿಗಳ ವಿವರಗಳನ್ನು ದಾಖಲಿಸಿಡಲಾಗುವುದು. ಕಳಪೆ ಗುಣಮಟ್ಟದ ಕಾಮಗಾರಿ ಕಂಡುಬಂದರೆ ಗುತ್ತಿಗೆದಾರ ಮತ್ತು ಅಧಿಕಾರಿ ಇಬ್ಬರ ವಿರುದ್ಧವೂ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಕಳಪೆ ಕಾಮಗಾರಿ ಆರೋಪ:‘ಮಾಗಡಿ ರಸ್ತೆಯಲ್ಲಿ ಮೂರು ತಿಂಗಳ ಹಿಂದೆ ಡಾಂಬರೀಕರಣ ಮಾಡಲಾಗಿತ್ತು. ಈಗ ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ. ಕಳಪೆ ಕಾಮಗಾರಿ ನಡೆಸಿರುವುದೇ ಇದಕ್ಕೆ ಕಾರಣ’ ಎಂದು ರಮೇಶ್‌ ಆರೋಪಿಸಿದರು.

ಆ ಕಾಮಗಾರಿಯ ಕುರಿತು ಪರಿಶೀಲನೆ ನಡೆಸಲಾಗುವುದು. ಕಳಪೆ ಕಾಮಗಾರಿ ಕಂಡುಬಂದಲ್ಲಿ ಕ್ರಮ ಜರುಗಿಸಲಾಗುವುದು ಎಂದು ಬೊಮ್ಮಾಯಿ ಭರವಸೆ ನೀಡಿದರು.

ಟೆಂಡರ್‌ ಶ್ಯೂರ್‌ಗೆ ₹ 481 ಕೋಟಿ: ಬೆಂಗಳೂರು ಸ್ಮಾರ್ಟ್‌ ಸಿಟಿ ಲಿಮಿಟೆಡ್‌ ವತಿಯಿಂದ 13 ಟೆಂಡರ್‌ ಶ್ಯೂರ್‌ ರಸ್ತೆಗಳ ನಿರ್ಮಾಣಕ್ಕೆ ₹ 481.65 ಕೋಟಿ ವೆಚ್ಚ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT