ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇತನ ಪರಿಷ್ಕರಣೆ: ಬ್ಯಾಂಕ್‌ ನೌಕರರ ಮುಷ್ಕರ

Last Updated 18 ಡಿಸೆಂಬರ್ 2013, 19:48 IST
ಅಕ್ಷರ ಗಾತ್ರ

ಬೆಂಗಳೂರು: ವೇತನ ಪರಿಷ್ಕರಣೆ ಮತ್ತಿತರ ಬೇಡಿಕೆಗಳಿಗೆ ಒತ್ತಾಯಿಸಿ ಬ್ಯಾಂಕ್‌ ನೌಕರರ ಸಂಯುಕ್ತ ವೇದಿಕೆ (ಯುಎಫ್‌ಬಿಯು) ಕರೆ ನೀಡಿದ್ದ ರಾಷ್ಟ್ರವ್ಯಾಪಿ ಬ್ಯಾಂಕ್‌ ಮುಷ್ಕರಕ್ಕೆ ಬೆಂಬಲ ಸೂಚಿಸಿ ನಗರದ ಎಲ್ಲ ಬ್ಯಾಂಕ್‌ ನೌಕರರು ಬುಧವಾರ ಮುಷ್ಕರ ನಡೆಸಿದರು.

ಹತ್ತನೇ ವೇತನ ಪರಿಷ್ಕರಣೆ ಮಾಡು­ವುದಾಗಿ ಹೇಳಿದ್ದ ಕೇಂದ್ರ ಸರ್ಕಾರ ಆ ವಿಷಯವಾಗಿ ಮೌನ ತಳೆದಿದೆ. ಆರ್ಥಿಕ ಸುಧಾರಣೆಯ ಹೆಸರಿನಲ್ಲಿ ಸರ್ಕಾರ ಬ್ಯಾಂಕ್‌ಗಳ ಖಾಸಗೀಕರಣಕ್ಕೆ ಮುಂದಾ­ಗಿದೆ ಎಂದು ನೌಕರರು ದೂರಿದರು.

‘ಹತ್ತನೇ ವೇತನ ಪರಿಷ್ಕರಣೆ 2012ರಿಂದಲೇ ಜಾರಿಗೆ ಬರಬೇಕು. ಈ ಬಗ್ಗೆ ಐದಾರು ಬಾರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರ ಬ್ಯಾಂಕಿಂಗ್‌ ವಲಯವನ್ನು ಕಡೆಗಣಿಸು­ತ್ತಿದೆ’ ಎಂದು ಯುಎಫ್‌ಬಿಯು ರಾಜ್ಯ ಘಟಕದ ಜಂಟಿ ಸಂಚಾಲಕ ಎ.ಎನ್‌.­ಕೃಷ್ಣ­ಮೂರ್ತಿ ಅವರು  ಆರೋಪಿಸಿದರು.

‘ಐದು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಆಗಬೇಕು. ಆದರೆ, ಸರ್ಕಾರ ಈ ವಿಚಾರದಲ್ಲಿ ಸರಿಯಾಗಿ ನಡೆದುಕೊಳ್ಳುತ್ತಿಲ್ಲ. ಆರ್ಥಿಕ ಸುಧಾರಣೆಯ ಹೆಸರಿನಲ್ಲಿ ವಿದೇಶಿ ಬ್ಯಾಂಕ್‌ಗಳು ಹೆಚ್ಚಾಗಲು ಅನುವು ಮಾಡಿಕೊಡುತ್ತಿದೆ. ಬ್ಯಾಂಕಿಂಗ್‌ ವಲಯದಲ್ಲಿ ಸರ್ಕಾರದ ಪಾಲುದಾರಿಕೆ ಸದ್ಯ ಶೇ 51ರಷ್ಟಿದೆ. ಈ ಪ್ರಮಾಣವನ್ನು ತಗ್ಗಿಸುವ ಮೂಲಕ ಬ್ಯಾಂಕ್‌ಗಳ ಖಾಸಗೀಕರಣಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ’ ಎಂದರು.

‘ಅನುಕಂಪದ ಆಧಾರದ ಮೇಲೆ ನೌಕರಿ ನೀಡುವ ವ್ಯವಸ್ಥೆ ಬ್ಯಾಂಕಿಂಗ್‌ ವಲಯದಲ್ಲೂ ಜಾರಿಗೆ ಬರಬೇಕು. ಹೊರ ಗುತ್ತಿಗೆ ನೌಕರಿ ನೀಡುವ ವ್ಯವಸ್ಥೆಯನ್ನು ಕೈಬಿಡಬೇಕು’ ಎಂದು ಅವರು ಒತ್ತಾಯಿಸಿದರು. ವೇದಿಕೆಯ ಸದಸ್ಯರು ಸ್ಟೇಟ್‌
ಬ್ಯಾಂಕ್‌ ಆಫ್‌ ಮೈಸೂರು ಪ್ರಧಾನ ಕಚೇರಿ, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಪ್ರಾದೇಶಿಕ ಕಚೇರಿ ಆವರಣದಲ್ಲಿ ಪ್ರತಿಭಟನಾ ಸಭೆ ನಡೆಸಿ ಕೇಂದ್ರ ಸರ್ಕಾರ ವಿರುದ್ಧ ಘೋಷಣೆಗಳನ್ನು ಕೂಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT