ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದಲ್ಲಿ ಆರ್‌ಎಸ್‌ಎಸ್‌ ಸರ್ಕಾರ: ಬಿ.ಜಿ.ಕೊಲ್ಸೆ ಪಾಟೀಲ ಕಳವಳ

Last Updated 1 ಜನವರಿ 2021, 20:52 IST
ಅಕ್ಷರ ಗಾತ್ರ

ಬೆಂಗಳೂರು: ‘ದೇಶದಲ್ಲಿ ಆರ್‌ಎಸ್‌ಎಸ್‌ ಸರ್ಕಾರ ಇದೆ. ಆರ್‌ಎಸ್‌ಎಸ್‌ ಹೇಳಿದಂತೆ ಸರ್ಕಾರ ನಡೆಯುತ್ತಿದೆ. ಇದರಿಂದ ಸರ್ಕಾರದ ನಡೆ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದ್ದು, ನವ ಪೇಶ್ವೆ ಆಡಳಿತ ಬರುತ್ತಿದೆ’ ಎಂದು ಬಾಂಬೆ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಬಿ.ಜಿ.ಕೊಳಸೆ ಪಾಟೀಲ್ ಕಳವಳ ವ್ಯಕ್ತಪಡಿಸಿದರು.

ಭೀಮಾ ಕೊರೆಗಾಂವ್‌ ಹೋರಾಟ ಸಮಿತಿಯು ಸ್ವಾತಂತ್ರ್ಯ ಉದ್ಯಾನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಭೀಮಾ ಕೊರೆಗಾಂವ್‌ ವಿಜಯೋತ್ಸವ ಆಚರಣೆ ಹಾಗೂ ಮಾನವ ಹಕ್ಕು ಹೋರಾಟಗಾರರ ಬಿಡುಗಡೆಗೆ ಒತ್ತಾಯಿಸಿ ಪ್ರತಿರೋಧ ಸಮಾವೇಶ’ದಲ್ಲಿ ಅವರು ಮಾತನಾಡಿದರು.

‘ಭೀಮಾ ಕೊರೆಗಾಂವ್‌ವಿಜಯೋತ್ಸವ ದಿನವು ಪ್ರತಿಯೊಬ್ಬರೂ ಸಾಮಾಜಿಕ ಸಂಕೋಲೆಗಳಿಂದ ಮುಕ್ತರಾಗುವ ದಿನ. ಇದರ ಪರದನಿ ಎತ್ತಿದವರನ್ನು ‘ನಗರ ನಕ್ಸಲ’ರೆಂದು ಸರ್ಕಾರ ಬಂಧಿಸಿದೆ. ಎಷ್ಟು ಮಂದಿಯನ್ನು ಅವರು ಬಂಧಿಸಲು ಸಾಧ್ಯ? ಹೊರಗೆ ಅಥವಾ ಒಳಗೆ ಎಲ್ಲೇ ಇದ್ದರೂ ದನಿ ಅಡಗಿಸಲು ಸಾಧ್ಯವಿಲ್ಲ. ಮನುವಾದ ಹಾಗೂ ಮನಿವಾದ ನಮ್ಮನ್ನು ಆಳುತ್ತಿವೆ. ಹೋರಾಟಕ್ಕೆ ಎಲ್ಲರೂ ಒಗ್ಗೂಡಬೇಕು’ ಎಂದರು.

ವಕೀಲ ಕ್ಲಿಫ್ಟನ್ ರೊಸಾರಿಯೊ, ‘ನಗರ ನಕ್ಸಲರೆಂದು ಬಂಧಿಸಲಾಗಿರುವ 16 ಮಂದಿಯ ಮೇಲೆ ಯಾವುದೇ ಕ್ರಿಮಿನಲ್ ಪ್ರಕರಣಗಳಿಲ್ಲ. ನಾಳೆ ನಮ್ಮನ್ನೂ ಬಂಧಿಸಬಹುದು. ಈ ರೀತಿ ಸುಳ್ಳು ಪ್ರಕರಣಗಳಲ್ಲಿ ಬಂಧಿಸಿರುವ ನಿರಪರಾಧಿಗಳ ಬಿಡುಗಡೆಗಾಗಿ ಹೋರಾಟ ಅಗತ್ಯ’ ಎಂದರು.

ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ,‘ಬಂಧನಕ್ಕೆ ಒಳಗಾಗಿರುವವರು ಜನಪದರು. ಅವರ ಬಂಧಿಸಿರುವುದು ನಮ್ಮೆಲ್ಲರನ್ನೂ ಬಂಧಿಸಿದಂತೆ. ಈಗಿನ ಸ್ಥಿತಿಯಲ್ಲಿ ಯಾರನ್ನಾದರೂ ಬಂಧಿಸಬಹುದು. ಭೀಮಾ ಕೊರೆಗಾಂವ್‌ ವಿಚಾರವನ್ನು ಮುಟ್ಟಿದ್ದಾರೆ. ಇದು, ಇಂದಲ್ಲಾ ನಾಳೆ ಪ್ರತಿರೋಧದ ರೂಪ ತಾಳಲಿದೆ’ ಎಂದು ಹೇಳಿದರು.

ಭೀಮಾ ಕೊರೆಗಾಂವ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ 16 ಮಂದಿಯ ಭಾವಚಿತ್ರಗಳನ್ನು ಕಾರ್ಯಕ್ರಮದಲ್ಲಿ ಅನಾವರಣಗೊಳಿಸಿದರು. ‘ಭೀಮಾ ಕೊರೆಗಾಂವ್‌ ವಿಜಯೋತ್ಸವ’ ಪುಸ್ತಕವನ್ನು ಡಾ.ಸರಜೂ ಕಾಟ್ಕರ್ ಬಿಡುಗಡೆಗೊಳಿಸಿದರು.

ವಿಜಯೋತ್ಸವದ ಅಂಗವಾಗಿ ಬಿಎಸ್‌ಪಿ ಮುಖಂಡ ಗೋಪಿನಾಥ್‌ ಅವರು ವಿಜಯ ಸ್ತಂಭ ಅನಾವರಣಗೊಳಿಸಿದರು. ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯನ್ನು ಕೋಟಿಗಾನಹಳ್ಳಿ ರಾಮಯ್ಯ ಉದ್ಘಾಟಿಸಿದರು. ಸಮುದಾಯ ಬೆಂಗಳೂರು ತಂಡದವರು ‘ಒಳಿತು ಮಾಡು ಮನುಸಾ’ ಬೀದಿನಾಟಕ‍ಪ್ರಸ್ತುತ ಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT