ಶುಕ್ರವಾರ, ನವೆಂಬರ್ 22, 2019
27 °C
ರೌಡಿಶೀಟರ್‌ ಸೇರಿ ಮೂವರ ಬಂಧನ

ದರೋಡೆ: ಮೂವರ ಬಂಧನ

Published:
Updated:

ಬೆಂಗಳೂರು: ದರೋಡೆ, ಕಳವು, ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ‌ರೌಡಿಶೀಟರ್‌ ಸೇರಿ ಮೂವರನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಹೆಸರುಘಟ್ಟದ ಲಕ್ಷ್ಮೀಕಾಂತ್‌ (20) ಆನಂದ್‌ (19) ಮತ್ತು ಚಿಕ್ಕಬಿದರಕಲ್ಲು ನಿವಾಸಿ ರಾಕೇಶ್‌ (20) ಬಂಧಿತರು. ಆರೋಪಿಗಳಿಂದ 160 ಗ್ರಾಂ ಚಿನ್ನಾಭರಣ, ವಿವಿಧ ಕಂಪನಿಗಳ ಎಂಟು ದ್ವಿಚಕ್ರ ವಾಹನ, ಕ್ಯಾಮೆರಾ, ಹೆಲ್ಮೆಟ್‌ ಸೇರಿ ಒಟ್ಟು ₹ 5.70 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಆರೋಪಿ ಲಕ್ಷ್ಮೀಕಾಂತ್‌ ಮಾದನಾಯಕನಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯ ರೌಡಿಶೀಟರ್‌. ಈತನ ವಿರುದ್ಧ ಕೊಲೆಯತ್ನ, ದರೋಡೆಗೆ
ಸಂಚು ಪ್ರಕರಣಗಳು ದಾಖಲಾಗಿವೆ. ಮತ್ತೊಬ್ಬ ಆರೋಪಿ ರಾಕೇಶ್‌ ವಿರುದ್ಧ ಪೀಣ್ಯ ಪೊಲೀಸ್‌ ಠಾಣೆಯಲ್ಲಿ ಕೊಲೆಯತ್ನ, ದರೋಡೆಗೆ ಸಂಚು, ಬಾಗಲಗುಂಟೆ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ.

ಆರೋಪಿಗಳ ಬಂಧನದಿಂದ ಸೋಲದೇವನಹಳ್ಳಿ ಠಾಣೆಯಲ್ಲಿ ದಾಖಲಾದ ದರೋಡೆ ಪ್ರಕರಣ, ‌ಅದೇ ಠಾಣೆಯ ವ್ಯಾಪ್ತಿಯಲ್ಲಿ ಮನೆಗೆ ನುಗ್ಗಿ ಕಳವು, ನೆಲಮಂಗಲ, ಯಶವಂತಪುರ, ರಾಜಾಜಿನಗರ, ಮಾದನಾಯಕನಹಳ್ಳಿ ಠಾಣೆಯಲ್ಲಿ ದಾಖಲಾದ ದ್ವಿಚಕ್ರ ವಾಹನ ಕಳವು ಸೇರಿ ಆರು ಪ್ರಕರಣಗಳು ಪತ್ತೆಯಾಗಿವೆ.

ಅ. 26ರಂದು ಮಧ್ಯಾಹ್ನ 3.15ರ ಸುಮಾರಿಗೆ ವೈಶಾಲ್‌ ಎಂಬುವವರು ಹೆಸರುಘಟ್ಟ ರಸ್ತೆಯಲ್ಲಿ ಹೋಗುತ್ತಿದ್ದಾಗ ಅಡ್ಡಗಟ್ಟಿದ ಐದಾರು ಮಂದಿ ಚಾಕು ತೋರಿಸಿ ಸುಲಿಗೆ ಮಾಡಿದ್ದರು. ಆ ಪ್ರಕರಣದ ವಿಚಾರಣೆ ವೇಳೆ ಉಳಿದ ಪ್ರಕರಣಗಳನ್ನು ಪತ್ತೆ ಹಚ್ಚಿದಂತಾಗಿದೆ.

ಪ್ರತಿಕ್ರಿಯಿಸಿ (+)