ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಗಲಭೆಯ ರಾಜಕೀಯ ಆಯಾಮ: ಕಾಂಗ್ರೆಸ್‌-ಎಸ್‌ಡಿಪಿಐ ಮೇಲಾಟ ಕಾರಣವೇ?

ಏನು ಕಾರಣ?
Last Updated 12 ಆಗಸ್ಟ್ 2020, 13:02 IST
ಅಕ್ಷರ ಗಾತ್ರ

ಬೆಂಗಳೂರು: ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಮತ್ತು ಕಾವಲ್ ಭೈರಸಂದ್ರದಲ್ಲಿಮಂಗಳವಾರ ರಾತ್ರಿ ನಡೆದ ಗಲಭೆಗಳಲ್ಲಿ ಮೂವರು ಕೌನ್ಸಿಲರ್‌ಗಳ ಚಿತಾವಣೆ ಇದೆ ಎಂದು ಕಂದಾಯ ಸಚಿವ ಆರ್.ಅಶೋಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ತಿಳಿಸಿದ್ದಾರೆ.

ಪುಲಿಕೇಶಿನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸಮಕ್ಷಮವೇ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಫೋನ್ ಕರೆಗೆ ಉತ್ತರಿಸಿದ ಅಶೋಕ, ಮೇಲಿನಂತೆ ವಿವರಿಸಿದರು.

'ಇಲ್ಲಿ ನನ್ನೊಂದಿಗೆ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸಹ ಇದ್ದಾರೆ. ಈ ಕೃತ್ಯದಲ್ಲಿ ಎಸ್‌ಡಿಪಿಐ ಭಾಗಿಯಾಗಿದೆ ಎಂದು ಅವರು ಹೇಳುತ್ತಿದ್ದಾರೆ. ಮೂವರು ಕಾರ್ಪೊರೇಟರ್‌ಗಳೂ ಭಾಗಿಯಾಗಿದ್ದಾರೆ' ಎಂದು ಅಶೋಕ ಅವರು ಮುಖ್ಯಮಂತ್ರಿಗೆ ಮಾಹಿತಿ ನೀಡಿದರು.

ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕುಶಾಲ ನಗರ, ಕಾವಲ್‌ ಬೈರಸಂದ್ರ, ದೇವರಜೀವನಹಳ್ಳಿ, ಮುನೇಶ್ವರ ನಗರ, ಸಗಾಯಪುರ, ಎಸ್‌.ಕೆ.ಗಾರ್ಡನ್ ಮತ್ತು ಪುಲಿಕೇಶಿನಗರ ವಾರ್ಡ್‌ಗಳಿವೆ. ಈ ಪೈಕಿ ದೇವರಜೀವನಹಳ್ಳಿ, ಮುನೇಶ್ವರ ನಗರ, ಎಸ್‌.ಕೆ.ಗಾರ್ಡನ್, ಸಗಾಯಪುರ ಮತ್ತು ಪುಲಿಕೇಶಿನಗರ ವಾರ್ಡ್‌ಗಳಲ್ಲಿ ಕಾಂಗ್ರೆಸ್‌ ಕಾರ್ಪೊರೇಟರ್‌ಗಳಿದ್ದಾರೆ. ಕುಶಾಲ ನಗರ ಮತ್ತು ಕಾವಲ್ ಬೈರಸಂದ್ರದಲ್ಲಿ ಜೆಡಿಎಸ್ ಸದಸ್ಯರಿದ್ದಾರೆ.

ಸಗಾಯಪುರ ವಾರ್ಡ್‌ನ ಈಗಿನ ಕಾರ್ಪೊರೇಟರ್‌ ವಿ.ಪಳನಿ ಅಮ್ಮಾಳ್. ಈಕೆ ಈ ಹಿಂದೆ ಪಕ್ಷೇತರರಾಗಿ ಗೆದ್ದಿದ್ದ ವಿ.ಏಳುಮಲೈ ಅವರ ಸಹೋದರಿ. ಪಳನಿ ಅವರು ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದರು.

'ಮೂರ್ತಿ ಅವರನ್ನು ವಿರೋಧಿಸುವ ನಮ್ಮದೇ ಪಕ್ಷದ ಕೆಲವರು ಈ ಗಲಭೆಯ ಸಂಚಿನಲ್ಲಿ ಭಾಗಿಯಾಗಿರಬಹುದು' ಎಂದು ಕಾಂಗ್ರೆಸ್‌ನ ಉನ್ನತ ಮೂಲಗಳು ಪ್ರತಿಕ್ರಿಯಿಸಿವೆ.

ಅಖಂಡ ಶ್ರೀನಿವಾಸಮೂರ್ತಿ ಅವರು ಈ ಹಿಂದೆ ಜೆಡಿಎಸ್‌ನಲ್ಲಿದ್ದರು. 2018ರ ವಿಧಾನಸಭಾ ಚುನಾವಣೆ ಸಂದರ್ಭ ಜಮೀರ್ ಅಹಮದ್ ಮತ್ತು ಇತರ ಐವರೊಂದಿಗೆ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು.

ಪುಲಿಕೇಶಿನಗರ ಕ್ಷೇತ್ರವು ಎಸ್‌ಸಿಗೆ ಮೀಸಲು. 2008ರ ಪುನರ್ ವಿಂಗಡನೆ ವೇಳೆ ಈ ಕ್ಷೇತ್ರವನ್ನು ರೂಪಿಸಲಾಗಿದೆ. 2008ರಲ್ಲಿ ಕಾಂಗ್ರೆಸ್‌ನ ಬಿ.ಪ್ರಸನ್ನ ಕುಮಾರ್ ಈ ಕ್ಷೇತ್ರದಿಂದ ಜಯಗಳಿಸಿದ್ದರು. 2013ರಲ್ಲಿ ಶ್ರೀನಿವಾಸಮೂರ್ತಿ ಅವರು ಪ್ರಸನ್ನ ಕುಮಾರ್ ಅವರನ್ನು ಸೋಲಿಸಿದ್ದರು. 2018ರಲ್ಲಿ ಮೂರ್ತಿ ಇದೇ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಜಯಗಳಿಸಿದ್ದರು. ಪ್ರಸನ್ನ ಕುಮಾರ್ ಜೆಡಿಎಸ್‌ಗೆ ಸೇರಿದ್ದರು.

ಪುಲಿಕೇಶಿನಗರ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರ ಮತಗಳು ಗಣನೀಯ ಪ್ರಮಾಣದಲ್ಲಿವೆ. ಎಲ್ಲಾ ಏಳು ಪಾಲಿಕೆ ವಾರ್ಡ್‌ಗಳ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಮತಗಳ ಮೇಲೆಈ ಹಿಂದೆ ಕಾಂಗ್ರೆಸ್‌ ಬಿಗಿ ಹಿಡಿತ ಹೊಂದಿತ್ತು. ಮುಸ್ಲಿಂ ಮತಗಳನ್ನು ಒಲಿಸಿಕೊಳ್ಳಲು ಜಮೀರ್ ಅಹಮದ್ ಅವರನ್ನು ಶ್ರೀನಿವಾಸಮೂರ್ತಿ ನೆಚ್ಚಿಕೊಂಡಿದ್ದರು.

'ಜಮೀರ್ ಅಹಮದ್ ಖಾನ್‌ ಅವರಿಗೂ ಈ ಗಲಭೆ ನಿಯಂತ್ರಿಸಲು ಸಾಧ್ಯವಾಗಿಲ್ಲ ಎಂಬ ಅಂಶವು ಒಟ್ಟಾರೆ ಚಿತಾವಣೆಯಲ್ಲಿ ಮತ್ತೊಂದು ಪ್ರಬಲ ಹಸ್ತಕ್ಷೇಪ ಇರುವುದನ್ನು ಎತ್ತಿ ತೋರಿಸುತ್ತದೆ' ಎಂದು ಕಾಂಗ್ರೆಸ್‌ನ ಉನ್ನತ ನಾಯಕರೊಬ್ಬರು ಹೇಳಿದರು. ಈ ಕುರಿತು ಪ್ರತಿಕ್ರಿಯೆ ಕೇಳಲುಜಮೀರ್ ಅಹಮದ್ ಖಾನ್ ಅವರನ್ನು ಸಂಪರ್ಕಿಸಲು ಮಾಡಿದ ಪ್ರಯತ್ನ ಫಲ ನೀಡಲಿಲ್ಲ.

'ಮಂಗಳವಾರದ ಘಟನೆಯು ಕಾಂಗ್ರೆಸ್‌ಗೆ ಮತ್ತೊಂದು ಎಚ್ಚರಿಕೆಯ ಘಂಟೆ' ಎಂದೇ ವ್ಯಾಖ್ಯಾನಿಸಲಾಗುತ್ತಿದೆ. 'ಮುಸ್ಲಿಂ ಸಮುದಾಯದಲ್ಲಿ ಎಸ್‌ಡಿಪಿಐ ಪ್ರಬಲವಾಗುತ್ತಿರುವುದರಿಂದ ಕಾಂಗ್ರೆಸ್‌ ತನ್ನ ಸಾಂಪ್ರದಾಯಿಕ ಮತಬ್ಯಾಂಕ್ ಕಳೆದುಕೊಳ್ಳುತ್ತಿದೆ. ಪುಲಕೇಶಿನಗರ ವಿಧಾನಸಭಾ ಕ್ಷೇತ್ರದಲ್ಲಿಯೂ ಎಸ್‌ಡಿಪಿಐ ಮುಸ್ಲಿಂ ಮತಗಳನ್ನು ತನ್ನ ಪರವಾಗಿ ಒಗ್ಗೂಡಿಸಲು ಯತ್ನಿಸುತ್ತಿದೆ' ಎಂದು ಮತ್ತೋರ್ವ ಕಾಂಗ್ರೆಸ್ ನಾಯಕರು ವಿಶ್ಲೇಷಿಸಿದರು.

ಬಿಬಿಎಂಪಿ ಚುನಾವಣೆಯಲ್ಲಿ ಈ ಗಲಭೆಗಳನ್ನು ತನ್ನ ಲಾಭಕ್ಕೆ ಎಸ್‌ಡಿಪಿಐ ಬಳಸಿಕೊಳ್ಳಬಹುದು ಎಂದು ಕಾಂಗ್ರೆಸ್ ಅಭಿಪ್ರಾಯಪಟ್ಟಿದೆ. ಮತ್ತೊಂದು ಗಮನಾರ್ಹ ಸಂಗತಿ ಎಂದರೆ, ಗಲಭೆಯ ಪ್ರಮುಖ ಆರೋಪಿ ಮುಜಾಮಿಲ್ ಪಾಷ ಸಹ ಎಸ್‌ಡಿಪಿಐಗೆ ಸೇರಿದವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT