ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ನಲ್ಲಿ ಎಂ.ಎಸ್ಸಿ: ಇಲ್ಲಿ ಭಯೋತ್ಪಾದನೆ: ಮೂವರಿಗೆ ಜೀವಾವಧಿ ಶಿಕ್ಷೆ

ದಕ್ಷಿಣ ಭಾರತದಲ್ಲಿ ಹಿಂದೂ ಮುಖಂಡರ ಹತ್ಯೆಗೆ ಸಂಚು: ಮೂವರಿಗೆ ಜೀವಾವಧಿ ಶಿಕ್ಷೆ
Last Updated 4 ಮಾರ್ಚ್ 2023, 23:00 IST
ಅಕ್ಷರ ಗಾತ್ರ

ಬೆಂಗಳೂರು: ದಕ್ಷಿಣ ಭಾರತದಲ್ಲಿ ಭಯೋತ್ಪಾದನೆ ಕೃತ್ಯ ಎಸಗಿ ಹಿಂದೂ ಮುಖಂಡರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಪ್ರಕರಣದಲ್ಲಿ ಪಾಕಿಸ್ತಾನ ಪ್ರಜೆ ಸೇರಿ ಮೂವರಿಗೆ ಎನ್‌ಐಎ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಪಾಕಿಸ್ತಾನದ ಮೊಹಮ್ಮದ್ ಫಹಾದ್ ಅಲಿಯಾಸ್ ಖೋಯಾ (30), ಬೆಂಗಳೂರು ಟಿಪ್ಪು ನಗರದ ಸೈಯದ್ ಅಬ್ದುಲ್ ರೆಹಮಾನ್ (25) ಹಾಗೂ ಚಿಂತಾಮಣಿಯ ಅಪ್ಸರ್ ಪಾಷಾ ಅಲಿಯಾಸ್ ಖಷೀರುದ್ದೀನ್ (32) ಶಿಕ್ಷೆಗೆ ಗುರಿಯಾದವರು.

ಆಡುಗೋಡಿ ಠಾಣೆಯಲ್ಲಿ 2012ರಲ್ಲಿ ದಾಖಲಾಗಿದ್ದ ಪ್ರಕರಣ ದಲ್ಲಿ ಮೂವರನ್ನೂ ಬಂಧಿಸಿದ್ದ ಸಿಸಿಬಿ ಪೊಲೀಸರು, ನ್ಯಾಯಾಲಯಕ್ಕೆ ದೋಷರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಸಿ.ಎಂ. ಗಂಗಾಧರ, ಅಪರಾಧಿಗಳಿಗೆ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ. ಸರ್ಕಾರದ ಪರ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಸಿ.ಎ. ರವೀಂದ್ರ ವಾದಿಸಿದ್ದರು.

ಉಗ್ರನಾದ ಎಂ.ಎಸ್ಸಿ ಪದವೀಧರ: ‘ಪಾಕಿಸ್ತಾನದ ನಿವಾಸಿ ಮೊಹಮ್ಮದ್ ಫಹಾದ್, ಕರಾಚಿ ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ (ರಸಾಯನ ವಿಜ್ಞಾನ) ಪದವಿ ಮುಗಿಸಿದ್ದ. ನಂತರ, ಸ್ಥಳೀಯ ಅಲ್‌ ಬದರ್ ಉಗ್ರ ಸಂಘಟನೆ ಸೇರಿದ್ದ. ಅಲ್ಲಿಯೇ ತರಬೇತಿ ಪಡೆದುಕೊಂಡಿದ್ದ’ ಎಂದು ಸಿಸಿಬಿ ಪೊಲೀಸರು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದರು.

‘ಇಸ್ಲಾಮಿಕ್ ಸ್ಟೇಟ್ (ಐಎಸ್) ಸಂಘಟನೆ ಸದಸ್ಯರ ಜೊತೆ ಒಡನಾಟ ಬೆಳೆಸಿಕೊಂಡಿದ್ದ ಫಹಾದ್, ಅವರ ಮೂಲಕವೂ ತರಬೇತಿ ಪಡೆದಿದ್ದ. ಫಹಾದ್ ತಂದೆ ಕೇರಳದವರು. ಆದರೆ, ಹಲವು ವರ್ಷಗಳ ಹಿಂದೆಯೇ ಕೇರಳ ತೊರೆದು ಪಾಕಿಸ್ತಾನಕ್ಕೆ ಹೋಗಿ ಅಲ್ಲಿಯೇ ಎರಡನೇ ಮದುವೆಯಾಗಿದ್ದರು. ತಂದೆ ಜೊತೆಯಲ್ಲಿ ಭಾರತಕ್ಕೆ ಹೋಗುವಂತೆ ಹೇಳಿದ್ದ ಉಗ್ರ ಸಂಘಟನೆ ಮುಖಂಡರು, ದಕ್ಷಿಣ ಭಾರತದಲ್ಲಿ ಭಯೋತ್ಪಾದನೆ ಕೃತ್ಯ ಎಸಗುವಂತೆ ಸೂಚನೆ ನೀಡಿದ್ದರು.’

‘ತಾತ್ಕಾಲಿಕ ವೀಸಾ ಮೂಲಕ ತಂದೆ ಜೊತೆ ಭಾರತಕ್ಕೆ ಬಂದಿದ್ದ ಆರೋಪಿ, ಕೆಲ ದಿನ ಕೇರಳದಲ್ಲಿ ವಾಸವಿದ್ದ. ನಂತರ, ದಕ್ಷಿಣ ಭಾರತದ ರಾಜ್ಯಗಳಲ್ಲಿ ಸುತ್ತಾಡಿ ಭಯೋತ್ಪಾದನಾ ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದ. ಈತನ ವಿರುದ್ಧ ಕೇರಳದಲ್ಲಿ ಮೊದಲ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ 8 ವರ್ಷಗಳ ಶಿಕ್ಷೆ ಆಗಿತ್ತು. ಮೈಸೂರು ಜಿಲ್ಲಾ ನ್ಯಾಯಾಲಯದ ಶೌಚಾಲಯದಲ್ಲಿ ಬಾಂಬ್‌ ಸ್ಫೋಟಗೊಂಡಿದ್ದ ಪ್ರಕರಣದಲ್ಲೂ ಫಹಾದ್ ಕೈವಾಡವಿತ್ತು’ ಎಂದು ಪೊಲೀಸರು ಆರೋಪ ಪಟ್ಟಿಯಲ್ಲಿ ಹೇಳಿದ್ದಾರೆ.

‘ಬಾಂಬ್ ತಯಾರಿಕೆಯಲ್ಲಿ ಪರಿಣತ ನಾಗಿದ್ದ ಫಹಾದ್, ಪಾಕ್‌ನ ಉಗ್ರರ ಜೊತೆ ಸಂಪರ್ಕದಲ್ಲಿದ್ದ. ಅವರು ಕಳುಹಿಸುತ್ತಿದ್ದ ಕಚ್ಚಾ ವಸ್ತುಗಳನ್ನು ಪಡೆದು ಬಾಂಬ್ ಸಿದ್ಧಪಡಿಸುತ್ತಿದ್ದ. ಉಗ್ರರು ಸೂಚಿಸುತ್ತಿದ್ದ ವ್ಯಕ್ತಿಗಳ ಕೈಗೆ ಬಾಂಬ್ ಕೊಡುತ್ತಿದ್ದ. 6 ಡೆಟೋನೇಟರ್, ಅಮೋನಿಯಂ ನೈಟ್ರೇಟ್ ದ್ರಾವಣ, ನಟ್ಟು, ಬೋಲ್ಟ್‌, ಬೇರಿಂಗ್ ಸೇರಿದಂತೆ ಹಲವು ಕಚ್ಚಾ ವಸ್ತುಗಳು ಈತನ ಬಳಿ ಸಿಕ್ಕಿದ್ದವು. ದಕ್ಷಿಣ ಭಾರತದಲ್ಲಿ ಭಯೋತ್ಪಾದನೆ ಕೃತ್ಯ ಎಸಗುವುದು ಹಾಗೂ ಹಿಂದೂ ಮುಖಂಡರನ್ನು ಹತ್ಯೆ ಮಾಡುವುದು ಇವರ ಪ್ರಮುಖ ಉದ್ದೇಶವಾಗಿತ್ತು’ ಎಂಬ ಮಾಹಿತಿಯೂ ಆರೋಪಪಟ್ಟಿಯಲ್ಲಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT