ಶುಕ್ರವಾರ, ಅಕ್ಟೋಬರ್ 18, 2019
28 °C
ಅಪಘಾತಕ್ಕೀಡಾದ ಕಾರುಗಳ ಎಂಜಿನ್ ಸಂಖ್ಯೆ ದುರ್ಬಳಕೆ

ಮೂವರ ಬಂಧನ; 40 ಲಕ್ಷ ಮೌಲ್ಯದ ಒಂಬತ್ತು ಕಾರು ವಶ

Published:
Updated:

ಬೆಂಗಳೂರು: ಗುಜರಿ ಮತ್ತು ಅಪಘಾತಕ್ಕೀಡಾದ ಕಾರುಗಳ ಎಂಜಿನ್ ಮತ್ತು ಚಾಸಿ ನಂಬರ್‌ಗಳನ್ನು ಕದ್ದ ಕಾರಿಗೆ ಅಳವಡಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಜಾಲವನ್ನು ಭೇದಿಸಿರುವ ಬಾಗಲಗುಂಟೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಸುರತ್ಕಲ್‌ನ ಅಲಿ ಅಹಮ್ಮದ್ (39), ಕೇರಳದ ದಿಲೀಶ್ (38) ಮತ್ತು ಶಾಜಿ ಕೇಶವನ್ (47) ಬಂಧಿತರು. ಆರೋಪಿಗಳಿಂದ ₹ 40 ಲಕ್ಷ ಮೌಲ್ಯದ ಒಂಬತ್ತು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್‍ನಲ್ಲಿ ಕಾರು ಗ್ಯಾರೇಜ್ ಹೊಂದಿರುವ ಅಲಿ ಅಹಮ್ಮದ್, ಗುಜರಿ ಮತ್ತು ಅಪಘಾತಕ್ಕೀಡಾದ ಕಾರುಗಳನ್ನು ಕಡಿಮೆ ಬೆಲೆಗೆ ಖರೀದಿಸುತ್ತಿದ್ದ. ತನ್ನ ಗ್ಯಾರೇಜ್‌ಗೆ ದುರಸ್ತಿಗೆ ಬಂದ ಕಾರುಗಳ ಮಾಡೆಲ್‌ ಮತ್ತು ಬಣ್ಣವನ್ನು ತಿಳಿಸಿ ಅದೇ ಮಾದರಿಯ ಕಾರುಗಳನ್ನು ಕಳವು ಮಾಡಲು ಸ್ನೇಹಿತರಾದ ದಿಲೀಶ್ ಮತ್ತು ಶಾಜಿಗೆ ಅಲಿ ಸೂಚಿಸುತ್ತಿದ್ದ. ಅವರಿಬ್ಬರೂ ಹಗಲು ವೇಳೆ
ಬೆಂಗಳೂರಿನಲ್ಲಿ ಸುತ್ತಾಡಿ ಕಳವು ಮಾಡಲು ಸೂಕ್ತವಾಗಿರುವ ಕಾರುಗಳನ್ನು ಗುರುತಿಸುತ್ತಿದ್ದರು.

‘ನಕಲಿ ಕೀ ಮತ್ತು ಚಿಪ್‌ ಬಳಸಿ, ಹಗಲು ವೇಳೆ ನೋಡಿದ್ದ ಕಾರುಗಳನ್ನು ರಾತ್ರಿ ಅವರಿಬ್ಬರೂ ಕಳವು ಮಾಡುತ್ತಿದ್ದರು. ಬಳಿಕ, ಪೊಲೀಸರಿಗೆ ಸಿಕ್ಕಿಬೀಳಬಾರದೆಂಬ ಕಾರಣಕ್ಕೆ ರಾಷ್ಟ್ರೀಯ ಹೆದ್ದಾರಿ ಮತ್ತು ಟೋಲ್‍ಗಳಿರುವ ರಸ್ತೆಗಳಲ್ಲಿ ಹೋಗದೆ ಒಳರಸ್ತೆ
ಗಳ ಮೂಲಕ ಮಂಗಳೂರು ತಲುಪುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ ಮತ್ತು ಟೋಲ್‍ಗಳಿರುವ ರಸ್ತೆಗಳಲ್ಲಿ ಹೋದರೆ ಸಿಸಿಟಿವಿ ಕ್ಯಾಮೆರಾಗಳಲ್ಲಿ ದೃಶ್ಯ ಸೆರೆಯಾಗಬಹುದೆಂಬ ಭೀತಿಯಿಂದ ಈ ರೀತಿ ಮಾಡುತ್ತಿದ್ದರು.’

ಕದ್ದ ಕಾರುಗಳನ್ನು ಕಡಿಮೆ ಬೆಲೆಗೆ ಅಲಿ ಅಹಮ್ಮದ್‍ಗೆ ನೀಡುತ್ತಿದ್ದರು. ತನ್ನ ಗ್ಯಾರೇಜಿನಲ್ಲಿರುವ ಗುಜರಿ ಮತ್ತು ಅಪಘಾತಕ್ಕೀಡಾದ ಕಾರುಗಳ ಎಂಜಿನ್ ಮತ್ತು ಚಾಸಿ ನಂಬರ್‌ಗಳನ್ನು ತಿರುಚಿ, ಕದ್ದ ಕಾರಿಗೆ ಅಲಿ ಅಳವಡಿಸುತ್ತಿದ್ದ. ಗುಜರಿ ಮತ್ತು ಅಪಘಾತವಾದ ಕಾರುಗಳ ದಾಖಲೆಗಳನ್ನು ಗ್ರಾಹಕರಿಗೆ ತೋರಿಸುತ್ತಿದ್ದ ಅಲಿ, ಕದ್ದ ಕಾರುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದ. ಅಲಿ ನೀಡುತ್ತಿದ್ದ ಹಣವನ್ನು ದಿಲೀಶ್ ಮತ್ತು ಶಾಜಿ, ವೇಶ್ಯಾವಾಟಿಕೆ ಮತ್ತು ಮದ್ಯಸೇವಿಸಲು ಬಳಸುತ್ತಿದ್ದರು. ಇದೇ ರೀತಿ ಕಳವು ಮಾಡಿ ತಂದಿದ್ದ ಎಂಟು ಕಾರುಗಳನ್ನು ಒಂದು ವರ್ಷದ ಹಿಂದೆ ಸಾಲಿ ಎಂಬ ಮಧ್ಯವರ್ತಿಗೆ ಅಲಿ ಮಾರಾಟ ಮಾಡಿದ್ದ. ಸಾಲಿ ಇತ್ತೀಚೆಗೆ ಮೃತಪಟ್ಟಿದ್ದು, ಆತ ಯಾರಿಗೆ ಮಾರಾಟ ಮಾಡಿದ್ದಾನೆ ಎನ್ನುವುದು ಗೊತ್ತಾಗಿಲ್ಲ ಎಂದು ಪೊಲೀಸರು ತಿಳಿಸಿದರು.

ಸಿಸಿಟಿವಿ ಕ್ಯಾಮೆರಾ ನೀಡಿದ ಸುಳಿವು!

ಮನೆ ಮುಂದೆ ಆ. 28ರಂದು ರಾತ್ರಿ ನಿಲ್ಲಿಸಿದ್ದ ತಮ್ಮ ಮಾರುತಿ 800 ಕಾರು ಆ. 30ರಂದು ಬೆಳಿಗ್ಗೆ ಕಾಣೆಯಾಗಿದೆ ಎಂದು ಬಾಗಲಗುಂಟೆ ವಿನಾಯಕನಗರದ ನಿವಾಸಿ ರವಿಕುಮಾರ್ ಎಂಬುವವರು ಸ್ಥಳೀಯ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಅವರ ಮನೆ ಸಮೀಪದ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದಾಗ ಇಬ್ಬರು ಕಳವು ಮಾಡುತ್ತಿರುವುದು ಗೊತ್ತಾಗಿತ್ತು. ಈ ಸುಳಿವಿನ ಆಧಾರದಲ್ಲಿ ದಿಲೀಶ್ ಮತ್ತು ಶಾಜಿಯನ್ನು ಪೊಲೀಸರು ಬಂಧಿಸಿದ್ದರು. ಅವರು ನೀಡಿದ ಮಾಹಿತಿ ಆಧರಿಸಿ ಮಂಗಳೂರಿಗೆ ತೆರಳಿ ಅಲಿ ಅಹಮ್ಮದ್‍ನನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.

‘ತಂತ್ರ’ ಬಳಸಿ ಕಾರು ಕಳವು

ನಕಲಿ ಕೀ ಬಳಸಿ ಕಾರು ಕಳವು ಮಾಡುವ ತಂತ್ರವನ್ನು ಆರೋಪಿ ದಿಲೀಶ್, ಯೂ ಟ್ಯೂಬ್‍ನಲ್ಲಿರುವ ವಿಡಿಯೊ ನೋಡಿ ಕಲಿತಿದ್ದ ಎಂಬ ಅಂಶ ವಿಚಾರಣೆ ವೇಳೆ ಗೊತ್ತಾಗಿದೆ. ಅದರಲ್ಲಿ ಬರುವ ಮಾಹಿತಿಯಂತೆ ಚಾಲಕನ ಆಸನದ ಸಮೀಪದ ಕಿಟಕಿಯ ಗಾಜು ಒಡೆದು ನಕಲಿ ಕೀ ಬಳಸಿ ಆರೋಪಿಗಳು ಕಾರು ಕಳವು ಮಾಡುತ್ತಿದ್ದರು.

Post Comments (+)