ಧ್ಯಾನಕ್ಕೆ ಕೂರಿಸಿ 4 ಕೆ.ಜಿ ಚಿನ್ನ ದೋಚಿದ್ದರು!

7
ಕದ್ದ ಆಭರಣ ಮಾರಿ ಐಷಾರಾಮಿ ಬದುಕು ನಡೆಸುತ್ತಿದ್ದ ಆಟೊ ಚಾಲಕ

ಧ್ಯಾನಕ್ಕೆ ಕೂರಿಸಿ 4 ಕೆ.ಜಿ ಚಿನ್ನ ದೋಚಿದ್ದರು!

Published:
Updated:
Deccan Herald

ಬೆಂಗಳೂರು: ‘ಬಾಬಾ ಪ್ರತ್ಯಕ್ಷನಾಗುತ್ತಾನೆ’ ಎಂದು ಮನೆಯೊಡತಿಯನ್ನು ಒಂದು ತಾಸು ಧ್ಯಾನಕ್ಕೆ ಕೂರಿಸಿ ನಾಲ್ಕು ಕೆ.ಜಿ.ಚಿನ್ನ ದೋಚಿ ಫ್ಲ್ಯಾಟ್‌ನಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ ಆಟೊ ಚಾಲಕ ಕೋರಮಂಗಲ ಪೊಲೀಸರ ಅತಿಥಿಯಾಗಿದ್ದಾನೆ.

ತಮಿಳುನಾಡಿನ ಕಿರಣ್ ಕುಮಾರ್ ಬಂಧಿತ ಆರೋಪಿ. ಆತನ ಪತ್ನಿ ರೇಷ್ಮಾ ಈ ಕೃತ್ಯದ ಸೂತ್ರಧಾರಿ. ಗರ್ಭಿಣಿ ಎಂಬ ಕಾರಣಕ್ಕೆ ಅವರನ್ನು ವಶಕ್ಕೆ ಪಡೆದಿರಲಿಲ್ಲ. ಎರಡು ದಿನಗಳ ಹಿಂದಷ್ಟೇ ರೇಷ್ಮಾ ಗಂಡು ಮಗುವಿಗೆ ಜನ್ಮ ನೀಡಿದ್ದು, ಮಂಡ್ಯದ ತವರು ಮನೆಯಲ್ಲಿ ಆರೈಕೆ ಪಡೆಯುತ್ತಿದ್ದಾರೆ. ಕೆಲ ದಿನಗಳ ಬಳಿಕ ಅವರನ್ನು ವಶಕ್ಕೆ ಪಡೆಯಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.‌

ಏಳು ವರ್ಷಗಳ ಹಿಂದೆ ಪ್ರೇಮ ವಿವಾಹವಾಗಿದ್ದ ಕಿರಣ್ ಹಾಗೂ ರೇಷ್ಮಾ, ಜಕ್ಕಸಂದ್ರದಲ್ಲಿ ಶೆಡ್‌ ಬಾಡಿಗೆ ಪಡೆದು ವಾಸವಾಗಿದ್ದರು. ಕೋರಮಂಗದಲ್ಲಿ ನೆಲೆಸಿದ್ದ ಜಯಂತ್ ಎಸ್‌.ಬೇಡ ಎಂಬ ಉದ್ಯಮಿಯ ಮನೆಗೆ ಕೆಲಸಕ್ಕೆ ಹೋಗುತ್ತಿದ್ದ ರೇಷ್ಮಾ, ಆ ದಂಪತಿ ಬಳಿ ಹೆಚ್ಚಿನ ಒಡವೆ ಇರುವುದನ್ನು ಗಮನಿಸಿದ್ದರು. ಅಲ್ಲದೆ, ಜಯಂತ್ ಪತ್ನಿ ಯೋಗಿಣಿ ಮಹಾನ್ ದೈವ ಭಕ್ತೆ ಎಂಬುದನ್ನೂ ಅರಿತಿದ್ದರು.

ಆಭರಣ ದೋಚಲು ನಿರ್ಧರಿಸಿದ ರೇಷ್ಮಾ, ತಮ್ಮ ಸಂಚನ್ನು ಪತಿ ಬಳಿ ಹೇಳಿದ್ದರು. ಯೋಗಿಣಿ ಒಬ್ಬರೇ ಮನೆಯಲ್ಲಿದ್ದಾಗ, ‘ನಿಮ್ಮ ಮಗನಿಗೆ ಇತ್ತೀಚೆಗೆ ಮದುವೆಯಾಗಿದೆ. ಅವರ ಜಾತಕ ಸರಿಯಿಲ್ಲ. ಮಹಾವತಾರ ಬಾಬಾನ ಪೂಜೆ ಮಾಡಿಸದಿದ್ದರೆ ಅವರು ರಕ್ತಕಾರಿ ಸತ್ತು ಹೋಗುತ್ತಾರೆ’ ಎಂದು ಹೆದರಿಸಿದ್ದರು. ಆ ಮಾತಿನಿಂದ ಹೆದರಿದ ಯೋಗಿಣಿ, ಪೂಜೆ ಮಾಡಿಸುವುದಾಗಿ ಹೇಳಿದ್ದರು.

ಕೆಲ ದಿನಗಳ ಬಳಿಕ, ‘ಮಂಡ್ಯದಲ್ಲಿ ನಮ್ಮ ಜಮೀನು ಇದೆ. ಬೇಸಾಯಕ್ಕಾಗಿ ಭೂಮಿ ಅಗೆಯುತ್ತಿದ್ದಾಗ ಬಾಬಾನ ಮೂರ್ತಿ ಸಿಕ್ಕಿತು. ನಿಮ್ಮ ಮನೆಯ ನೆಲಮಹಡಿ ಕೊಠಡಿಯಲ್ಲಿ ಅದನ್ನು ಪ್ರತಿಷ್ಠಾಪಿಸುತ್ತೇವೆ. ಸ್ವಲ್ಪ ಆಭರಣಗಳನ್ನು ಕೊಡಿ. ಪೂಜೆ ಸಲ್ಲಿಸಿ ಪ್ರತಿಷ್ಠಾಪನೆ ಮಾಡೋಣ’ ಎಂದು ನಂಬಿಸಿ ಅರ್ಧ ಕೆ.ಜಿಯಷ್ಟು ಒಡವೆ ಪಡೆದುಕೊಂಡಿದ್ದರು.

ಆ ನಂತರ ಬಾಬಾ ಮೂರ್ತಿಯನ್ನು ತಂದು ನೆಲಮಹಡಿಯ ಕೊಠಡಿಯಲ್ಲಿಟ್ಟಿದ್ದ ರೇಷ್ಮಾ, ‘ನೀವು ಕೊಟ್ಟಿದ್ದ ಒಡವೆಗಳಿಂದ ಬಾಬಾನನ್ನು ಅಲಂಕಾರ ಮಾಡಿದ್ದೇನೆ. ಅದನ್ನು ಈಗಲೇ ನೀವು ನೋಡುವಂತಿಲ್ಲ’ ಎಂದಿದ್ದರು.

ಪೂರ್ತಿ ಒಡವೆ ದೋಚುವ ಸಲುವಾಗಿ ಇತ್ತೀಚೆಗೆ ಪತಿಯೊಂದಿಗೆ ಮನೆಗೆ ಬಂದಿದ್ದ ಅವರು, ‘ನೀವು ಒಂದು ತಾಸು ಧ್ಯಾನ ಮಾಡಿ. ಬಾಬಾ ಪ್ರತ್ಯಕ್ಷನಾಗುತ್ತಾನೆ’ ಎಂದು ಮನೆಯೊಡತಿಯನ್ನು ದೇವರಕೋಣೆಯಲ್ಲಿ ಧ್ಯಾನಕ್ಕೆ ಕೂರಿಸಿದ್ದರು. ಈ ವೇಳೆ ಕೋಣೆಯ ಲಾಕರ್‌ನಿಂದ 3.5 ಕೆ.ಜಿ ಚಿನ್ನ, 2.5 ಕೆ.ಜಿ.ಬೆಳ್ಳಿ ಹಾಗೂ ₹ 2 ಲಕ್ಷ ನಗದು ದೋಚಿ ಪರಾರಿಯಾಗಿದ್ದರು. ಯೋಗಿಣಿ ಎಚ್ಚರಗೊಂಡಾಗ ಪ್ರಕರಣ ಬೆಳಕಿಗೆ ಬಂದಿತ್ತು. ಈ ಸಂಬಂಧ ಅವರ ಪತಿ ಕೋರಮಂಗಲ ಠಾಣೆಗೆ ದೂರು ಕೊಟ್ಟಿದ್ದರು.

‘ಜಕ್ಕಸಂದ್ರಕ್ಕೆ ಹೋದಾಗ ದಂಪತಿ ಮನೆ ಖಾಲಿ ಮಾಡಿದ್ದರು. ಸ್ಥಳೀಯರನ್ನು ವಿಚಾರಿಸಿದಾಗ ರೇಷ್ಮಾ ಮಂಡ್ಯದವರು ಎಂದು ಗೊತ್ತಾಯಿತು. ಪಿಎಸ್ಐ ಈಶ್ವರಿ ನೇತೃತ್ವದ ತಂಡ ಮಂಡ್ಯಕ್ಕೆ ತೆರಳಿ ಅವರನ್ನು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡರು. ಗರ್ಭಿಣಿ ಎಂಬ ಕಾರಣಕ್ಕೆ ವಶಕ್ಕೆ ಪಡೆಯದೆ, ಅವರು ನೀಡಿದ ಮಾಹಿತಿ ಆಧರಿಸಿ ಪತಿಯನ್ನು ಕೋರಮಂಗಲದ ಫ್ಲ್ಯಾಟ್‌ನಲ್ಲಿ ಬಂಧಿಸಿದೆವು’ ಎಂದು ತನಿಖಾಧಿಕಾರಿಗಳು ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !