ಸೋಮವಾರ, ಮಾರ್ಚ್ 1, 2021
17 °C

49 ಆರೋಗ್ಯ ಪರಿವೀಕ್ಷಕರು ಮಾತೃ ಇಲಾಖೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಿಯೋಜನೆ ಮೇರೆಗೆ ಕಾರ್ಯ ನಿರ್ವಹಿಸುತ್ತಿದ್ದ 49 ಮಂದಿ ಆರೋಗ್ಯ ಪರಿವೀಕ್ಷಕರನ್ನು ಮಾತೃ ಇಲಾಖೆಗೆ ಕಳುಹಿಸಿ ಬಿಬಿಎಂಪಿ ಶುಕ್ರವಾರ ಆದೇಶ ಹೊರಡಿಸಿದೆ. ಒಟ್ಟು 23 ಮಂದಿ ಹಿರಿಯ ಆರೋಗ್ಯ ಪರಿವೀಕ್ಷಕರು ಹಾಗೂ 26 ಕಿರಿಯ ಆರೋಗ್ಯ ಪರಿವೀಕ್ಷಕರನ್ನು ಮಾತೃ ಇಲಾಖೆಗೆ ಕಳುಹಿಸಿಕೊಡಲಾಗಿದೆ.

ವೃಂದ ಮತ್ತು ನೇಮಕಾತಿ ನಿಯಮಗಳ ಪ್ರಕಾರ, ಅನ್ಯ ಇಲಾಖೆಗಳಿಂದ ನಿಯೋಜನೆ ಮೇರೆಗೆ ಬಿಬಿಎಂಪಿಯಲ್ಲಿ ಗರಿಷ್ಠ ಎರಡು ವರ್ಷ ಮಾತ್ರ ಕಾರ್ಯ ನಿರ್ವಹಿಸಲು ಅವಕಾಶ ಇದೆ. ಆದರೆ, ಅನೇಕರು ನಿಯೋಜನೆಯನ್ನು ವಿಸ್ತರಿಸಿಕೊಂಡು 10 ವರ್ಷಗಳಿಗೂ ಹೆಚ್ಚು ಕಾಲ ಬಿಬಿಎಂಪಿಯಲ್ಲಿ ನಿಯೋಜನೆ ಮೇರೆಗೆ ಕಾರ್ಯ ನಿರ್ವಹಿಸುತ್ತಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಬಿಬಿಎಂಪಿ ನೌಕರರ ಕ್ಷೇಮಾಭಿವೃದ್ಧಿ ಸಂಘವು ಹೈಕೋರ್ಟ್‌ ಮೊರೆ ಹೋಗಿತ್ತು. ನಿಯಮ ಮೀರಿ ನಿಯೋಜನೆ ಮೇರೆಗೆ ಬಿಬಿಎಂಪಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಜಂಟಿ ಆಯುಕ್ತರು, ಉಪ ಆಯುಕ್ತರು ಮುಖ್ಯ ಎಂಜಿನಿಯರ್‌ಗಳು, ಕಾರ್ಯಪಾಲಕ ಎಂಜಿನಿಯರ್‌ಗಳು, ಸಹಾಯಕ ಎಂಜಿನಿಯರ್‌ಗಳು ಹಾಗೂ ಆರೋಗ್ಯ ಪರಿವೀಕ್ಷಕರನ್ನು ಮಾತೃ ಇಲಾಖೆಗೆ ಕಳುಹಿಸುವಂತೆ ಹೈಕೋರ್ಟ್‌ನ ಏಕ ಸದಸ್ಯ ಪೀಠವು 2020ರ ಜ 13ರಂದು ಆದೇಶ ಮಾಡಿತ್ತು. ಈ ಆದೇಶ ಜಾರಿ ಮಾಡದ ಕಾರಣಕ್ಕೆ ಸಂಘವು 2020ರ ಡಿಸೆಂಬರ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿತ್ತು. ಇದರ ಬೆನ್ನಲ್ಲೇ, ಬಿಬಿಎಂಪಿ ನಿಯೋಜನೆ ಅವಧಿ ಪೂರ್ಣಗೊಂಡ ಬಳಿಕವೂ ಮುಂದುವರಿದಿರುವ ಅಧಿಕಾರಿಗಳನ್ನು ಮಾತೃ ಇಲಾಖೆಗೆ ಕಳುಹಿಸಲು ಕ್ರಮ ಕೈಗೊಂಡಿದೆ.

‘ಆರೋಗ್ಯ ಇಲಾಖೆಯ ಅನೇಕ ನೌಕರರು 10–15 ವರ್ಷಗಳಿಂದ ಬಿಬಿಎಂಪಿಯಲ್ಲಿ ನಿಯೋಜನೆ ಮೇರೆಗೆ ಕಾರ್ಯ ನಿರ್ವಹಿಸುತ್ತಿದ್ದರು. ಇಷ್ಟು ವರ್ಷ ನಿಯೋಜನೆ ಮೇರೆಗೆ ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸಲು ಅವಕಾಶವೇ ಇಲ್ಲ. ಅವರನ್ನು ಮಾತೃ ಇಲಾಖೆಗೆ ಕಳುಹಿಸುವಂತೆ ಹೈಕೋರ್ಟ್‌ ಆದೇಶ ಹೊರಡಿಸಿದ ಬಳಿಕವೂ ಒಂದು ವರ್ಷ ಅವರು ಹುದ್ದೆಯಲ್ಲಿ ಮುಂದುವರಿದಿದ್ದರು. ಕೊನೆಗೂ ಅವರನ್ನು ಬಿಬಿಎಂಪಿಯು ಮಾತೃ ಇಲಾಖೆಗೆ ಕಳುಹಿಸುತ್ತಿರುವುದು ಸ್ವಾಗತಾರ್ಹ’ ಎಂದು ಬಿಬಿಎಂಪಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಮೃತರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಿಬಿಎಂಪಿಯಲ್ಲಿ ಹಿರಿಯ ಆರೋಗ್ಯ ಪರಿವೀಕ್ಷಕರ 198 ಹುದ್ದೆಗಳು ಹಾಗೂ ಕಿರಿಯ ಆರೋಗ್ಯ ಪರಿವೀಕ್ಷಕರ 115 ಹುದ್ದೆಗಳಿವೆ. ಹೊಸ ವೃಂದ ಮತ್ತು ನೇಮಕಾತಿ ನಿಯಮಗಳ ಪ್ರಕಾರ ಹಿರಿಯ ಆರೋಗ್ಯ ಪರಿವೀಕ್ಷಕರ ಹುದ್ದೆಗಳಲ್ಲಿ ಶೇ75ರಷ್ಟನ್ನು ಬಡ್ತಿ ಮೂಲಕ ಭರ್ತಿ ಮಾಡಬೇಕು. ಒಟ್ಟು ಹುದ್ದೆಗಳಲ್ಲಿ ಶೇ 25ರಷ್ಟು ಹುದ್ದೆಗಳನ್ನು ಮಾತ್ರ ನಿಯೋಜನೆ ಮೂಲಕ ಭರ್ತಿ ಮಾಡಿಕೊಳ್ಳಲು ಅವಕಾಶ ಇದೆ. ಕಿರಿಯ ಆರೋಗ್ಯ ಪರಿವೀಕ್ಷಕ ಹುದ್ದೆಗಳಲ್ಲಿ ಶೇ 50ರಷ್ಟನ್ನು ನೇರ ನೇಮಕಾತಿ ಮೂಲಕ ಹಾಗೂ ಶೇ 50ರಷ್ಟನ್ನು ಭಡ್ತಿ ಮೂಲಕ ತುಂಬ ಬೇಕು. ಕಿರಿಯ ಆರೋಗ್ಯ ಪರಿವೀಕ್ಷಕ ಹುದ್ದೆಗಳನ್ನು ನಿಯೋಜನೆ ಮೂಲಕ ತುಂಬಲು ಈಗಿನ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಅವಕಾಶ ಇಲ್ಲ’ ಎಂದು ಬಿಬಿಎಂಪಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು