ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

52 ಸಾವಿರ ಮನೆಗಳ ನೀರಿನ ಸಂಪರ್ಕ ಕಡಿತ

Last Updated 5 ಮಾರ್ಚ್ 2021, 21:38 IST
ಅಕ್ಷರ ಗಾತ್ರ

ಬೆಂಗಳೂರು: ಅನಧಿಕೃತವಾಗಿ ನೀರು ಮತ್ತು ಒಳಚರಂಡಿ ಸಂಪರ್ಕ ಪಡೆದಿದ್ದ 52 ಸಾವಿರ ಮನೆಗಳ ನೀರಿನ ಸಂಪರ್ಕಗಳನ್ನು ಜಲಮಂಡಳಿಯು ಕಡಿತಗೊಳಿಸಿದ್ದು, ಶುಲ್ಕ ಪಾವತಿಸಿದ 28 ಸಾವಿರ ಮನೆಗಳ ಸಂಪರ್ಕ ಸಕ್ರಮಗೊಳಿಸಲಾಗಿದೆ.

‘ಜಲಮಂಡಳಿಗೆ ಯಾವುದೇ ಶುಲ್ಕ ನೀಡದೆ, ಗಮನಕ್ಕೆ ತರದೆ ನೀರು ಮತ್ತು ಒಳಚರಂಡಿ ಸಂಪರ್ಕ ಪಡೆದಿದ್ದ 52 ಸಾವಿರ ಮನೆಗಳನ್ನು ಗುರುತಿಸಲಾಗಿತ್ತು. ಈ ಪೈಕಿ, ಶುಲ್ಕ ಮತ್ತು ದಂಡ ಪಾವತಿಸಿದ 28 ಸಾವಿರ ಮನೆಗಳ ಸಂಪರ್ಕವನ್ನು ಸಕ್ರಮಗೊಳಿಸಲಾಗಿದೆ’ ಎಂದು ಜಲಮಂಡಳಿ ಅಧ್ಯಕ್ಷ ಎನ್. ಜಯರಾಂ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೊದಲಿನಿಂದಲೂ ಈ ರೀತಿ ಅನಧಿಕೃತವಾಗಿ ಸಂಪರ್ಕ ಪಡೆಯುವುದು ನಡೆಯುತ್ತಲೇ ಇದೆ. ಅನಧಿಕೃತ ಸಂಪರ್ಕ ಪಡೆದವರ ಪತ್ತೆ ಕಾರ್ಯ ಚುರುಕುಗೊಂಡಿದೆ. ಈ ರೀತಿ ಕಾನೂನುಬಾಹಿರವಾಗಿ ಸಂಪರ್ಕ ಪಡೆದವರ ವಿರುದ್ಧ ಜಲಮಂಡಳಿ ಕಾಯ್ದೆಯಡಿ ನಿಯಾಮನುಸಾರ ದಂಡ ವಿಧಿಸಲಾಗುವುದು’ ಎಂದು ಹೇಳಿದರು.

₹4 ಸಾವಿರದವರೆಗೆ ದಂಡ: ಅನಧಿಕೃತ ಸಂಪರ್ಕ ಪಡೆದ ಅವಧಿ ಮತ್ತು ಬಳಸಿದ ನೀರಿನ ಪ್ರಮಾಣ ಆಧರಿಸಿ ದಂಡ ವಿಧಿಸಲಾಗುತ್ತದೆ. ಗರಿಷ್ಠ ₹3000ದಿಂದ ₹4000ದವರೆಗೆ ದಂಡ ವಿಧಿಸಲು ಅವಕಾಶವಿದೆ. ದೊಡ್ಡ ವಸತಿ ಸಮುಚ್ಚಯ ಅಥವಾ ಅಪಾರ್ಟ್‌ಮೆಂಟ್‌ ಮತ್ತು ಸಣ್ಣ ಕೈಗಾರಿಕೆಗಳಿಂದ ಪ್ರೊರೇಟಾ ಶುಲ್ಕವನ್ನೂ ವಸೂಲಿ ಮಾಡಲಾಗುತ್ತದೆ.

ಪ್ರೊರೇಟಾ ಶುಲ್ಕ ಪಾವತಿಸುವವರು ನೀರಿನ ಸಂಪರ್ಕ ಪಡೆಯಲು ₹100 ಶುಲ್ಕ ಪಾವತಿಸಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ 42 ದಿನಗಳಲ್ಲಿ ಮಂಡಳಿಯ ಎಲ್ಲ ಕಾರ್ಯ ವಿಧಾನಗಳನ್ನು ಪಾಲನೆ ಮಾಡಬೇಕು. ಬಳಿಕ ನೀರಿನ ಸಂಪರ್ಕ ಕಲ್ಪಿಸಲಾಗುವುದು ಎಂದು ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದರು.

ಗೃಹ ಬಳಕೆಗೆ 14 ದಿನಗಳೊಳಗೆ ಅರ್ಜಿ: ಗೃಹೋಪಯೋಗಕ್ಕೆ ಸಂಪರ್ಕ ಪಡೆಯುವವರು ಮಂಡಳಿಯ ವೆಬ್‌ಸೈಟ್ www.bwssb.gov.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ₹100 ಪಾವತಿಸಿ ಅರ್ಜಿ ಸಲ್ಲಿಸಿದ 14 ದಿನಗಳೊಳಗೆ ವಿಳಾಸ ಹಾಗೂ ಮಂಡಳಿ ಕೇಳಿರುವ ಇನ್ನಿತರ ಕಾರ್ಯ ವಿಧಾನ ಪಾಲಿಸಬೇಕಾಗುತ್ತದೆ. ಎಲ್ಲ ದಾಖಲೆಗಳನ್ನು ಪರಿಶೀಲಿಸಿದ ಬಳಿಕ ನೀರಿನ ಸಂಪರ್ಕ ನೀಡಲಾಗುತ್ತದೆ.

ಜಲಮಂಡಳಿ ಫೋನ್ ಇನ್ ಇಂದು

ಜಲಮಂಡಳಿಯು ಇದೇ 6ರಂದು (ಶನಿವಾರ) ಬೆಳಿಗ್ಗೆ 9ರಿಂದ 10.30ರವರೆಗೆ ನೇರ ಫೋನ್‌ ಇನ್‌ ಕಾರ್ಯಕ್ರಮ ಹಮ್ಮಿಕೊಂಡಿದೆ. ಜಲಮಂಡಳಿ ಅಧ್ಯಕ್ಷ ಎನ್. ಜಯರಾಂ ಅಹವಾಲು ಆಲಿಸಲಿದ್ದಾರೆ.

ಕುಡಿಯುವ ನೀರಿನ ಸಮಸ್ಯೆ ಮತ್ತು ಕೊಳವೆಗಳಿಂದ ತ್ಯಾಜ್ಯ ನೀರು ಬರುತ್ತಿರುವ ಬಗ್ಗೆ, ಜಲಮಾಪನ ಹಾಗೂ ನೀರಿನ ಬಿಲ್ಲಿನ ಸಮಸ್ಯೆಯ ಬಗ್ಗೆ ಹೇಳಬಹುದು.

ನೀರಿನ ಸಂಪರ್ಕ ಹೊಂದಿರುವ ಗ್ರಾಹಕರು ತಮ್ಮ ಆರ್.ಆರ್.ಸಂಖ್ಯೆ ತಿಳಿಸಿ ದೂರು ನೀಡಬಹುದು. ದೂರವಾಣಿ ಸಂಖ್ಯೆ: 08022945119.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT