ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಗಭದ್ರಾ ಸ್ಟೀಲ್ಸ್‌ ಇನ್ನು ನೆನಪು...

70 ವರ್ಷದ ಕಾರ್ಖಾನೆ ಮುಚ್ಚಲು ಕೇಂದ್ರ ಸರ್ಕಾರ ನಿರ್ಧಾರ
Last Updated 11 ಜನವರಿ 2018, 19:30 IST
ಅಕ್ಷರ ಗಾತ್ರ

ಹೊಸಪೇಟೆ: ನಗರದ ಹೊರವಲಯದಲ್ಲಿ 70 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿದ್ದ, ಸರ್ಕಾರಿ ಸ್ವಾಮ್ಯದ ತುಂಗಭದ್ರಾ ಸ್ಟೀಲ್ಸ್‌ ಪ್ರೊಡಕ್ಟ್ಸ್‌ ಲಿಮಿಟೆಡ್‌ (ಟಿ.ಎಸ್‌.ಪಿ.ಎಲ್‌.) ಇನ್ನು ನೆನಪಾಗಿ ಮಾತ್ರ ಉಳಿಯಲಿದೆ.

  ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಟಿ.ಎಸ್‌.ಪಿ. ಮುಚ್ಚುವ ನಿರ್ಧಾರ ಕೈಗೊಂಡಿರುವುದೇ ಇದಕ್ಕೆ ಕಾರಣ. 2015ರಲ್ಲೇ ಸಂಸ್ಥೆಯನ್ನು ಮುಚ್ಚಲು ನಿರ್ಧರಿಸಲಾಗಿತ್ತು. ಈಗ ಅದಕ್ಕೆ ಅಂತಿಮ ಮುದ್ರೆ ಬಿದ್ದಿದೆ. ಸಂಸ್ಥೆಗೆ ಸೇರಿದ ಒಟ್ಟು 82.37 ಎಕರೆ ಜಾಗವಿದೆ. ಪ್ರತಿ ಎಕರೆ ಜಾಗವನ್ನು ₹ 66 ಲಕ್ಷಕ್ಕೆ ಕರ್ನಾಟಕ ಹೌಸಿಂಗ್‌ ಬೋರ್ಡ್‌ಗೆ ಮಾರಾಟ ಮಾಡಲಾಗುವುದು ಎಂದು ಕೇಂದ್ರ ತಿಳಿಸಿದೆ.

ತುಂಗಭದ್ರಾ ಜಲಾಶಯ ನಿರ್ಮಾಣಕ್ಕೂ ಮುನ್ನ ಅಂದರೆ 1948ರಲ್ಲಿ ಇದು ಹುಟ್ಟಿಕೊಂಡಿತ್ತು. ಆಗ ಅದಕ್ಕೆ ಯಾವುದೇ ಹೆಸರಿರಲಿಲ್ಲ. 1960ರಲ್ಲಿ ಅದಕ್ಕೆ ತುಂಗಭದ್ರಾ ಸ್ಟೀಲ್ಸ್‌ ಪ್ರೊಡಕ್ಟ್ಸ್‌ ಲಿಮಿಟೆಡ್‌ ಎಂದು ನಾಮಕರಣ ಮಾಡಲಾಯಿತು. ಜಲಾಶಯದ ಕ್ರಸ್ಟ್‌ ಗೇಟ್‌ ಸೇರಿದಂತೆ ಇತರ ಉಕ್ಕಿನ ವಸ್ತುಗಳನ್ನು ಸಂಸ್ಥೆಯಲ್ಲಿ ನಿರ್ಮಿಸಲಾಗುತ್ತಿತ್ತು. ಅಷ್ಟೇ ಅಲ್ಲ, ಇಲ್ಲಿ ತಯಾರಿಸಿದ ಕ್ರಸ್ಟ್‌ ಗೇಟ್‌ಗಳು, ಇತರ ಸಾಧನಗಳನ್ನು ಅನ್ಯ ರಾಜ್ಯ ಹಾಗೂ ಹೊರದೇಶಗಳಲ್ಲಿನ ಜಲಾಶಯಕ್ಕೂ ರವಾನಿಸಲಾಗುತ್ತಿತ್ತು.

ಸಂಸ್ಥೆಯ ಶೇ 79ರಷ್ಟು ಷೇರು ಕೇಂದ್ರಕ್ಕೆ ಸೇರಿದ್ದರೆ, ಶೇ 12ರಷ್ಟು ಅವಿಭಜಿತ ಆಂಧ್ರ ಪ್ರದೇಶ ಹಾಗೂ ಶೇ 9ರಷ್ಟು ರಾಜ್ಯದ ಪಾಲು ಇತ್ತು. ಒಟ್ಟು 350 ಕಾಯಂ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದರು. ಸಾವಿರಕ್ಕೂ ಹೆಚ್ಚು ಗುತ್ತಿಗೆ ನೌಕರರಿದ್ದರು. ಸುಮಾರು ನಾಲ್ಕು ದಶಕಗಳ ಕಾಲ ಲಾಭದ ಹಳಿಯಲ್ಲಿ ನಡೆಯುತ್ತಿದ್ದ ಸಂಸ್ಥೆಗೆ 2000ನೇ ಇಸ್ವಿಯಲ್ಲಿ ತೀವ್ರ ಆರ್ಥಿಕ ಮುಗ್ಗಟ್ಟು ಎದುರಾಗಿತ್ತು. ಆಗ ಸ್ವಯಂ ನಿವೃತ್ತಿ ಯೋಜನೆಯಡಿ (ವಿಆರ್‌ಎಸ್‌) 278 ಸಿಬ್ಬಂದಿ ನಿವೃತ್ತರಾದರು. ನಂತರ 2015ರಲ್ಲಿ ಇನ್ನುಳಿದ 72 ಜನ ಕೂಡ ಸ್ವಯಂ ನಿವೃತ್ತಿ ಪಡೆದರು.

‘2000ನೇ ಇಸ್ವಿ ನಂತರ ಸಂಸ್ಥೆಯಲ್ಲಿ ಕೆಲಸ ಕಮ್ಮಿಯಾಗಿತ್ತು. ಸಂಸ್ಥೆ ಮುಚ್ಚಲಾಗುತ್ತದೆ ಎಂದು ಸುದ್ದಿ ಹಬ್ಬಿಸಿದರು. ಅಷ್ಟೇ ಅಲ್ಲ, ನಂತರ ಒತ್ತಡ ಹೇರಿ ವಿ.ಆರ್‌.ಎಸ್‌. ಪಡೆದುಕೊಳ್ಳುವಂತೆ ಮಾಡಿದರು. ಒಳ್ಳೆಯ ಸಂಸ್ಥೆಯನ್ನು ಮುಚ್ಚುವುದರ ಬದಲು ಜನರಿಗೆ ಉಪಯೋಗವಾಗುವ ರೀತಿಯಲ್ಲಿ ಅಲ್ಲಿ ಏನಾದರೂ ಮಾಡಬೇಕು. ಮುಚ್ಚಿದರೆ ಯಾರಿಗೆ ಪ್ರಯೋಜನ?’ ಎಂದು 2006ರಲ್ಲಿ ವಿ.ಆರ್‌.ಎಸ್‌. ಪಡೆದ ಸಂಸ್ಥೆಯ ಸಿಬ್ಬಂದಿ ಸೆಲ್ವಂ ತಿಳಿಸಿದರು.

‘ಸರ್ಕಾರಿ ಸ್ವಾಮ್ಯದ ಸಂಸ್ಥೆಯನ್ನು ಸರ್ಕಾರ ಕಾಲಕಾಲಕ್ಕೆ ಮೇಲ್ದರ್ಜೆಗೇರಿಸಬೇಕಿತ್ತು. ಅಷ್ಟೇ ಅಲ್ಲ, ಹೊಸ ತಂತ್ರಜ್ಞಾನ ಅಳವಡಿಸಿಕೊಂಡು, ಸಿಬ್ಬಂದಿಯ ಕೌಶಲ ಹೆಚ್ಚಿಸಬೇಕಿತ್ತು. ಇದ್ಯಾವುದನ್ನೂ ಮಾಡಲಿಲ್ಲ. ಮಾರುಕಟ್ಟೆಯಲ್ಲಿ ತೀವ್ರ ಸ್ಪರ್ಧೆ ಎದುರಿಸಲಾರದೇ ಆರ್ಥಿಕ ಸಮಸ್ಯೆ ಎದುರಾಯಿತು’ ಎಂದು ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಅಧ್ಯಕ್ಷ ಡಾ. ರಮೇಶ ಗೋಪಾಲ್‌ ಹೇಳುತ್ತಾರೆ.

‘ಸಂಸ್ಥೆಯನ್ನು ಮುಚ್ಚುವ ಬದಲು ಅದನ್ನು ತರಬೇತಿ ಕೇಂದ್ರವಾಗಿ ಬದಲಿಸಬಹುದಿತ್ತು. ಹೊಸಪೇಟೆ ಸುತ್ತಮುತ್ತ ಇರುವ ಕೈಗಾರಿಕೆಗಳಿಗೆ ಸಹಾಯವಾಗುತ್ತಿತ್ತು. ಹೌಸಿಂಗ್‌ ಕಾಲೋನಿ ಮಾಡುವುದರಿಂದ ಉದ್ಯೋಗ ಸೃಷ್ಟಿಯಾಗುವುದಿಲ್ಲ’ ಎಂದು ತಾಲ್ಲೂಕು ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಅಧ್ಯಕ್ಷ ಅಶ್ವಿನ್‌ ಕೋತಂಬ್ರಿ ಪ್ರತಿಕ್ರಿಯಿಸಿದರು.

‘ನನಗೆ ಗೊತ್ತಿರುವಂತೆ ಅದಿರು ಪೂರೈಕೆಯಾಗದ ಕಾರಣ ಟಿ.ಎಸ್‌.ಪಿ. ಮುಚ್ಚಲಾಗಿದೆ. ಜಿಲ್ಲೆಯಲ್ಲಿ ಸರ್ಕಾರಿ ಸ್ವಾಮ್ಯದ ಎನ್‌.ಎಂ.ಡಿ.ಸಿ.ಗೆ ಸೇರಿದ ಎರಡು ಗಣಿಗಳಿವೆ. ಅಲ್ಲಿಂದ ಖಾಸಗಿ ಕಂಪನಿಗಳಿಗೆ ಅದಿರು ಪೂರೈಸಲಾಗುತ್ತಿದೆ. ಹೀಗಿರುವಾಗ ಟಿ.ಎಸ್‌.ಪಿ.ಗೆ ಪೂರೈಸಲು ಏಕೆ ಸಾಧ್ಯವಾಗುತ್ತಿಲ್ಲ? ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲ’ ಎಂದು ಜನಸಂಗ್ರಾಮ ಪರಿಷತ್ತಿನ ರಾಜ್ಯ ಕಾರ್ಯಕಾರಿಣಿ ಸದಸ್ಯ ಶಿವಕುಮಾರ ಮಾಳಗಿ ಹೇಳಿದರು. ಸಂಸ್ಥೆಯನ್ನು ಉಳಿಸಿಕೊಳ್ಳುವಂತೆ ಜನಸಂಗ್ರಾಮ ಪರಿಷತ್ತು ಅನೇಕ ವೇದಿಕೆಗಳಲ್ಲಿ ಧ್ವನಿ ಎತ್ತಿತ್ತು.
***
ಒಂದು ಕಡೆ ಕೇಂದ್ರ ‘ಭಾರತದಲ್ಲಿಯೇ ತಯಾರಿಸಿ’ ಎಂದು ಹೇಳಿಕೊಳ್ಳುತ್ತಿದೆ. ಇನ್ನೊಂದೆಡೆ ಖಾಸಗಿಯವರ ಲಾಬಿಗೆ ಮಣಿದು ಸರ್ಕಾರಿ ಸಂಸ್ಥೆಗಳನ್ನು ಮುಚ್ಚುತ್ತಿದೆ.
ಶಿವಕುಮಾರ ಮಾಳಗಿ, ಜನಸಂಗ್ರಾಮ ಪರಿಷತ್ತಿನ ಕಾರ್ಯಕಾರಿಣಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT