ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಮಂತ್ರಿ ಮನೆ ಬಳಿ ಮಹದಾಯಿ ರೈತರ ಧರಣಿ

ಮಹದಾಯಿ ಬಗ್ಗೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಆಗ್ರಹ
Last Updated 11 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮಹದಾಯಿ ನೀರಿಗಾಗಿ ಪ್ರಧಾನಿ ಭೇಟಿಗೆ ಮತ್ತೊಮ್ಮೆ ಸರ್ವಪಕ್ಷಗಳ ನಿಯೋಗ ಕರೆದೊಯ್ಯಲು ಒತ್ತಾಯಿಸಿ ಮುಖ್ಯಮಂತ್ರಿ ನಿವಾಸದ ಎದುರು ರೈತರು ಪ್ರತಿಭಟನೆ ನಡೆಸಿದರು.

ರೈತ ಸೇನೆ ಅಧ್ಯಕ್ಷ ವೀರೇಶ ಸೊಬರದಮಠ ನೇತೃತ್ವದಲ್ಲಿ ರೈತರು ಮುಖ್ಯಮಂತ್ರಿ ಮನೆ ಕಾಂಪೌಂಡ್ ಬಳಿ ಗುರುವಾರ ಧರಣಿ ಕುಳಿತರು. ರಸ್ತೆ ಬದಿಯಲ್ಲಿ ಪ್ರತಿಭಟನೆ ನಡೆಸುವುದು ಬೇಡ ಎಂದು ಪೊಲೀಸರು ಮನವೊಲಿಸಿದ ಬಳಿಕ ಕುಮಾರಕೃಪಾ ಅತಿಥಿಗೃಹದ ಆವರಣದಲ್ಲಿ ಧರಣಿ ಮುಂದುವರಿಸಿದರು.‌

‘ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಸಲ್ಲಿಸಲು ಬಂದಿದ್ದೇವೆ. ಅವರು ಬರುವ ತನಕ ಪ್ರತಿಭಟನೆ ಮುಂದುವರಿಸುತ್ತೇವೆ’ ಎಂದು ಪಟ್ಟು ಹಿಡಿದಿದ್ದರು. ಬಳಿಕ ಸ್ಥಳಕ್ಕೆ ಬಂದ ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ, ‘ಮುಖ್ಯಮಂತ್ರಿ ಮೈಸೂರು ಜಿಲ್ಲೆಯ ಪ್ರವಾಸದಲ್ಲಿದ್ದಾರೆ. ಎರಡು ದಿನ ಬೆಂಗಳೂರಿಗೆ ಬರುವುದಿಲ್ಲ. ಒಪ್ಪುವುದಾದರೆ ನಿಮ್ಮನ್ನೇ ಮೈಸೂರಿಗೆ ಕರೆದೊಯ್ಯುತ್ತೇನೆ’ ಎಂದು ಹೇಳಿದರು.

ಇದಕ್ಕೆ ಒಪ್ಪಿದ ರೈತರು, ‘ಮಹದಾಯಿ ಸಮಸ್ಯೆಯನ್ನು ಮುಖ್ಯಮಂತ್ರಿಗೆ ಮನವರಿಕೆ ಮಾಡಿಸಬೇಕಿದೆ. ಮೈಸೂರಿಗೆ ಬರಲು ನಮಗೆ ಅಭ್ಯಂತರವಿಲ್ಲ’ ಎಂದರು. ಬಳಿಕ ಅಶೋಕ ಪಟ್ಟಣ ಅವರು ಎಲ್ಲರನ್ನು ಬಸ್‌ನಲ್ಲಿ ಮೈಸೂರಿಗೆ ಕರೆದೊಯ್ದರು.

ಮೂರು ಬೇಡಿಕೆ: ‘ಮಹದಾಯಿ ವಿಷಯದಲ್ಲಿ ಪ್ರಮುಖ ಮೂರು ಬೇಡಿಕೆಗಳನ್ನು ಮುಖ್ಯಮಂತ್ರಿ ಮುಂದೆ ಮಂಡಿಸುತ್ತೇವೆ’ ಎಂದು ವೀರೇಶ ಸೊಬರದಮಠ ತಿಳಿಸಿದರು.

‘ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳಲು ಮಹದಾಯಿ ನ್ಯಾಯಾಧೀಕರಣ ಫೆ.22ರವರೆಗೆ ಅವಕಾಶ ನೀಡಿದೆ. ಹೀಗಾಗಿ, ಕೂಡಲೇ ಸರ್ವಪಕ್ಷಗಳ ಸಭೆ ಕರೆದು ಮುಖ್ಯಮಂತ್ರಿ ಚರ್ಚಿಸಬೇಕು. ಪ್ರಧಾನಿ ಬಳಿಗೆ ನಿಯೋಗ ಕರೆದೊಯ್ದು ಮಧ್ಯಸ್ಥಿಕೆ ವಹಿಸಲು ಒತ್ತಡ ಹೇರಬೇಕೆಂದು ಮನವಿ ಮಾಡುತ್ತೇವೆ’ ಎಂದರು.

‘ಮಹದಾಯಿ ವಿಷಯದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಕೂಡ ಮಾತನಾಡಬೇಕು. ಕೇಂದ್ರ ಸರ್ಕಾರದ ಮೇಲೆ ಅವರೂ ಒತ್ತಡ ಹೇರಬೇಕು. ರಾಹುಲ್ ಗಾಂಧಿ ಜೊತೆ ಮಾತನಾಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡುತ್ತೇವೆ’ ಎಂದರು.

‘ಪತ್ರದ ಒಳಗುಟ್ಟು ಬಿಜೆಪಿ ರಟ್ಟು ಮಾಡಲಿ’: ‘ಮಹದಾಯಿ ನದಿ ನೀರು ಹಂಚಿಕೆ ವಿಷಯದಲ್ಲಿ ಬಿಜೆಪಿ ನಾಯಕರಾದ ಬಿ.ಎಸ್‌. ಯಡಿಯೂರಪ್ಪ, ಜಗದೀಶ ಶೆಟ್ಟರ್‌ ಮತ್ತು ಪ್ರಹ್ಲಾದ ಜೋಷಿ ರಾಜಕೀಯ ಕುತಂತ್ರದ ನಾಟಕ ಆಡಿದ್ದಾರೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಎಚ್‌.ಕೆ. ಪಾಟೀಲ ಆರೋಪಿಸಿದರು.

‘ಮಹದಾಯಿ ವಿವಾದ ನ್ಯಾಯ ಮಂಡಳಿಯಲ್ಲೇ ಇತ್ಯರ್ಥ ಪಡಿಸಬೇಕೆಂಬ ಗೋವಾ ಮುಖ್ಯಮಂತ್ರಿ ಹೇಳಿಕೆಯಿಂದ, ಬಿಜೆಪಿ ರಾಜಕೀಯ ಮಾಡುತ್ತಿರುವುದು ಬಯಲಾಗಿದೆ. ಈ ಪತ್ರ ಪರ‍್ರೀಕರ್‌ ಅವರಿಂದ ಬಿಜೆಪಿ ನಾಯಕರು ಬರೆಯಿಸಿಕೊಂಡರು’ ಈ ಗುಟ್ಟನ್ನು ಬಿಜೆಪಿ ನಾಯಕರೇ ಬಹಿರಂಗ ಪಡಿಸಬೇಕು ಎಂದು ಒತ್ತಾಯಿಸಿದರು.

ಗೋವಾ ಕಾಂಗ್ರೆಸ್ ಮುಖಂಡರ ಮನವೊಲಿಕೆಗೆ ಸಿದ್ಧ–ಪರಮೇಶ್ವರ

ಕಲಬುರ್ಗಿ: ‘ಮಹದಾಯಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಗೋವಾ ಮುಖ್ಯಮಂತ್ರಿ ಮನೋಹರ ಪರ‍್ರೀಕರ್‌ ಅವರು ನಮ್ಮ ಮುಖ್ಯಮಂತ್ರಿಗೆ ಪತ್ರ ಬರೆದರೆ, ಅಲ್ಲಿನ ಕಾಂಗ್ರೆಸ್ ಮುಖಂಡರ ಮನವೊಲಿಸಲು ನಾವು ಸಿದ್ಧರಿದ್ದೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ.ಪರಮೇಶ್ವರ ಹೇಳಿದರು.

‘ಪರ‍್ರೀಕರ್‌ ಅವರು ಒಮ್ಮೆ ನೀರು ಬಿಡುವುದಾಗಿ, ಮತ್ತೊಮ್ಮೆ ನೀರು ಬಿಡಲು ಸಾಧ್ಯವೇ ಇಲ್ಲ ಎಂದು ದ್ವಂದ್ವ ಹೇಳಿಕೆ ನೀಡುತ್ತಿದ್ದಾರೆ. ಆ ಮೂಲಕ ರಾಜಕೀಯ ಮಾಡುತ್ತಿದ್ದಾರೆ’ ಎಂದು ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

‘ಮುಖ್ಯಮಂತ್ರಿಯೇ ಕಾರಣ’

ಹುಬ್ಬಳ್ಳಿ: ‘ಮಹದಾಯಿ ವಿಚಾರದಲ್ಲಿ ಗೋವಾ ಮುಖ್ಯಮಂತ್ರಿ ಮನೋಹರ ಪರ‍್ರೀಕರ್‌, ಯಡಿಯೂರಪ್ಪ ಅವರಿಗೆ ಬರೆದ ಪತ್ರವನ್ನೇ ರಾಜ್ಯ ಸರ್ಕಾರವು ನ್ಯಾಯಮಂಡಳಿ ಮುಂದೆ ಮಂಡಿಸಿದ್ದರೆ ರಾಜ್ಯಕ್ಕೆ ಅನುಕೂಲವಾಗುತ್ತಿತ್ತು’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಜಗದೀಶ ಶೆಟ್ಟರ್‌ ಆರೋಪಿಸಿದರು.

‘ಮಹದಾಯಿ ನದಿ ನೀರು ಹಂಚಿಕೆ ವಿವಾದವನ್ನು ಸುಸೂತ್ರವಾಗಿ ಬಗೆಹರಿಸಿಕೊಂಡು ರಾಜ್ಯಕ್ಕೆ ನೀರು ತರುವ ಪ್ರಯತ್ನದಲ್ಲಿ ಬಿಜೆಪಿ ತೊಡಗಿತ್ತು. ಆದರೆ, ಕಾಂಗ್ರೆಸ್ ಷಡ್ಯಂತ್ರ ನಡೆಸಿ ಸಮಸ್ಯೆ ಬಗೆಹರಿಯಲು ಬಿಡುತ್ತಿಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಶಿರಾದಲ್ಲಿ ನಡೆದ ಪರಿವರ್ತನ ರ‍್ಯಾಲಿಯಲ್ಲಿ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT