ಕಸದ ಸಮಸ್ಯೆಗೆ ಮುಕ್ತಿಗಾಣಿಸಿ; ದೊರೆಸ್ವಾಮಿ ಮನವಿ

7

ಕಸದ ಸಮಸ್ಯೆಗೆ ಮುಕ್ತಿಗಾಣಿಸಿ; ದೊರೆಸ್ವಾಮಿ ಮನವಿ

Published:
Updated:
ಕಸದ ಸಮಸ್ಯೆಗೆ ಮುಕ್ತಿಗಾಣಿಸಿ; ದೊರೆಸ್ವಾಮಿ ಮನವಿ

ಬೆಂಗಳೂರು: ‘ಎಷ್ಟೇ ಹೋರಾಟಗಳನ್ನು ಮಾಡಿದರೂ, ರಾಜಧಾನಿಯು ಕಸದ ಸಮಸ್ಯೆಯಿಂದ ಮುಕ್ತಿ ಹೊಂದಿಲ್ಲ. ನೂತನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಾದರೂ ಇದಕ್ಕೆ ಶಾಶ್ವತ ಪರಿಹಾರ ಒದಗಿಸಬೇಕು’ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್.ದೊರೆಸ್ವಾಮಿ ಒತ್ತಾಯಿಸಿದರು.

ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘವು ನಗರದಲ್ಲಿ ಭಾನುವಾರ ಆಯೋಜಿಸಿದ್ದ ‘ಶತಾಯುಷಿ ನುಡಿನಮನ’  ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬೆಂಗಳೂರಿನಿಂದ ನಿತ್ಯ 3,000 ಟನ್ ಕಸ ತೆಗೆದುಕೊಂಡು ಹೋಗಿ ಮಂಡೂರು ಗ್ರಾಮದಲ್ಲಿ ಸುರಿಯಲಾಗುತ್ತಿತ್ತು. ಅದನ್ನು ವಿರೋಧಿಸಿ ದೊಡ್ಡ ಮಟ್ಟದ ಚಳವಳಿ ನಡೆಸಿದ್ದರಿಂದ, ಅಲ್ಲಿ ಕಸದ ಸಮಸ್ಯೆಗೆ ಮುಕ್ತಿ ದೊರೆಯಿತು. ಅಧಿಕಾರಿಗಳು ಹಾಗೂ ರಾಜಕಾರಣಿಗಳು ಸಿಂಗಪುರ ಸೇರಿದಂತೆ ಯಾವ್ಯಾವುದೋ ದೇಶಗಳನ್ನು ಸುತ್ತಿ ಹೊಸ ತಂತ್ರಜ್ಞಾನಗಳನ್ನು ತಿಳಿದುಕೊಂಡು ಬಂದರೂ, ನಗರದಲ್ಲಿ ಕಸದ ಸಮಸ್ಯೆಗೆ ಇನ್ನೂ ಶಾಶ್ವತ ಪರಿಹಾರ ಸಿಕ್ಕಿಲ್ಲ. ಹೀಗಾಗಿ, ಕುಮಾರಸ್ವಾಮಿ ಅವರು ಯಾರನ್ನೂ ನಂಬದೆ ತಾವೇ ಈ ಬಗ್ಗೆ ನಿಗಾ ವಹಿಸಬೇಕು’ ಎಂದು ಮನವಿ ಮಾಡಿದರು.

‘ನಾನೂ ಪತ್ರಕರ್ತ’: ‘ಪತ್ರಿಕೋದ್ಯಮದಲ್ಲಿ ನಾನೂ ನಾಲ್ಕೈದು ವರ್ಷ ಕೆಲಸ ಮಾಡಿದ್ದೇನೆ.‌ ಪುಕ್ಕಲನಾಗಿದ್ದ ನನಗೆ ಪತ್ರಿಕೋದ್ಯಮ ಹೋರಾಟ ಮಾಡುವ ಗುಂಡಿಗೆ ಕೊಟ್ಟಿತು. ಅವರಿವರನ್ನು ಹೀಯ್ಯಾಳಿಸುವುದೇ ಪತ್ರಿಕಾ ಧರ್ಮವಲ್ಲ. ಸರ್ಕಾರಕ್ಕೆ ಭಯ ಹುಟ್ಟಿಸಿ, ಆಡಳಿತ ಸರಿದಾರಿಯಲ್ಲಿ ನಡೆಯುವಂತೆ ಮಾಡುವುದೇ ನಿಜವಾದ ಪತ್ರಿಕಾ ನೀತಿ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

‘ಗೆಳೆಯ ಭದ್ರಣ್ಣ ‘ಪೌರವಾಣಿ’ ಪತ್ರಿಕೆ ನಡೆಸುತ್ತಿದ್ದ. ಸ್ವಾತಂತ್ರ್ಯ ಹೋರಾಟಕ್ಕಾಗಿಯೇ ಮೀಸಲಿದ್ದ ಪತ್ರಿಕೆ ಅದು. ಆತ ತೀರಿಕೊಂಡ ಬಳಿಕ, ಪತ್ರಿಕೆಯ ಹೊಣೆ ನಾನು ವಹಿಸಿಕೊಂಡಿದ್ದೆ. ಮೈಸೂರಿನಲ್ಲಿ ಸ್ವಾತಂತ್ರ್ಯ ಘೋಷಣೆಗೆ ಅಡ್ಡಿಯಾಗಿದ್ದ ಆರ್ಕಾಟ್ ರಾಮಸ್ವಾಮಿ ನೇತೃತ್ವದ ಮಂತ್ರಿಮಂಡಲದ ವಿರುದ್ಧ ಎಂಟು ಲೇಖನಗಳನ್ನು ಪ್ರಕಟಿಸಿದ್ದೆವು. ಆಗ, ‘‌ಲೇಖನಗಳನ್ನು ಪ್ರಕಟಿಸುವ ಮುನ್ನ ಸರ್ಕಾರದ ಮುಖ್ಯಕಾರ್ಯದರ್ಶಿಗೆ ತೋರಿಸಬೇಕು’ ಎಂಬ ನೋಟಿಸ್ ಬಂತು. ಆದರೂ, ಮತ್ತೆರಡು ಲೇಖನ ಪ್ರಕಟಿಸಿದೆವು. ಆಗ ಸರ್ಕಾರ ಪತ್ರಿಕೆಯನ್ನು ಮುಟ್ಟುಗೋಲು ಹಾಕಿಕೊಂಡಿತು.’

‘ಅರ್ಕಾಟ್ ಸರ್ಕಾರದ ವಿರುದ್ಧ ಸತ್ಯಾಗ್ರಹಕ್ಕೆ ಜನರನ್ನು ಅಣಿಗೊಳಿಸಲು ಪತ್ರಿಕೆ ಇರಲೇಬೇಕೆಂದು ಮನಗಂಡ ನಾವು, ಹಿಂದೂಪುರದಿಂದ ‘ಪೌರವೀರ’ ಹೆಸರಿನಲ್ಲಿ ಇನ್ನೊಂದು ಪತ್ರಿಕೆ ಹೊರತಂದು ಚಳವಳಿ ಆರಂಭಿಸಿದ್ದೆವು. ಇಂಥ ಹೋರಾಟದ ಪತ್ರಿಕೋದ್ಯಮ ಪಸ್ತುತ ದಿನಗಳಲ್ಲಿ ಕಾಣಿಸುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry