ಸಾವಿನಲ್ಲೂ ಒಂದಾದ ಅಣ್ಣ–ತಮ್ಮ

7
ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಹೆಸರಘಟ್ಟದ ದಾಸೇನಹಳ್ಳಿ ಗ್ರಾಮಸ್ಥರ ಪ್ರತಿಭಟನೆ

ಸಾವಿನಲ್ಲೂ ಒಂದಾದ ಅಣ್ಣ–ತಮ್ಮ

Published:
Updated:
ಸಾವಿನಲ್ಲೂ ಒಂದಾದ ಅಣ್ಣ–ತಮ್ಮ

ಬೆಂಗಳೂರು: ಗಾಳಿ, ಮಳೆಯಿಂದಾಗಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಮುನಿರಾಜು (20) ಮತ್ತು ರವಿ (18) ಎಂಬ ಸಹೋದರರು ಮೃತಪಟ್ಟ ಪ್ರಕರಣ ಹೆಸರಘಟ್ಟದ ದಾಸೇನಹಳ್ಳಿಯಲ್ಲಿ ಭಾನುವಾರ ನಡೆದಿದೆ.

ಗ್ರಾಮದ ಸುನೀಲ್‌ ಕುಮಾರ್‌ ಎಂಬುವರ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಹೋದರರು ಬೆಳಿಗ್ಗೆ ಹುಲ್ಲು ಕೊಯ್ಯಲು ಹೋದಾಗ ಈ ದುರ್ಘಟನೆ ನಡೆದಿದೆ.

‘ಗಾಳಿ, ಮಳೆಯಿಂದಾಗಿ ವಿದ್ಯುತ್‌ ಕಂಬಗಳು ಮುರಿದಿದ್ದರಿಂದ ತಂತಿಯ ಕೆಲ ಭಾಗಗಳು ತೋಟದಲ್ಲಿ ಬಿದ್ದಿತ್ತು. ಕೆಲಸಕ್ಕೆ ಹೋಗಿದ್ದ ಸಹೋದರರು ತಂತಿಗಳನ್ನು ನೋಡಿ ಎತ್ತಿ ಬದಿಗೆ ಸರಿಸಲು ಹೋದಾಗ ವಿದ್ಯುತ್‌ ಪ್ರವಹಿಸಿದೆ‘ ಎಂದು ಸೋಲದೇವನಹಳ್ಳಿ ಪೊಲೀಸರು ತಿಳಿಸಿದ್ದಾರೆ.

ಪ್ರತಿಭಟನೆ: ಸಹೋದರರು ಮೃತಪಟ್ಟ ವಿಷಯ ತಿಳಿದ ಹೆಸರಘಟ್ಟ ಮತ್ತು ದಾಸೇನಹಳ್ಳಿ ಗ್ರಾಮಸ್ಥರು ಹೆಸರಘಟ್ಟದ ಬೆಸ್ಕಾಂ ಕಚೇರಿಯ ಮುಂದೆ ಶವ ಇಟ್ಟು ಪ್ರತಿಭಟನೆ ನಡೆಸಿದರು.

ವಿದ್ಯುತ್‌ ಕಂಬಗಳು ಮುರಿದು ಬಿದ್ದಿರುವ ಬಗ್ಗೆ ಬೆಸ್ಕಾಂನ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಆದರೆ, ಅವರು ಯಾವುದೇ ಕ್ರಮಕೈಗೊಂಡಿರಲಿಲ್ಲ. ಅವರ ನಿರ್ಲಕ್ಷ್ಯವೇ ಸಹೋದರರ ಸಾವಿಗೆ ಕಾರಣ ಎಂದು ಪ್ರತಿಭಟನಾಕಾರರು ಆರೋಪಿಸಿದರು.

‘ಮಕ್ಕಳು ಕುಟುಂಬಕ್ಕೆ ಆಧಾರವಾಗಿದ್ದರು. ಬೇರೆಯವರ ತೋಟದಲ್ಲಿ ದುಡಿದು ಮೂವರು ಸಹೋದರಿಯರ ಮದುವೆ ಮಾಡಿಸಿದ್ದರು. ಅವರಿಲ್ಲದೇ ನಮಗೆ ಬದುಕೇ ಇಲ್ಲ’ ಎಂದು ತಂದೆ ಚಿಕ್ಕಹನುಮಯ್ಯ ಗದ್ಗದಿತರಾದರು.

ಹೆಸರಘಟ್ಟ ಜಿಲ್ಲಾ ಪಂಚಾಯಿತಿ ಸದಸ್ಯ ಕೃಷ್ಣಯ್ಯ ಮಾತನಾಡಿ, ಮಳೆ, ಗಾಳಿಯಿಂದ ಆಗಿರುವ ತೊಂದರೆಗಳಿಗೆ ಸ್ಪಂದಿಸಲು ಬೆಸ್ಕಾಂ ಅಧಿಕಾರಿಗಳು ತಿಂಗಳುಗಟ್ಟಲೇ ಸಮಯ ದೂಡುತ್ತಾರೆ. ಅವರ ನಿರ್ಲಕ್ಷ್ಯಕ್ಕೆ ಇಬ್ಬರ ಜೀವ ಹೋಯಿತು’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪರಿಹಾರ: ಪ್ರತಿಭಟನಾ ಸ್ಥಳಕ್ಕೆ ಅಗಮಿಸಿದ ಬೆಸ್ಕಾಂನ ಕಾರ್ಯ ನಿರ್ವಾಹಕ ಎಂಜಿನಿಯರ್ ನಾರಾಯಣ

ಸ್ವಾಮಿ ಮಾತನಾಡಿ, ಮೃತಪಟ್ಟ ಸಹೋದರ ಕುಟುಂಬಕ್ಕೆ ಸರ್ಕಾರದಿಂದ ₹3 ಲಕ್ಷ ಮತ್ತು ಬೆಸ್ಕಾಂನಿಂದ ತಲಾ ₹5 ಲಕ್ಷ ಪರಿಹಾರ ನೀಡುವುದಾಗಿ ಭರವಸೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry