ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜ ಒಡೆಯುವವರಿಗೆ ಯುವಕರಿಂದಲೇ ತಕ್ಕ ಪಾಠ

ಪ್ರಧಾನಿ ನರೇಂದ್ರ ಮೋದಿ ಹೇಳಿಕೆ
Last Updated 12 ಜನವರಿ 2018, 18:58 IST
ಅಕ್ಷರ ಗಾತ್ರ

ಮುಗಳಖೋಡ (ಬೆಳಗಾವಿ): ‘ಜಾತಿ ಆಧಾರದ ಮೇಲೆ ಸಮಾಜ ಒಡೆಯಲು ಪ್ರಯತ್ನಿಸುತ್ತಿರುವ ವಿರೋಧಿಗಳಿಗೆ ಇಂದಿನ ಯುವಕರು ತಕ್ಕ ಪಾಠ ಕಲಿಸಲಿದ್ದಾರೆ. ಜಾತಿವಾದ ಹಾಗೂ ಮೂಢನಂಬಿಕೆ ಕಿತ್ತುಹಾಕುವ ಮೂಲಕ ನವ್ಯ ಭಾರತ ನಿರ್ಮಾಣ ಸಂಕಲ್ಪವನ್ನು ಸಾಕಾರಗೊಳಿಸುವವರೇ ಸ್ವಾಮಿ ವಿವೇಕಾನಂದರ ನಿಜವಾದ ಭಕ್ತರು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ರಾಯಬಾಗ ತಾಲ್ಲೂಕಿನ ಮುಗಳಖೋಡದ ಜಿಡಗಾ ಮಠದಲ್ಲಿ ಶುಕ್ರವಾರ ಆರಂಭವಾದ ಮೂರು ದಿನಗಳ ಸಿದ್ಧರಾಮೇಶ್ವರ ಸಂಕಲ್ಪ ಜಾತ್ರೆಯನ್ನು ವಿಡಿಯೊ ಕಾನ್ಫರೆನ್ಸ್‌ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

‘ಸಂತರು, ಸಮಾಜ ಸುಧಾರಕರ ಹಲವು ದಶಕಗಳ ಹೋರಾಟದ ಫಲವಾಗಿ ದೇಶವು ಜಾತಿ ಬಂಧನ ವ್ಯವಸ್ಥೆಯಿಂದ ಮುಕ್ತವಾಗುತ್ತ ಸಾಗಿದೆ. ಆದರೆ, ಇದನ್ನು ಸಹಿಸದ ಕೆಲವು ಸಮಾಜ ವಿರೋಧಿಗಳು ಜಾತಿ ಆಧಾರದ ಮೇಲೆ ಸಮಾಜ ಒಡೆಯಲು ಪ್ರಯತ್ನಿಸುತ್ತಿದ್ದಾರೆ’ ಎಂದು ಆರೋಪಿಸಿದರು.

‘ದೇಶದ ಜ್ಞಾನ ಭಂಡಾರವನ್ನು ಕೊಂಡಾಡಿದ್ದ ವಿವೇಕಾನಂದರು, ಅಷ್ಟೇ ಕಠೋರ ಮಾತುಗಳಲ್ಲಿ ಜಾತಿ ವ್ಯವಸ್ಥೆ ಖಂಡಿಸಿದ್ದರು. ‘ಜಾತಿ ವ್ಯವಸ್ಥೆಗೆ ನನ್ನ ಧಿಕ್ಕಾರ’ ಎಂದೂ ಕೂಗಿದ್ದರು. 125 ವರ್ಷಗಳ ಹಿಂದೆ ಅವರಷ್ಟು ಉಗ್ರವಾಗಿ ಬೇರಾರೂ ಖಂಡಿಸಿರಲಿಲ್ಲ. ವಿವೇಕಾನಂದರನ್ನು ಅನುಸರಿಸಬೇಕಾದರೆ ಜಾತಿ ತಾರತಮ್ಯ ವ್ಯವಸ್ಥೆಯನ್ನು ಬೇರು ಸಮೇತ ಕಿತ್ತು ಹಾಕಬೇಕಾಗಿದೆ’ ಎಂದು ಹೇಳಿದರು.

ಮಠದ ಬಗ್ಗೆ ಪ್ರಶಂಸೆ:

‘ಮುಗಳಖೋಡ ಮಠ ಕೂಡ ಜಾತಿ ಭೇದವನ್ನು ತೊಡೆದುಹಾಕುವ ಪರಂಪರೆಯಲ್ಲಿ ಸಾಗಿಬಂದಿದೆ. ಪ್ರವಾಹ ಪೀಡಿತ ಪ್ರದೇಶಗಳ ಜನರಿಗೆ ನೆರವು ನೀಡುವಾಗ, ಬಡವರಿಗೆ ಉಚಿತ ಔಷಧ ಹಾಗೂ ಆರೋಗ್ಯ ಶಿಬಿರಗಳನ್ನು ಆಯೋಜಿಸುವಾಗ, ಅನ್ನದಾನ ಮಾಡುವಾಗ ಜಾತಿ ನೋಡಿಲ್ಲ. ‘ಸರ್ವೇ ಜನಾಃ ಸುಖಿನೋ ಭವಂತು’ ಎನ್ನುವ ತತ್ವದಡಿ ಕೆಲಸ ಮಾಡಿದೆ’ ಎಂದು ಪ್ರಶಂಸಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT