‘ನಮಗೂ ಬೇಕಿದೆ ಇಸ್ರೇಲ್‌ ಮಾದರಿ’

7

‘ನಮಗೂ ಬೇಕಿದೆ ಇಸ್ರೇಲ್‌ ಮಾದರಿ’

Published:
Updated:
‘ನಮಗೂ ಬೇಕಿದೆ ಇಸ್ರೇಲ್‌ ಮಾದರಿ’

ಬೆಂಗಳೂರು: ರಾಜ್ಯದ ನೀರಿನ ಸಮಸ್ಯೆ ನೀಗಿಸಲು ಮತ್ತು ಮುಂದಿನ ಪೀಳಿಗೆಗೂ ನೀರು ಉಳಿಸಲು, ಇಸ್ರೇಲ್‌ ಮಾದರಿ ನಿರ್ವಹಣೆ ವ್ಯವಸ್ಥೆಯನ್ನು ನಮ್ಮಲ್ಲೂ ಅಳವಡಿಸಿಕೊಳ್ಳಬೇಕಿದೆ ಎಂದು ಕವಿ ಬಿ.ಆರ್‌.ಲಕ್ಷ್ಮಣರಾವ್‌ ಅಭಿಪ್ರಾಯಪಟ್ಟರು.

ಅಂಕಿತ ಪುಸ್ತಕ ಪ್ರಕಾಶನ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ರಾಘವೇಂದ್ರ ಹೆಗಡೆ ಅನುವಾದಿಸಿರುವ ‘ನಾಳೆಗೂ ನೀರು ಇರಲಿ’, ಎಚ್‌.ಡುಂಡಿರಾಜ್‌ ಅವರ ‘ಹನಿ ಮಾರ್ದನಿ’, ಡಾ.ಪಿ.ವಿ.ನಾರಾಯಣ ಅವರ ‘ಬಸವಣ್ಣನ ವಚನಗಳು’, ‘ಅಲ್ಲಮನ ವಚನಗಳು’, ‘ಅಕ್ಕನ ವಚನಗಳು’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಲ್ಲಿ ಜಲಕ್ಷಾಮ ಕಾಣಿಸಿಕೊಂಡಿದೆ. ನಮ್ಮಲ್ಲೂ ಈ ದುಸ್ಥಿತಿ ಉಂಟಾಗುವ ಕಾಲ ಸನ್ನಿಹಿತವಾಗಿದೆ. ಇಸ್ರೇಲ್‌ ಶೇ 60ರಷ್ಟು ಮರುಭೂಮಿ ಹೊಂದಿದ್ದು, ನೀರಿನ ಪ್ರಮಾಣ ಕಡಿಮೆ ಇದ್ದರೂ ಅಲ್ಲಿನ ಜನರ ನೀರಿನ ನಿರ್ವಹಣೆ ಕಂಡು ಜಗತ್ತೇ ಬೆರಗಾಗಿದೆ. ಈಗ ಇಸ್ರೇಲ್‌ ಮಾದರಿ ದೇಶವಾಗಿ ಮಾರ್ಪಟ್ಟಿದೆ. ಅಲ್ಲಿನ ನೀರಿನ ಸಮಸ್ಯೆಯ ಕುರಿತು ನಡೆದ ಹೋರಾಟಗಳ ಇತಿಹಾಸವನ್ನು ರಾಘವೇಂದ್ರ ಹೆಗಡೆ ಅವರ ‘ನಾಳೆಗೂ ಇರಲಿ ನೀರು’ ಲೇಖನದಲ್ಲಿ ಎಳೆ ಎಳೆಯಾಗಿ ವಿವರಿಸಿದ್ದಾರೆ ಎಂದರು.

ರಾಜ್ಯದಲ್ಲಿ ಕಾವೇರಿ ವಿವಾದ ರಾಜಕೀಯ ಸಮಸ್ಯೆಯಾಗಿ ಬಿಟ್ಟಿದೆಯೇ ಹೊರತು, ಅದಕ್ಕೆ ಪರಿಹಾರ ಕಂಡುಕೊಳ್ಳುವ ಲಕ್ಷಣಗಳು ಕಂಡು ಬರುತ್ತಿಲ್ಲ. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಕಳೆದ ವರ್ಷ ಇಸ್ರೇಲ್‌ಗೆ ಭೇಟಿ ನೀಡಿ ಅಲ್ಲಿನ ನಿರ್ವಹಣೆ ಕುರಿತು ಅಧ್ಯಯನ ಮಾಡಿದ್ದಾರೆ. ಅಲ್ಲಿನ ವ್ಯವಸ್ಥೆಯನ್ನೇ ರಾಜ್ಯದಲ್ಲಿಯೂ ಜಾರಿಗೆ ತರಬೇಕಿದೆ ಎಂದು ಹೇಳಿದರು.

ವಿದ್ವಾಂಸ ಡಾ.ಪಿ.ವಿ.ನಾರಾಯಣ ಮಾತನಾಡಿ, ‘12ನೇ ಶತಮಾನದಲ್ಲಿ ಬಸವಣ್ಣ ಅವರ ವಿಚಾರಧಾರೆಗಳು ಸಮಾಜದ ಸಮಸ್ಯೆಗಳ ವಿರುದ್ಧ ಹೋರಾಡಲು ಎಲ್ಲರನ್ನೂ ಬಡಿದೆಬ್ಬಿಸಿತ್ತು. ಅಂದು ಅಕ್ಕಮಹಾದೇವಿ ಎದುರಿಸುತ್ತಿದ್ದ ಸಮಸ್ಯೆಗಳನ್ನೇ ಇಂದು ನಾವು ಅನುಭವಿಸುತ್ತಿದ್ದೇವೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry