ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂವಿನ ಅಲಂಕಾರ: ಇದು ಜಪಾನಿ ಚಿತ್ತಾರ!

Last Updated 12 ಜನವರಿ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಿಸರ್ಗದ ಸುಂದರ ಸೃಷ್ಟಿ ಹೂವು! ಇವುಗಳನ್ನು ಅಚ್ಚುಕಟ್ಟಾಗಿ ಜೋಡಿಸುವುದೂ ಒಂದು ಕಲೆ. ಒಪ್ಪ ಓರಣವಾಗಿ ಜೋಡಿಸಿದಾಗ ಈ ಹೂಗಳು ಇನ್ನಷ್ಟು ಆಪ್ಯಾಯಮಾನವಾಗುತ್ತವೆ.

ಜಪಾನ್‌ನ ಪುಷ್ಪಾಲಂಕಾರ ಕಲೆಯನ್ನು ನಗರದ ಜನರಿಗೆ ಪರಿಚಯಿಸುವ ಸಲುವಾಗಿಯೇ ‘ದಿ ಒಹಾರ ಸ್ಕೂಲ್‌ ಆಫ್ ಇಕೆಬಾನಾ’ ಬಸವನಗುಡಿಯಲ್ಲಿ ‘ಚಿಗುರು’ ಪ್ರದರ್ಶನವನ್ನು ಏರ್ಪಡಿಸಿದೆ. ಸಂಸ್ಥೆಯು 29ನೇ ವರ್ಷಾಚರಣೆಯ ಪ್ರಯುಕ್ತ ಹಮ್ಮಿಕೊಂಡಿದ್ದ ಈ ಪ್ರದರ್ಶನವನ್ನು ಕಲಾವಿದೆ ಬಕುಲಾ ನಾಯಕ್‌ ಶುಕ್ರವಾರ ಉದ್ಘಾಟಿಸಿದರು.

’ಇಕೆಬಾನ’ ಎನ್ನುವುದು ಜಪಾನ್‌ನ ಸಾಂಪ್ರದಾಯಿಕ ಪುಷ್ಪಾಲಂಕಾರ ಕಲೆ. ಈ ಕಲೆಗೆ 600 ವರ್ಷಗಳ ಇತಿಹಾಸವಿದೆ.

ಜಪಾನಿಯರು ಹೂವುಗಳಿಗೆ ವಿಶೇಷ ಮಹತ್ವ ನೀಡುತ್ತಾರೆ. ಮನೆ, ಕಚೇರಿ, ಸಾರ್ವಜನಿಕ ಸ್ಥಳಗಳನ್ನು ವಿವಿಧ ಬಗೆಯ ಹೂವುಗಳಿಂದ ಅಲಂಕರಿಸುತ್ತಾರೆ.

ಈ ಪ್ರದರ್ಶನದಲ್ಲಿ ಜಪಾನ್‌ನ ಹಾಗೂ ಸ್ಥಳೀಯ ಪುಷ್ಪಗಳನ್ನು ಬಳಸಿ ಸಾಂಪ್ರದಾಯಿಕ, ಸಮಕಾಲೀನ, ಆಧುನಿಕ ಶೈಲಿಯಲ್ಲಿ ಹೊಸ ಲೋಕವನ್ನು ಸೃಷ್ಟಿಸಲಾಗಿತ್ತು.

ಸಂಕ್ರಾತಿ ಹಬ್ಬದಲ್ಲಿ ಇಲ್ಲಿ ಬಳಸುವ ಹೊಂಬಾಳೆಯಿಂದ ಹಿಡಿದು ನಾನಾ ಬಣ್ಣ ಹೂವುಗಳನ್ನು ತಟ್ಟೆಗಳಲ್ಲಿ, ಹೂಕುಂಡಗಳಲ್ಲಿ ಅಂದವಾಗಿ ಜೋಡಿಸಲಾಗಿತ್ತು. ಹೈಕಾ, ಮವಾರಾ, ಫ್ರೀಸ್ಟೈಲ್‌, ಯೋಸೋಯಿ, ರಿಂಪಾ ಶೈಲಿಯ ಪುಷ್ಪಾಲಂಕಾರಗಳು ಮೋಹಕವಾಗಿದ್ದವು.

ಜಪಾನಿ ಶೈಲಿಯಲ್ಲಿ ಹೂವುಗಳನ್ನು ಒತ್ತೊತ್ತಾಗಿ ಜೋಡಿಸುವುದಿಲ್ಲ. ನಡುನಡುವೆ ಸಾಕಷ್ಟು ಜಾಗ ಖಾಲಿ ಬಿಡಲಾಗುತ್ತದೆ.

‘ಜಂಜಾಟದ ಬದುಕಿನಲ್ಲಿ ಅರೆ ಕ್ಷಣ ಸಾವರಿಸಿಕೊಂಡು ಮುಂದುವರಿಯಬೇಕು. ಒಂದೇ ಸಮನೆ ಚಿಂತಿಸಿ ಹುಚ್ಚರಾಗುವುದನ್ನು ಬಿಡಬೇಕು ಎಂಬ ಸಂದೇಶ ಇದರಲ್ಲಿ ಅಡಗಿದೆ’ ಎನ್ನುತ್ತಾರೆ ಒಹಾರ ಶಾಲೆಯ ಸಂಸ್ಥಾಪಕ ಅಧ್ಯಕ್ಷೆ ಶ್ಯಾಮಲಾ ಗಣೇಶ್‌.

‘ಪ್ರಕೃತಿ ಇರುವುದೇ ನಮಗಾಗಿ ಎಂದು ನಾವು ಭಾವಿಸಿದ್ದೇವೆ. ಆದರೆ ಅದು ತಪ್ಪು, ನಾವು ಅದರ ಒಂದು ಭಾಗವಷ್ಟೇ’ ಎಂದರು.

ಶನಿವಾರ ಮತ್ತು ಭಾನುವಾರವೂ ಚಿಗುರು ಪ್ರದರ್ಶನ ಇರಲಿದೆ. ಸಮಯ: ಬೆಳಿಗ್ಗೆ 10.30ರಿಂದ ಸಂಜೆ 7.00 ಸ್ಥಳ: ಗಂಜಾಂ ಮಂಟಪ, ಬಸವನ ಗುಡಿ ರಸ್ತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT