ಎಂಟು ಸಚಿವ ಸ್ಥಾನ ಭರ್ತಿಗೆ ಜೆಡಿಎಸ್‌ ನಿರ್ಧಾರ

7

ಎಂಟು ಸಚಿವ ಸ್ಥಾನ ಭರ್ತಿಗೆ ಜೆಡಿಎಸ್‌ ನಿರ್ಧಾರ

Published:
Updated:
ಎಂಟು ಸಚಿವ ಸ್ಥಾನ ಭರ್ತಿಗೆ ಜೆಡಿಎಸ್‌ ನಿರ್ಧಾರ

ಬೆಂಗಳೂರು: ಸಂಪುಟ ವಿಸ್ತರಣೆ ಬಳಿಕ ಅತೃಪ್ತರ ಆಕ್ರೋಶದಿಂದ ತಪ್ಪಿಸಿಕೊಳ್ಳಲು ಎಂಟು ಸ್ಥಾನಗಳನ್ನು ಮಾತ್ರ ಭರ್ತಿ ಮಾಡಲು ಜೆಡಿಎಸ್‌ ವರಿಷ್ಠರು ನಿರ್ಧರಿಸಿದ್ದಾರೆ.

ಸೋಮವಾರ ರಾತ್ರಿ ಪಕ್ಷದ ವರಿಷ್ಠ ಎಚ್.ಡಿ. ದೇವೇಗೌಡ ನಿವಾಸದಲ್ಲಿ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಲಾಗಿತ್ತು. ಈ ಸಭೆಯಲ್ಲಿ ಎಲ್ಲ ಶಾಸಕರ ಅಭಿಪ್ರಾಯವನ್ನು ಪಡೆಯಲಾಯಿತು ಎಂದು ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಸೇರಿದಂತೆ ಜೆಡಿಎಸ್‌ಗೆ 12 ಸಚಿವ ಸ್ಥಾನಗಳು ಹಂಚಿಕೆಯಾಗಿವೆ. 11 ಸ್ಥಾನಗಳು ಮಾತ್ರ ಖಾಲಿ ಇವೆ. ಸಚಿವ ಸ್ಥಾನದ ಆಕಾಂಕ್ಷಿಗಳ ಒತ್ತಡ ದಿನೇ ದಿನೇ ಹೆಚ್ಚುತ್ತಿದೆ. ಎರಡು ಡಜನ್‌ಗೂ ಹೆಚ್ಚು ಶಾಸಕರು ಸಚಿವ ಸ್ಥಾನಕ್ಕಾಗಿ ವರಿಷ್ಠರಿಗೆ ದುಂಬಾಲು ಬಿದ್ದಿದ್ದಾರೆ. ಇದರ ಬಿಸಿ ತಪ್ಪಿಸಿಕೊಳ್ಳಲು ಮೂರು ಸಚಿವ ಸ್ಥಾನಗಳನ್ನು ತುಂಬುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ಇಂಧನ ಖಾತೆಗಾಗಿ ಎಚ್.ಡಿ. ರೇವಣ್ಣ ಮತ್ತು ಜಿ.ಟಿ. ದೇವೇಗೌಡ ತೀವ್ರ ಪೈಪೋಟಿ ಮುಂದುವರಿಸಿದ್ದಾರೆ. ಇದು ಪಕ್ಷದ ನಾಯಕರಿಗೆ ತಲೆ ನೋವು ತಂದಿದೆ.  ಲೋಕೋಪಯೋಗಿ ಮತ್ತು ಇಂಧನ ಎರಡೂ ಖಾತೆಗಳನ್ನು ತಮ್ಮ ಬಳಿ ಇಟ್ಟುಕೊಳ್ಳಲು ರೇವಣ್ಣ ತಮ್ಮ ತಂದೆಯ ಮನವೊಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಹಿರಿತನಕ್ಕೆ ಬದಲು ಸಂಪುಟದಲ್ಲಿ ಜಿಲ್ಲಾವಾರು ಪ್ರಾತಿನಿಧ್ಯ ನೀಡಲು ವರಿಷ್ಠರು ನಿರ್ಧರಿಸಿದ್ದಾರೆ. ಈ ಸೂತ್ರದ ಅನ್ವಯ ಎಚ್‌.ಡಿ.ರೇವಣ್ಣ (ಹಾಸನ), ಜಿ.ಟಿ.ದೇವೇಗೌಡ (ಮೈಸೂರು), ಡಿ.ಸಿ. ತಮ್ಮಣ್ಣ ಅಥವಾ ಸಿ.ಎಸ್‌.ಪುಟ್ಟರಾಜು (ಮಂಡ್ಯ) ಬಂಡೆಪ್ಪ ಕಾಶೆಂಪೂರ್‌ (ಬೀದರ್‌), ಶ್ರೀನಿವಾಸಗೌಡ (ಕೋಲಾರ), ವೆಂಕಟರಾವ್‌ನಾಡಗೌಡ (ರಾಯಚೂರು), ಎನ್‌.ಮಹೇಶ್‌(ಚಾಮರಾಜನಗರ) ಮತ್ತು ಶ್ರೀನಿವಾಸ (ತುಮಕೂರು) ಬುಧವಾರ ಸಂಪುಟ ಸೇರಲಿದ್ದಾರೆ.

ಇದರ ಪರಿಣಾಮ ಹಿರಿಯ ನಾಯಕರಾದ ಎಚ್‌.ವಿಶ್ವನಾಥ್‌, ಬಸವರಾಜ ಹೊರಟ್ಟಿ(ವಿಧಾನಪರಿಷತ್‌ ಸದಸ್ಯ), ಸಾ.ರಾ.ಮಹೇಶ್‌, ಬಿ.ಸತ್ಯನಾರಾಯಣ, ಎಂ.ಸಿ. ಮನಗೂಳಿ, ನಾಗನಗೌಡ ಕಂದಕೂರ ಅವರಿಗೆ ಸಂಪುಟದಲ್ಲಿ ಸ್ಥಾನ ಸಿಗುವ ಸಾಧ್ಯತೆ ಇಲ್ಲ ಎಂದು ಮೂಲಗಳು ತಿಳಿಸಿವೆ. ವಿಧಾನ

ಪರಿಷತ್‌ ಸದಸ್ಯರಾಗಿ ಸೋಮವಾರ ಆಯ್ಕೆಯಾಗಿರುವ ಬಿ.ಎಂ.ಫಾರೂಕ್‌ ಅವರಿಗೂ ಸಂಪುಟದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇಲ್ಲ ಎನ್ನಲಾಗಿದೆ.

ಮೂರು ಸ್ಥಾನಗಳನ್ನು ಭರ್ತಿ ಮಾಡದೇ ಉಳಿಸಿಕೊಳ್ಳುವುದರಿಂದ ಅತೃಪ್ತರು ಬಿಜೆಪಿಗೆ ಜಿಗಿಯವುದನ್ನು ತಡೆಯಬಹುದು ಎಂಬುದು ದೇವೇಗೌಡರ ಲೆಕ್ಕಾಚಾರ. ಕೆಲವು ನಿಷ್ಠರಿಗೆ ಈ ವಿಷಯವನ್ನು ಮನದಟ್ಟು ಮಾಡಿ ಒಪ್ಪಿಸುವ ಕಾರ್ಯದಲ್ಲೂ ಅವರು ತೊಡಗಿದ್ದಾರೆ.

ಸಂಪುಟ ವಿಸ್ತರಣೆಗೆ ಒಂದು ದಿನ ಬಾಕಿ ಉಳಿದಿರುವಂತೆ ದೇವೇಗೌಡರ ಮನೆಯಲ್ಲಿ ಸೋಮವಾರ ಸಚಿವ ಆಕಾಂಕ್ಷಿಗಳು ಬೆಳಿಗ್ಗೆಯಿಂದಲೇ ಬೀಡು ಬಿಟ್ಟಿದ್ದರು. ಸಂಪುಟದಲ್ಲಿ ಸ್ಥಾನ ಪಡೆಯಲು ಪ್ರತಿಯೊಬ್ಬರು ಇನ್ನಿಲ್ಲದ ಕಸರತ್ತು ನಡೆಸಿದ್ದರು.

ಎಚ್‌.ಡಿ.ರೇವಣ್ಣ ಬೆಳಿಗ್ಗೆ ಎಲ್ಲರಿಗಿಂತ ಮೊದಲೇ ಬಂದು ಸಚಿವರ ಪಟ್ಟಿ ತಯಾರಿಸಲು ಐದು ಗಂಟೆ ಮಾತುಕತೆ ನಡೆಸಿದರು. ಸಂಜೆಯ ವೇಳೆಗೆ ಇಬ್ಬರೂ ಸೇರಿ ಸಂಭಾವ್ಯರ ಪಟ್ಟಿಯನ್ನು ತಯಾರಿಸಿದರು ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry