ಟೆಕಿ ಅಜಿತಾಬ್ ನಾಪತ್ತೆ ಪ್ರಕರಣ: ಏನಾದರೂ ಮಾಡಿ ಪತ್ತೆ ಹಚ್ಚಿ ಎಂದ ಹೈಕೋರ್ಟ್

7

ಟೆಕಿ ಅಜಿತಾಬ್ ನಾಪತ್ತೆ ಪ್ರಕರಣ: ಏನಾದರೂ ಮಾಡಿ ಪತ್ತೆ ಹಚ್ಚಿ ಎಂದ ಹೈಕೋರ್ಟ್

Published:
Updated:
ಟೆಕಿ ಅಜಿತಾಬ್ ನಾಪತ್ತೆ ಪ್ರಕರಣ: ಏನಾದರೂ ಮಾಡಿ ಪತ್ತೆ ಹಚ್ಚಿ ಎಂದ ಹೈಕೋರ್ಟ್

ಬೆಂಗಳೂರು: ‘ಡಿಐಜಿ ಮಕ್ಕಳು ನಾಪತ್ತೆಯಾದರೆ 48 ಗಂಟೆಯಲ್ಲಿ ಪತ್ತೆ ಹಚ್ಚುತ್ತೀರಿ. ಬೇರೆಯವರು ನಾಪತ್ತೆಯಾದರೆ ಏಕೆ ಅಷ್ಟು ಬೇಗ ಪತ್ತೆ ಹಚ್ಚುವುದಿಲ್ಲ’ ಎಂದು ರಾಜ್ಯ ಸರ್ಕಾರವನ್ನು ಹೈಕೋರ್ಟ್‌ ಪ್ರಶ್ನೆಮಾಡಿದೆ.

ನಾಪತ್ತೆಯಾಗಿರುವ ಟೆಕಿ ಅಜಿತಾಬ್ ಕುಮಾರ್ ಪತ್ತೆಗೆ ಕೋರಿದ ಪ್ರಕರಣ ಅರ್ಜಿಯನ್ನು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್.ಪೊನ್ನಣ್ಣ, ‘ಈಗಾಗಲೇ ಪೊಲೀಸರು ತಮ್ಮ ಸಾಂಪ್ರದಾಯಿಕ ಪದ್ಧತಿ ಹಾಗೂ ಆಧುನಿಕ ವಿಧಾನಗಳನ್ನು ಬಳಸಿ ಎಲ್ಲಾ ಕೋನಗಳಲ್ಲಿ ತನಿಖೆ ನಡೆಸಿದ್ದಾರೆ. ಯಾವುದೇ ಪ್ರಯೋಜನವಾಗಿಲ್ಲ. ಪ್ರಾಮಾಣಿಕ ಪ್ರಯತ್ನ ಮುಂದುವರಿಸಲಾಗಿದೆ’ ಎಂದು ವಿವರಿಸಿದರು.

‘ಅಜಿತಾಬ್‌ ನಾಪತ್ತೆ ನಂತರ ಅವರ ಬಾವ ಡೂಪ್ಲಿಕೇಟ್‌ ಸಿಮ್‌ ತೆಗೆದುಕೊಂಡಿರುವುದು ಪತ್ತೆಯಾಗಿದೆ. ಮೊಬೈಲ್‌ ನೆಟ್‌ವರ್ಕ್‌ನವರು ಅಜಿತಾಬ್‌ನ ವಾಯ್ಸ್‌ ರೆಕಾರ್ಡ್‌ ವಿವರಗಳ ದಾಖಲೆ ಕೊಡಲು ಒಪ್ಪಿಲ್ಲ. ಇನ್ನೂ ಎರಡು ಪ್ರಮುಖ ವಿಧಾನಗಳಲ್ಲಿ ತನಖೆ ನಡೆಸಲಾಗುತ್ತಿದೆ. ಈ ಹಂತದಲ್ಲಿ ಅದನ್ನೆಲ್ಲಾ ಕೋರ್ಟ್‌ಗೆ ಮುಕ್ತವಾಗಿ ವಿವರಿಸುವುದು ಕಷ್ಟ’ ಎಂದರು.

ಪ್ರಕರಣವೇನು?: ಬ್ರಿಟಿಷ್ ಟೆಲಿಕಾಂ ಕಂಪೆನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಕುಮಾರ್ ಅಜಿತಾಬ್ 2017ರ ಡಿಸೆಂಬರ್ 18ರ ಸಂಜೆ 6.30ಕ್ಕೆ ನಾಪತ್ತೆಯಾಗಿದ್ದರು. ಈ ಬಗ್ಗೆ ಕುಮಾರ್ ತಂದೆ ಅಶೋಕ್ ಕುಮಾರ್ ಸಿನ್ಹಾ ವೈಟ್‌ಫೀಲ್ಡ್ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನನ್ವಯ ಪೊಲೀಸರು ಡಿ.20ರಂದು ಹಾಗೂ 29 ರಂದು ಎರಡು ಎಫ್‌ಐಆರ್ ದಾಖಲಿಸಿದ್ದರು.

ಏತನ್ಮಧ್ಯೆ ಸಿನ್ಹಾ, ‘ಪೊಲೀಸರು ಈವರೆಗೂ ನನ್ನ ಮಗನನ್ನು ಪತ್ತೆ ಹಚ್ಚಿಲ್ಲ. ಆದ್ದರಿಂದ, ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ನಿರ್ದೇಶಿಸಬೇಕು’ ಎಂದು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

*

ನೀವು ಕೋರ್ಟ್‌ಗೆ ಧನಾತ್ಮಕ ಫಲಿತಾಂಶವನ್ನೇ ಒಪ್ಪಿಸಬೇಕಾಗಿಲ್ಲ. ಮುಂದಿನ 10 ದಿನಗಳಲ್ಲಿ ಏನಾದರೂ ಮಾಡಿ ಸುಳಿವು ಹಿಡಿಯಿರಿ.

–ಹೈಕೋರ್ಟ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry