ಟೈರ್ ಸುಟ್ಟು, ವಾಹನಗಳ ತಡೆದು ಆಕ್ರೋಶ

7
ರಾಹುಲ್ ಗಾಂಧಿ, ವೇಣುಗೋಪಾಲ್‌ ವಿರುದ್ಧ ಘೋಷಣೆ

ಟೈರ್ ಸುಟ್ಟು, ವಾಹನಗಳ ತಡೆದು ಆಕ್ರೋಶ

Published:
Updated:
ಟೈರ್ ಸುಟ್ಟು, ವಾಹನಗಳ ತಡೆದು ಆಕ್ರೋಶ

ಬೆಂಗಳೂರು: ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುತ್ತಿದ್ದ ವೇಳೆಯಲ್ಲೇ, ಸಚಿವ ಸ್ಥಾನ ವಂಚಿತ ಶಾಸಕರ ಬೆಂಬಲಿಗರು ನಗರದಲ್ಲಿ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು. 

ಬಸವೇಶ್ವರ ವೃತ್ತದಲ್ಲಿ (ಚಾಲುಕ್ಯ ವೃತ್ತ) ಮಧ್ಯಾಹ್ನ ಸೇರಿದ್ದ ಶಾಸಕ ಎಚ್‌.ಕೆ.ಪಾಟೀಲ ಅವರ ಬೆಂಬಲಿಗರು, ‘ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು’ ಎಂದು ಒತ್ತಾಯಿಸಿದರು. ಕಾಂಗ್ರೆಸ್‌ ಗದಗ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಎಸ್.ಗಡ್ಡದೇವರ ಮಠ ನೇತೃತ್ವದಲ್ಲಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ, ಗದಗ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಾಸಣ್ಣ ಕುರುಡಗಿ, ಗದಗ–ಬೆಟಗೇರಿ ನಗರಸಭೆ ಅಧ್ಯಕ್ಷ ಬಿ.ಬಿ.ಅಸೂಟಿ ಪ್ರತಿಭಟನೆಯಲ್ಲಿದ್ದರು.

ರಾಹುಲ್ ಗಾಂಧಿ, ವೇಣು ಗೋಪಾಲ್‌ ವಿರುದ್ಧ ಘೋಷಣೆ ಕೂಗಿದರು. ಟೈರ್‌ಗೆ ಬೆಂಕಿ ಹಚ್ಚಿ, ಬಾಯಿ ಬಡಿದುಕೊಂಡರು. ವೃತ್ತದ ಮೂಲಕ ಹೊರಟಿದ್ದ ವಾಹನಗಳನ್ನು ತಡೆದು, ಸಂಚಾರಕ್ಕೂ ಅಡ್ಡಿಪಡಿಸಿದರು.

ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಲು ಪ್ರತಿಭಟನಾಕಾರರು ಮುಂದಾದರು. ಆಗ, ವೃತ್ತದಲ್ಲಿ  ದಟ್ಟಣೆ ಉಂಟಾಗಿ ವಾಹನಗಳು ಸಾಲುಗಟ್ಟಿ ನಿಂತವು. ಪೊಲೀಸರು, ‘ನಗರದ ಪ್ರಮುಖ ವೃತ್ತವಿದು. ಅನುಮತಿ ಇಲ್ಲದೆ ಪ್ರತಿಭಟನೆ ಮಾಡುತ್ತಿರುವುದು ಅಪರಾಧ. ಪ್ರತಿಭಟನೆ ಕೈಬಿಡದಿದ್ದರೆ ವಶಕ್ಕೆ ಪಡೆಯುತ್ತೇವೆ’ ಎಂದು ಎಚ್ಚರಿಸಿ, ಬಿಎಂಟಿಸಿ ಬಸ್‌ಗಳನ್ನು ಸ್ಥಳಕ್ಕೆ ಕರೆಸಿದರು. ಆನಂತರ, ಮಾನವ ಸರಪಳಿ ಮಾಡುವ ನಿರ್ಧಾರ ಕೈಬಿಟ್ಟ ಬೆಂಬಲಿಗರು ಬಸವೇಶ್ವರ ಪುತ್ಥಳಿ ಎದುರು ಪ್ರತಿಭಟನೆ ಮುಂದುವರಿಸಿದರು.

ವಿಷ ಕುಡಿಯುವುದಾಗಿ ಬೆಂಬಲಿಗರ ಎಚ್ಚರಿಕೆ: ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ ಅವರ ಸದಾಶಿವನಗರದ ಮನೆ ಎದುರು ಸೇರಿದ್ದ ಬೆಂಬಲಿಗರು, ಸಚಿವ ಸ್ಥಾನಕ್ಕಾಗಿ ಪ್ರತಿಭಟನೆ ನಡೆಸಿದರು. ‘ಉತ್ತರ ಕರ್ನಾಟಕದ ಪ್ರಮುಖ ಮುಖಂಡರಲ್ಲಿ ಪಾಟೀಲ ಒಬ್ಬರು. ಅವರನ್ನು ಪಕ್ಷ ಕಡೆಗಣಿಸಿದೆ’ ಎಂದು ಬೆಂಬಲಿಗರು ದೂರಿದರು.

‘ಪಾಟೀಲರಿಗೆ ಸಚಿವ ಸ್ಥಾನ ನೀಡದಿದ್ದರೆ ವಿಷ ಕುಡಿಯುತ್ತೇನೆ’ ಎಂದು ಬೆಂಬಲಿಗನೊಬ್ಬ ಎಚ್ಚರಿಸಿದ. ಸಚಿವ ಸ್ಥಾನ ಸಿಗದಿದ್ದರಿಂದ ಬೇಸರಗೊಂಡಿದ್ದ ಪಾಟೀಲರ ಮನವೊಲಿಸಲು ಶಾಸಕ ಕೃಷ್ಣ ಬೈರೇಗೌಡ ಹಾಗೂ ಡಿ.ಕೆ.ಶಿವಕುಮಾರ್, ಅವರ ಮನೆಗೆ ಹೋಗಿದ್ದರು. ಅವರನ್ನು ತರಾಟೆಗೆ ತೆಗೆದುಕೊಂಡ ಬೆಂಬಲಿಗರು, ಕಾಂಗ್ರೆಸ್ ಮುಖಂಡರ ವಿರುದ್ಧ ಘೋಷಣೆ ಕೂಗಿದರು. ಮುಜುಗರದಿಂದಲೇ ಇಬ್ಬರೂ ವಾಪಸ್‌ ಹೋದರು. 

ಶಿವಳ್ಳಿ ಬೆಂಬಲಿಗರು ವಶಕ್ಕೆ: ‘ಧಾರವಾಡ ಜಿಲ್ಲೆಯ ಕುಂದಗೋಳ ಶಾಸಕ ಸಿ.ಎಸ್.ಶಿವಳ್ಳಿ ಅವರಿಗೆ ಸಚಿವ ಸ್ಥಾನ ನೀಡಬೇಕು’ ಎಂದು ಒತ್ತಾಯಿಸಿ ಅವರ ಬೆಂಬಲಿಗರು ವಿಧಾನಸೌಧ ಬಳಿ ಪ್ರತಿಭಟನೆ ನಡೆಸಿದರು.

ವಿಧಾನಸೌಧದೊಳಗೆ ಹೋಗುತ್ತಿದ್ದ ವಾಹನಗಳನ್ನು ಅಡ್ಡಗಟ್ಟಿ, ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದಂತೆ ಪೊಲೀಸರು, 15ಕ್ಕೂ ಹೆಚ್ಚು ಬೆಂಬಲಿಗರನ್ನು ವಶಕ್ಕೆ ಪಡೆದು ನಗರ ಸಶಸ್ತ್ರ ಮೀಸಲು ಪಡೆಯ ಮೈದಾನಕ್ಕೆ ಕರೆದೊಯ್ದರು. ಅವರೆಲ್ಲರನ್ನೂ ಸಂಜೆ ಬಿಡುಗಡೆ ಮಾಡಿದರು.

ಕೆಪಿಸಿಸಿ ಎದುರು ಪ್ರತಿಭಟನೆ: ಶಾಂತಿನಗರ ಶಾಸಕ ಎನ್‌.ಎ. ಹ್ಯಾರಿಸ್ ಹಾಗೂ ಹೊಸಕೋಟೆ ಶಾಸಕ ಎಂ.ಟಿ.ಬಿ.ನಾಗರಾಜ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಅವರ ಬೆಂಬಲಿಗರು ಕೆಪಿಸಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು ಬೆಳಿಗ್ಗೆ ಮೆರವಣಿಗೆ ಮೂಲಕ ಕಚೇರಿಗೆ ಬಂದಿದ್ದ ಬೆಂಬಲಿಗರು, ಕಾಂಗ್ರೆಸ್ ಮುಖಂಡರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬೊಬ್ಬೆ ಹೊಡೆದರು. ತಮ್ಮ ನಾಯಕರಿಗೆ ಸಚಿವ ಸ್ಥಾನ ನೀಡದಿದ್ದರೆ ಗಂಭೀರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry