ಲಾಠಿ ಏಟಿನ ನಡುವೆಯೂ ಸಂಭ್ರಮ!

7

ಲಾಠಿ ಏಟಿನ ನಡುವೆಯೂ ಸಂಭ್ರಮ!

Published:
Updated:
ಲಾಠಿ ಏಟಿನ ನಡುವೆಯೂ ಸಂಭ್ರಮ!

ಬೆಂಗಳೂರು: ಸಂಪುಟ ವಿಸ್ತರಣೆಗೆ ಸಾಕ್ಷಿಯಾಗಲು ಕಾರ್ಯಕರ್ತರು ಬೆಳಿಗ್ಗೆಯಿಂದಲೇ ರಾಜಭವನದ ಕಡೆಗೆ ಬರುತ್ತಿದ್ದರು. ಕಾರ್ಯಕ್ರಮ ಶುರುವಾಗುತ್ತಿದ್ದಂತೆಯೇ ಒಳಹೋಗುವ ಧಾವಂತದಲ್ಲಿ ತಳ್ಳಾಟ ಉಂಟಾಗಿ, ಪೊಲೀಸರು ಲಘು ಲಾಠಿ ಪ್ರಹಾರವನ್ನೂ ಮಾಡಿದರು. ಕೊನೆಗೆ, ಸಚಿವರಾಗಿ ಹೊರ ಬಂದ ತಮ್ಮಕ್ಷೇತ್ರದ ಮುಖಂಡರನ್ನು ಭುಜದ ಮೇಲೆ ಹೊತ್ತು ತಿರುಗಾಡುವ ಮೂಲಕ ಕಾರ್ಯಕರ್ತರು ಸಂಭ್ರಮ ಆಚರಿಸಿದರು.

ರಾಜಭವನದ ಬಳಿ ಬುಧವಾರ ಕಂಡು ಬಂದ ದೃಶ್ಯಗಳಿವು. ಸಮಾರಂಭದಲ್ಲಿ 800 ಆಸನಗಳ ವ್ಯವಸ್ಥೆ ಮಾಡಿದ್ದರೂ, 3,000ಕ್ಕೂ ಹೆಚ್ಚು ಮಂದಿಗೆ ಪಾಸ್ ವಿತರಣೆ ಮಾಡಲಾಗಿತ್ತು. ಪಾಸ್ ಇದ್ದವರು ಏಕಾಏಕಿ ಒಳನುಗ್ಗಿದ್ದರಿಂದ ಕಾಲ್ತುಳಿತದ ಸನ್ನಿವೇಶ ಸೃಷ್ಟಿಯಾಯಿತು. ಕೂಡಲೇ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿ ಅನಾಹುತ ತಪ್ಪಿಸಿದರು.

ಒಳಗೆ ಸಚಿವರು ಪ್ರಮಾಣವಚನ ಸ್ವೀಕರಿಸುತ್ತಿದ್ದರೆ, ಹೊರಗಿದ್ದ ಅವರ ಅಭಿಮಾನಿಗಳ ಚಡಪಡಿಕೆ ಹೇಳತೀರದಾಗಿತ್ತು. ಕೆಲವರು ಬ್ಯಾರಿಕೇಡ್‌ಗಳನ್ನು ತಳ್ಳಿ ಒಳ ಹೋಗಲು ಮುಂದಾದರೆ, ಮತ್ತೆ ಕೆಲವರು ನಾನಾ ನೆಪಗಳನ್ನು ಹೇಳಿ ಪೊಲೀಸರ ಮನವೊಲಿಸಲು ಯತ್ನಿಸಿದರು. ಅದರಿಂದ ಯಾವುದೇ ಪ್ರಯೋಜನವಾಗಲಿಲ್ಲ.

‘ತಾವು ಕುಮಾರಸ್ವಾಮಿ ಅವರ ದೂರದ ಸಂಬಂಧಿಗಳು’ ಎಂದು ಹೇಳಿಕೊಂಡು ಬಂದಿದ್ದ ಕುಟುಂಬವೊಂದು, ‘ಪಾಸ್ ಇಲ್ಲದೆ ಯಾರಿಗೂ ಬಿಡುವುದಿಲ್ಲ’ ಎಂದ ಇನ್‌ಸ್ಪೆಕ್ಟರ್‌ ಜತೆ ಏಕವಚನದಲ್ಲೇ ವಾಗ್ವಾದ ನಡೆಸಿತು. ಹಿರಿಯ ಅಧಿಕಾರಿಗಳ ಮಧ್ಯಪ್ರವೇಶದ ಬಳಿಕ ಪರಿಸ್ಥಿತಿ ಶಾಂತವಾಯಿತಾದರೂ, ಆ ಕುಟುಂಬಕ್ಕೆ ಕೊನೆಗೂ ಒಳಹೋಗಲು ಸಾಧ್ಯವಾಗಲಿಲ್ಲ.

ರಾಜಭವನದ ಸುತ್ತಮುತ್ತಲ ರಸ್ತೆಗಳಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿತ್ತು. ಹೊರಗಡೆ ಹಾಕಲಾಗಿದ್ದ ಎರಡು ಎಲ್‌ಇಡಿ ಪರದೆಯಲ್ಲೇ ಕಾರ್ಯಕರ್ತರು ಸಮಾರಂಭ ವೀಕ್ಷಿಸುತ್ತಿದ್ದರು. ತಮ್ಮ ತಮ್ಮ ಕ್ಷೇತ್ರಗಳ ಶಾಸಕರು ಪ್ರಮಾಣವಚನ ಸ್ವೀಕರಿಸಲು ಬರುತ್ತಿದ್ದಂತೆಯೇ ಜೈಕಾರ ಕೂಗಿ, ಪಟಾಕಿಗಳನ್ನೂ ಸಿಡಿಸಿದರು.

ಸಮಾರಂಭ ಮುಗಿದ ನಂತರ ನೂತನ ಸಚಿವರು ಒಬ್ಬೊಬ್ಬರಾಗಿಯೇ ಕಾರಿನಲ್ಲಿ ಹೊರಬಂದರು. ಅವರನ್ನು ಪ್ರವೇಶದ್ವಾರದಲ್ಲೇ ತಡೆದು ವಾಹನದಿಂದ ಕೆಳಗಿಳಿಸುತ್ತಿದ್ದ ಕಾರ್ಯಕರ್ತರು, ಹೆಗಲ ಮೇಲೆ ಹೊತ್ತುಕೊಂಡು ಜೈಕಾರ ಕೂಗುತ್ತಿದ್ದರು.

ಬೆಂಬಲಿಗರ ಭುಜದ ಮೇಲೆ ಕುಳಿತುಕೊಂಡೇ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಯು.ಟಿ.ಖಾದರ್, ‘ಕರಾವಳಿ ಭಾಗದಿಂದ ಆಯ್ಕೆಯಾಗಿ ಬಂದ ಕಾಂಗ್ರೆಸ್ ಅಭ್ಯರ್ಥಿ

ನಾನೊಬ್ಬನೇ. ಕ್ಷೇತ್ರದ ಜನೆತೆಗೆ ಋಣಿಯಾಗಿರುತ್ತೇನೆ. ಸಮ್ಮಿಶ್ರ ಸರ್ಕಾರ ಇರುವುದರಿಂದ ಹೊಂದಿಕೊಂಡು ಕೆಲಸ ಮಾಡಬೇಕಿದೆ. ಆಡಳಿತ ಸುಸೂತ್ರವಾಗಿ ನಡೆಯಲಿದೆ’ ಎಂದು ಹೇಳಿದರು.

ಸಿಂದಗಿ ಕ್ಷೇತ್ರದ ಎಂ.ಸಿ.ಮನಗೂಳ ಹೊರಬರುತ್ತಿದ್ದಂತೆಯೇ, ‘82 ವರ್ಷದ ಸಿಂದಗಿ ಹುಲಿಗೆ... ಜೈ..’ ಎಂದು ಕಾರ್ಯಕರ್ತರು ಘೋಷಣೆ ಕೂಗಿದರು.

ನಡೆದುಕೊಂಡೇ ಹೋದ ಚೆನ್ನಮ್ಮ

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ಚೆನ್ನಮ್ಮ ಅವರಿಗೂ ರಾಜಭವನ ಪ್ರವೇಶ ಸವಾಲಾಯಿತು. ವಾಹನ ಪ್ರವೇಶಕ್ಕೆ ಅವಕಾಶ ಸಿಗದ ಹಿನ್ನೆಲೆಯಲ್ಲಿ ನಡೆದುಕೊಂಡೇ ರಾಜಭವನ ಪ್ರವೇಶಿಸಿದ ಚೆನ್ನಮ್ಮ, ಪುತ್ರ ರೇವಣ್ಣ ಪ್ರಮಾಣವಚನ ಸ್ವೀಕರಿಸಿದ್ದನ್ನು ಕಣ್ತುಂಬಿಕೊಂಡರು.

ಸಚಿವರಾಗಿ ಪ್ರಮಾಣವಚನದ ಸ್ವೀಕರಿಸಿದ ಸಾ.ರಾ.ಮಹೇಶ್ ಅವರ ಕುಟುಂಬ ಸದಸ್ಯರು ಸಹ ಪಾಸ್ ಇಲ್ಲದೆ ಹೊರಗಡೆಯೇ ನಿಂತಿದ್ದರು. ಕೊನೆಗೆ, ಮಹೇಶ್ ಆಪ್ತರೊಬ್ಬರು ಬಂದು ಅವರನ್ನು ಕರೆದುಕೊಂಡು ಹೋದರು.

ಬ್ಯಾರಿಕೇಡ್ ಹಾರಿದ ಶರವಣ!

ವಿಧಾನ ಪರಿಷತ್ ಸದಸ್ಯ ಶರವಣ ಅವರು ಮಧ್ಯಾಹ್ನ 2.15ರ ಸುಮಾರಿಗೆ ರಾಜಭವನದ ಬಳಿ ಬಂದರು. ನೂಕುನುಗ್ಗಲು ಇರುವುದನ್ನು ಕಂಡ ಅವರು, ಪತ್ರಕರ್ತರ ಗ್ಯಾಲರಿಗೆ ಬಂದು ಬ್ಯಾರಿಕೇಡ್ ಹಾರಿ ಒಳಹೋದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry