ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದನೆಗೆ ಒಪ್ಪಂದ

7
ಬಿಬಿಎಂಪಿ- ಜತೆ ಕೈಜೋಡಿಸಿದ ಫ್ರಾನ್ಸ್‌ ಕಂಪನಿ

ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದನೆಗೆ ಒಪ್ಪಂದ

Published:
Updated:
ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದನೆಗೆ ಒಪ್ಪಂದ

ಬೆಂಗಳೂರು: ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದನೆಗೆ ಸಂಬಂಧಿಸಿದ ಒಪ್ಪಂದವೊಂದಕ್ಕೆ ಫ್ರಾನ್ಸ್‌ನ 3 ವೇಸ್ಟ್‌ ಕಂಪನಿ ಮತ್ತು ಬಿಬಿಎಂಪಿ ಪರಸ್ಪರ ಸಹಿ ಹಾಕಿದ್ದು, ಘಟಕ ಸ್ಥಾಪನೆಗೆ ಬುಧವಾರ ಚಾಲನೆ ದೊರೆತಿದೆ. ಇದರ ಅನ್ವಯ ಬೆಂಗಳೂರಿನ ತ್ಯಾಜ್ಯ ಬಳಸಿ ವಿದ್ಯುತ್‌ ಉತ್ಪಾದಿಸುವ ಘಟಕ ನಿರ್ಮಾಣ ಕಾರ್ಯ ಚಿಕ್ಕನಾಗಮಂಗಲದಲ್ಲಿ ಇನ್ನು 7 ತಿಂಗಳಲ್ಲಿ ಪೂರ್ಣಗೊಳ್ಳಲಿದೆ.

ಹೊಸ ಯೋಜನೆ ಬಗ್ಗೆ ಬಿಬಿಎಂಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ 3 ವೇಸ್ಟ್‌ ಕಂಪೆನಿಯ ಪ್ರತಿನಿಧಿ ರಾಬರ್ಟ್‌ ಫಿಲಿಪ್‌ ವಿವರ ನೀಡಿದರು.

‘ತ್ಯಾಜ್ಯ ನಿರ್ವಹಣೆ ಜಾಗತಿಕವಾಗಿ ಎದುರಿಸುತ್ತಿರುವ ಸಮಸ್ಯೆ. 2050ರ ವೇಳೆಗೆ ತ್ಯಾಜ್ಯದ ಪ್ರಮಾಣ ಈಗಿರುವುದಕ್ಕಿಂತ 3 ಪಟ್ಟು ಹೆಚ್ಚಲಿದೆ. ಅದಕ್ಕಾಗಿ ನಾವು ದೂರದೃಷ್ಟಿಯ ಯೋಜನೆಯನ್ನು ರೂಪಿಸಿದ್ದೇವೆ. ಭವಿಷ್ಯದ ದಿನಗಳಲ್ಲಿ ದೇಶದ ಎಲ್ಲ ಭಾಗಗಳಲ್ಲಿ ಈ ಯೋಜನೆಯನ್ನು ಅಳವಡಿಸಿಕೊಳ್ಳಬಹುದು. 3 ವೇಸ್ಟ್‌ ಎಂದರೆ ಜೈವಿಕವಾಗಿ ಕರಗಬಲ್ಲ ತ್ಯಾಜ್ಯ, ಜೈವಿಕವಾಗಿ ಕರಗದ ತ್ಯಾಜ್ಯ ಮತ್ತು ಜೈವಿಕವಾಗಿ ಭಾಗಶಃವಷ್ಟೇ ಕರಗಬಹುದಾದ ತ್ಯಾಜ್ಯ. ಈ ಮೂರು ವಿಧಗಳನ್ನು ಒಟ್ಟು ಸೇರಿಸಿ ಕಂಪೆನಿಗೆ 3 ವೇಸ್ಟ್‌ ಎಂದು ಹೆಸರಿಸಲಾಗಿದೆ. ಇದೊಂದು ನವೋದ್ಯಮವಾಗಿದೆ. ಭಾರತದಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗುತ್ತಿದೆ’ ಎಂದರು.

‘ಪ್ರತಿ ದಿನ 600 ಟನ್‌ನಷ್ಟು ತ್ಯಾಜ್ಯವನ್ನು ಸಂಗ್ರಹಿಸಿ ವಿದ್ಯುತ್‌ ಉತ್ಪಾದನಾ ಘಟಕಕ್ಕೆ ರವಾನಿಸಲಾಗುತ್ತದೆ. ಇದಕ್ಕೆ ಕಂಪನಿಯು ₹ 250 ಕೋಟಿ ಹೂಡಿಕೆ ಮಾಡುತ್ತಿದೆ. 30 ವರ್ಷಗಳ ಅವಧಿಗೆ ಅವರಿಗೆ ಜಾಗವನ್ನು ಗುತ್ತಿಗೆ ಆಧಾರದಲ್ಲಿ ಕೊಡಲಾಗುತ್ತದೆ. ಈ ಘಟಕ ಪ್ರತಿದಿನ 7 ಮೆಗಾವಾಟ್‌ ವಿದ್ಯುತ್‌ ಉತ್ಪಾದನೆ ಮಾಡುತ್ತದೆ. ಆ ವಿದ್ಯುತ್ತನ್ನು ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮಕ್ಕೆ ಪ್ರತಿ ಕಿಲೋವಾಟ್‌ಗೆ ₹7.08ರ ಪ್ರಕಾರ ಕಂಪನಿ ಮಾರಾಟ ಮಾಡುತ್ತದೆ. 30 ವರ್ಷಗಳ ನಂತರ ಘಟಕವನ್ನು ಬಿಬಿಎಂಪಿಗೆ ಯಾವುದೇ ಷರತ್ತುಗಳಿಲ್ಲದೇ ಹಿಂತಿರುಗಿಸಬೇಕು ಎಂದು ಒಪ್ಪಂದದಲ್ಲಿ ಉಲ್ಲೇಖಿಸಲಾಗಿದೆ’ ಎಂದು ಬಿಬಿಎಂಪಿ ತ್ಯಾಜ್ಯ ನಿರ್ವಹಣಾ ಘಟಕ ವಿಭಾಗದ ವೆಂಕಟೇಶ್‌ ಅವರು ಹೇಳಿದರು. 

ತ್ಯಾಜ್ಯದಿಂದ ಉತ್ಪತ್ತಿಯಾಗುವ ಕಾಂಪೋಸ್ಟ್‌ಗೆ ಕೇಂದ್ರ ಸರ್ಕಾರ ಪ್ರತಿ ಮೆಟ್ರಿಕ್‌ ಟನ್‌ಗೆ ₹ 1,500 ಬೆಂಬಲ ಬೆಲೆ ನೀಡಲಿದೆ ಎಂದು ಅವರು ಹೇಳಿದರು.

ಫ್ರಾನ್ಸ್‌ನ ರಾಯಭಾರಿ ಎಚ್‌.ಇ.ಅಲೆಕ್ಸಾಂಡರ್‌ ಝೀಗ್ಲರ್‌ ಒಪ್ಪಂದಕ್ಕೆ ಸಹಿ ಹಾಕಿದ ಬಗ್ಗೆ ಹರ್ಷ ವ್ಯಕ್ತಪಡಿಸಿದರು.

ಈ ಒಪ್ಪಂದಕ್ಕೆ ಮಾರ್ಚ್ 10ರಂದು ದೆಹಲಿಯಲ್ಲಿ ಸಹಿ ಹಾಕಲಾಗಿತ್ತು. ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಈ ಯೋಜನೆ ಜಾರಿಯಾಗುವುದು ವಿಳಂಬವಾಯಿತು. ಬೆಂಗಳೂರಿನಕಸದ ಸಮಸ್ಯೆಗೆ ಶೀಘ್ರ ಪರಿಹಾರಸಿಗುವ ನಿರೀಕ್ಷೆಯಿದೆ ಎಂದು ಮೇಯರ್‌ ಆರ್‌. ಸಂಪತ್‌ ರಾಜ್‌ ಹೇಳಿದರು. ಬಿಬಿಎಂಪಿ ಜಂಟಿ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ಸರ್ಫರಾಜ್‌ ಖಾನ್‌ ಇದ್ದರು.

ಘಟಕ ಸ್ಥಾಪನೆಯಾಗಲಿರುವ ಚಿಕ್ಕನಾಗಮಂಗಲ ಪ್ರದೇಶಕ್ಕೆ ಕಂಪನಿ ಹಾಗೂ ಬಿಬಿಎಂಪಿ ಪ್ರತಿನಿಧಿಗಳು ಸಂಜೆ ಭೇಟಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry