ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾನು ಜನಾಂಗೀಯವಾದಿ ಅಲ್ಲ’

ಅವಹೇಳನಕಾರಿ ಪದ ಬಳಕೆ ಆರೋಪಕ್ಕೆ ಉತ್ತರ ನೀಡಿದ ಟ್ರಂಪ್
Last Updated 15 ಜನವರಿ 2018, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್: ‘ನಾನು ಜನಾಂಗೀಯವಾದಿ ಅಲ್ಲ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಹೈಟಿ ಮತ್ತು ಆಫ್ರಿಕಾ ವಲಸಿಗರ ವಿರುದ್ಧ ತಾವು ಅವಹೇಳನಕಾರಿ ಪದ ಬಳಸಿರುವುದಾಗಿ ಕೇಳಿಬರುತ್ತಿರುವ ಆರೋಪಕ್ಕೆ ಈ ಮೂಲಕ ಸ್ಪಷ್ಟನೆ ನೀಡಲು ಮುಂದಾಗಿದ್ದಾರೆ.

ವಲಸೆ ಸುಧಾರಣೆ ಕುರಿತು ಚರ್ಚಿಸಲು ನಡೆದ ಸಭೆಯಲ್ಲಿ, ಆಫ್ರಿಕಾ ರಾಷ್ಟ್ರಗಳ ಕುರಿತು ಟ್ರಂಪ್ ‘ಹೊಲಸುಗುಂಡಿ’ ಎನ್ನುವ ಪದ ಬಳಸಿದ್ದರು ಎನ್ನುವ ಆರೋಪ ಕೇಳಿಬರುತ್ತಿದೆ.ಆ ‍ಪದ ಬಳಕೆಯನ್ನು ಸ್ವತಃ ಟ್ರಂಪ್ ಅವರೇ ನಿರಾಕರಿಸಿದ್ದಾರೆ. ಆದರೆ ತಾವು ‘ಕಠೋರ’ ಭಾಷೆ ಬಳಸಿದ್ದಾಗಿ ಒಪ್ಪಿಕೊಂಡಿದ್ದಾರೆ.

ಹೈಟಿಯ ಹೆಚ್ಚು ವಲಸಿಗರಿಗೆ ಅಮೆರಿಕಕ್ಕೆ ಪ್ರವೇಶ ನೀಡುವ ಅವಶ್ಯಕತೆ ಕುರಿತು ಸಹ ಅವರು ಪ್ರಶ್ನಿಸಿದರು ಎಂದು ಸಭೆ ಕುರಿತು ಮಾಹಿತಿ ನೀಡಿದವರು ತಿಳಿಸಿದ್ದಾರೆ.

‘ಇಲ್ಲ, ಇಲ್ಲ. ನಾನು ಜನಾಂಗೀಯವಾದಿ ಅಲ್ಲ. ನೀವು ಈ ತನಕ ಸಂದರ್ಶಿಸಿದ ಜನರಲ್ಲಿ ನಾನು ಅತಿ ಕಡಿಮೆ ಜನಾಂಗೀಯವಾದಿ ಎಂದು ಹೇಳಬಲ್ಲೆ’ ಎಂದು ವರದಿಗಾರರ ಬಳಿ ಟ್ರಂಪ್ ಹೇಳಿದ್ದಾರೆ. ‘ಸಭೆಯಲ್ಲಿದ್ದ ಬೇರೆ ಸಂಸದರು ನನ್ನ ಹೇಳಿಕೆ ಕುರಿತು ಏನು ಹೇಳಿದರು ಎಂದು ನಿಮಗೆ ತಿಳಿದಿದೆಯೆ?’ ಎಂದು ಕೇಳಿದ ಅವರು, ‘ಅವರು ಏನೂ ಹೇಳಿಲ್ಲ’ ಎಂದರು.

‘ಅಧ್ಯಕ್ಷರು ಸಭೆಯಲ್ಲಿ ಹೊಲಸುಗುಂಡಿ ಎನ್ನುವ ಪದವನ್ನೇ ಬಳಸಿದ್ದರು. ದ್ವೇಷತುಂಬಿದ ಈ ಮಾತುಗಳನ್ನು ಅವರು ಒಂದಲ್ಲ ಹಲವು ಬಾರಿ ಹೇಳಿದರು’ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಡೆಮಾಕ್ರಟಿಕ್ ಸಂಸದ ಡಿಕ್ ಡರ್ಬಿನ್ ಹೇಳಿದ್ದಾರೆ.

ಟ್ರಂಪ್ ಅವರ ಹೇಳಿಕೆ ಕುರಿತು ಆಫ್ರಿಕಾದ ಒಕ್ಕೂಟ ‘ಕಳವಳ ಹಾಗೂ ಆಕ್ರೋಶ’ ವ್ಯಕ್ತಪಡಿಸಿದ್ದು, ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದೆ.
ಈ ಕುರಿತು ಪ್ರತಿಭಟಿಸಲು, ಅವರ ಭಾಷಣ ಬಹಿಷ್ಕರಿಸುವುದಾಗಿ ಡೆಮಾಕ್ರಟಿಕ್ ಪಕ್ಷದ ನಾಲ್ವರು ಸಂಸದರು ಹೇಳಿದ್ದಾರೆ.

ಟ್ರಂಪ್ ಅಂತಹ ಪದ ಬಳಕೆ ಮಾಡಿಲ್ಲ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ರಿಪಬ್ಲಿಕನ್ ಸಂಸದರೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT