ಆರೋಪಿಯ ಗುರುತು ಹಿಡಿದ ಸಂತ್ರಸ್ತೆ

7
ಬೆಂಗಳೂರಿನಲ್ಲಿ ಓಲಾ ಕ್ಯಾಬ್‌ ಚಾಲಕ ಲೈಂಗಿಕ ದೌರ್ಜನ್ಯ ಎಸಗಿದ್ದ ಪ್ರಕರಣ

ಆರೋಪಿಯ ಗುರುತು ಹಿಡಿದ ಸಂತ್ರಸ್ತೆ

Published:
Updated:

ಬೆಂಗಳೂರು: ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದಡಿ ಜೀವನ್‌ಬಿಮಾ ನಗರ ಪೊಲೀಸರು ಬಂಧಿಸಿರುವ ಓಲಾ ಕ್ಯಾಬ್‌ ಚಾಲಕ ವಿ.ಅರುಣ್‌ನನ್ನು (28), ಸಂತ್ರಸ್ತೆಯು ಗುರುತು ಹಿಡಿದಿದ್ದಾರೆ.

‘ಜೂನ್ 1ರಂದು ನಡೆದಿದ್ದ ಘಟನೆ ಸಂಬಂಧ ಮುಂಬೈನಿಂದ ಇ–ಮೇಲ್‌ ಮೂಲಕ ಯುವತಿ ದೂರು ನೀಡಿದ್ದರು. ಅದರ ಅನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದೆವು. ಯುವತಿ ಬುಧವಾರ ನಗರಕ್ಕೆ ವಾಪಸ್ಸಾಗಿದ್ದಾರೆ ಎಂಬುದು ತಿಳಿಯಿತು. ಕೂಡಲೇ ಆರೋಪಿಯ ಪರೇಡ್‌ ನಡೆಸಿದೆವು. ಅಲ್ಲಿಗೆ ಬಂದಿದ್ದ ಯುವತಿ, ಆತನೇ ಆರೋಪಿ ಎಂಬುದನ್ನು ಗುರುತಿಸಿದರು’ ಎಂದು ಪೊಲೀಸರು ಹೇಳಿದರು.

ಸಂತ್ರಸ್ತೆ ಮೊಬೈಲ್‌ನಲ್ಲೇ ಫೋಟೊ ಕ್ಲಿಕ್ಕಿಸಿದ್ದ; ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿ ಕಾರು ನಿಲ್ಲಿಸಿ ಬಾಗಿಲುಗಳನ್ನು ಲಾಕ್‌ ಮಾಡಿದ್ದ ಆರೋಪಿ, ಯುವತಿಯ ಬಟ್ಟೆಗಳನ್ನು ತೆಗೆಯಲು ಯತ್ನಿಸಿದ್ದ. ಬಳಿಕ, ಅವರ ಮೊಬೈಲ್‌ ಕಸಿದುಕೊಂಡು ಅದರಲ್ಲಿ ಫೋಟೊ ಕ್ಲಿಕ್ಕಿಸಿಕೊಂಡಿದ್ದ. ಯುವತಿಯೇ ಫೋಟೊ ಕಳುಹಿಸಿದ್ದಾಳೆ ಎಂದು ಬಿಂಬಿಸಲು, ಅವರದ್ದೇ ವಾಟ್ಸ್‌ಆ್ಯಪ್‌ನಿಂದ ತನ್ನ ಮೊಬೈಲ್‌ಗೆ ಫೋಟೊಗಳನ್ನು ವರ್ಗಾವಣೆ ಮಾಡಿಕೊಂಡಿದ್ದ ಎಂಬುದು ತನಿಖೆಯಿಂದ ಗೊತ್ತಾಗಿರುವುದಾಗಿ ಪೊಲೀಸರು ಹೇಳಿದರು.

‘ವಾಸ್ತುಶಿಲ್ಪಿಯಾದ ಯುವತಿ, ಕೆಲಸ ನಿಮಿತ್ತ ಜೂನ್ 1ರಂದು ವಿಮಾನದಲ್ಲಿ ಮುಂಬೈಗೆ ಹೊರಟಿದ್ದರು. ಮನೆಯಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಕ್ಯಾಬ್‌ನಲ್ಲಿ ಹೊರಟಿದ್ದರು. ದಾರಿಮಧ್ಯೆಯೇ ಕಾರು ನಿಲ್ಲಿಸಿದ್ದ ಚಾಲಕ, ಬಟ್ಟೆ ಬಿಚ್ಚುವಂತೆ ಹೇಳಿದ್ದ. ಅದಕ್ಕೆ ಒಪ್ಪದಿದ್ದಾಗ ಕುತ್ತಿಗೆ ಹಿಸುಕಿ ಕೊಲೆಗೆ ಯತ್ನಿಸಿದ್ದ. ತನ್ನ ಸ್ನೇಹಿತರನ್ನು ಕರೆಸಿ ಅತ್ಯಾಚಾರ ಮಾಡಿಸುವುದಾಗಿ ಬೆದರಿಸಿದ್ದ. ಈ ಬಗ್ಗೆ ಯುವತಿ ಹೇಳಿಕೆ ನೀಡಿದ್ದಾರೆ’ ಎಂದು ವಿವರಿಸಿದರು.

ಸುದ್ದಿ ವಾಹಿನಿಗಳ ವಿರುದ್ಧ ಆಕ್ರೋಶ: ‘ಕ್ಯಾಬ್‌ ಚಾಲಕನ ಕೈಗೆ ಸಿಕ್ಕಿದ್ದ ಮಗಳು, ಸಾಯುವುದಷ್ಟೇ ಬಾಕಿ ಇತ್ತು. ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು. ಇನ್ನೊಬ್ಬರಿಗೆ ಅದು ಪಾಠವಾಗಬೇಕು’ ಎಂದು ಸಂತ್ರಸ್ತೆಯ ತಂದೆ ಒತ್ತಾಯಿಸಿದ್ದಾರೆ.

ಪೊಲೀಸರ ಬಳಿ ಅಳಲು ತೋಡಿಕೊಂಡಿರುವ ಅವರು, ‘ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಂತ್ರಸ್ತೆಯ ಗುರುತು ಬಹಿರಂಗಗೊಳಿಸಬಾರದು ಎಂಬ ನಿಯಮವಿದೆ. ಅಷ್ಟಾದರೂ ಕೆಲ ಸುದ್ದಿ ವಾಹಿನಿಗಳು, ಮಗಳ ಚಿತ್ರವನ್ನು ತೋರಿಸಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry