ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಚ್ಯಂಕದ ಹೊಸ ಮೈಲುಗಲ್ಲು

Last Updated 17 ಜನವರಿ 2018, 19:30 IST
ಅಕ್ಷರ ಗಾತ್ರ

ಮುಂಬೈ: ಮುಂಬೈ ಷೇರುಪೇಟೆಯು ಬುಧವಾರದ ವಹಿವಾಟಿನಲ್ಲಿ  ಹೊಸ ಮೈಲುಗಲ್ಲು ತಲುಪಿತು. ಕಾರ್ಪೊರೇಟ್‌ಗಳ ಹಣಕಾಸು ಸಾಧನೆಯಲ್ಲಿ ಚೇತರಿಕೆ ಕಂಡು ಬಂದಿರುವುದು ಮತ್ತು ಪ್ರಸಕ್ತ ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆ ಹೆಚ್ಚಳಗೊಳ್ಳುವುದನ್ನು ತಡೆಯಲು ಸರ್ಕಾರ ಕೈಗೊಂಡಿರುವ ಕ್ರಮಗಳು ಸಂವೇದಿ ಸೂಚ್ಯಂಕವು ಇನ್ನೊಂದು ಹೊಸ ದಾಖಲೆ ಬರೆಯಲು ನೆರವಾದವು.

ಸಂವೇದಿ ಸೂಚ್ಯಂಕವು ದಿನದ ವಹಿವಾಟಿನಲ್ಲಿ 310 ಅಂಶಗಳ ಏರಿಕೆ ಕಂಡು ಮೊದಲ ಬಾರಿಗೆ 35 ಸಾವಿರ ಅಂಶಗಳ ಗಡಿ ದಾಟಿತು. ವಹಿವಾಟುದಾರರ ಖರೀದಿ ಆಸಕ್ತಿ ಫಲವಾಗಿ ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’ ಕೂಡ  ಹೊಸ ಎತ್ತರಕ್ಕೆ ತಲುಪಿತು. 88 ಅಂಶಗಳ ಹೆಚ್ಚಳ ದಾಖಲಿಸಿ 10,788 ಅಂಶಗಳಿಗೆ ಜಿಗಿಯಿತು.

ಪೇಟೆಯಲ್ಲಿ ಹಣದ ಹರಿವು ಹೆಚ್ಚಿರುವುದರಿಂದ ಸೂಚ್ಯಂಕವು ದಿನೇ ದಿನೇ ಹೊಸ ದಾಖಲೆ ಬರೆಯುತ್ತಿದೆ. ಜನವರಿಯಿಂದೀಚೆಗೆ ದೇಶಿ ಮ್ಯೂಚುವಲ್‌ ಫಂಡ್‌ ಮತ್ತು ವಿಮೆ ಸಂಸ್ಥೆಗಳು ₹ 1,027 ಕೋಟಿಗಳನ್ನು ಪೇಟೆಯಲ್ಲಿ ತೊಡಗಿಸಿವೆ.

30 ಷೇರುಗಳ ಸಂವೇದಿ ಸೂಚ್ಯಂಕವು 310.77 ಅಂಶಗಳ ಏರಿಕೆ ಕಂಡು 35,081.82 ಅಂಶಗಳಿಗೆ ತಲುಪಿತು. ಸೂಚ್ಯಂಕವು 34 ಸಾವಿರ ಅಂಶಗಳಿಂದ 35 ಸಾವಿರದ ಗಡಿ ದಾಟಲು 17 ವಹಿವಾಟಿನ ದಿನಗಳನ್ನು ಮಾತ್ರ ತೆಗೆದುಕೊಂಡಿತು. 2017ರ ಡಿಸೆಂಬರ್ 26ರಂದು 34 ಸಾವಿರದ ಗಡಿ ತಲುಪಿತ್ತು.

ಕೇಂದ್ರ ಸರ್ಕಾರವು ಪ್ರಸಕ್ತ ಹಣಕಾಸು ವರ್ಷದಲ್ಲಿ ಮುಕ್ತ ಮಾರುಕಟ್ಟೆಯಿಂದ ಹೆಚ್ಚುವರಿ ಸಾಲ ಪಡೆಯುವುದನ್ನು ₹ 50 ಸಾವಿರ ಕೋಟಿಗಳಿಂದ ₹ 20 ಸಾವಿರ ಕೋಟಿಗಳಿಗೆ ಇಳಿಸಿದೆ. ಇದರಿಂದ ವಿತ್ತೀಯ ಕೊರತೆ ಹೆಚ್ಚಳಗೊಳ್ಳುವ ಸಾಧ್ಯತೆ ದೂರವಾಗಿದೆ. ಇದು ವಹಿವಾಟುದಾರರಲ್ಲಿ ಖರೀದಿ ಆಸಕ್ತಿ ಹೆಚ್ಚಲು ಕಾರಣವಾಯಿತು. ಬ್ಯಾಂಕಿಂಗ್‌ ಷೇರುಗಳಿಗೆ ಹೆಚ್ಚಿನ ಬೇಡಿಕೆಯೂ ವ್ಯಕ್ತವಾಯಿತು. ಐ.ಟಿ ವಲಯದ ಷೇರುಗಳ ಬೆಲೆಗಳೂ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡವು ಎಂದು ದಲ್ಲಾಳಿಗಳು ತಿಳಿಸಿದ್ದಾರೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಹೆಚ್ಚಳ ಮತ್ತು ವಿದೇಶಿ ಬ್ಯಾಂಕ್‌ಗಳು ಸಾಲಗಳ ಮೇಲಿನ ಬಡ್ಡಿ ದರ ಹೆಚ್ಚಿಸಿರುವುದು, ಗೂಳಿಯ ಈ ನಾಗಾಲೋಟಕ್ಕೆ ಅಡ್ಡಿಯಾಗಬಹುದು ಎನ್ನುವ ಆತಂಕ ವಹಿವಾಟುದಾರರಲ್ಲಿ ಕಂಡು ಬರುತ್ತಿದೆ.

ವಿದೇಶಿ ಹೂಡಿಕೆದಾರರು ಮಂಗಳವಾರ ₹ 693 ಕೋಟಿಗಳಷ್ಟು ಮೊತ್ತದ ಷೇರುಗಳನ್ನು ಖರೀದಿಸಿದ್ದಾರೆ. ದೇಶಿ ಸಾಂಸ್ಥಿಕ ಹೂಡಿಕೆದಾರರು ₹ 246 ಕೋಟಿಗಳಷ್ಟು ಮೊತ್ತದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಗರಿಷ್ಠ ಲಾಭ ಬಾಚಿಕೊಂಡ ಷೇರುಗಳು (ಕಂಪನಿ  ಲಾಭ (%))

ಆ್ಯಕ್ಸಿಸ್‌ ಬ್ಯಾಂಕ್‌  4.65

ಎಸ್‌ಬಿಐ  3.44

ಐಸಿಐಸಿಐ ಬ್ಯಾಂಕ್‌ 2.68

ಇನ್ಫೊಸಿಸ್‌ 2.61

ಯೆಸ್‌ ಬ್ಯಾಂಕ್‌ 2.58

****

ನಷ್ಟಕ್ಕೆ ಗುರಿಯಾದ ಷೇರುಗಳು

ಕಂಪನಿ  ನಷ್ಟ (%)

ವಿಪ್ರೊ 1.85

ಕೋಟಕ್‌ ಮಹೀಂದ್ರಾ 1.03

ಎಚ್‌ಡಿಎಫ್‌ಸಿ ಬ್ಯಾಂಕ್‌ 0.88

ಹೀರೊ ಮೋಟರ್‌ ಕಾರ್ಪ್‌ 0.80

ಒಎನ್‌ಜಿಸಿ 0.74

* ಹಣದ ಹರಿವಿನಲ್ಲಿನ ಹೆಚ್ಚಳವು ಮಾರುಕಟ್ಟೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದೆ. ದೊಡ್ಡ ಕಂಪನಿಗಳ ಷೇರುಗಳ ಖರೀದಿಯು ಹೆಚ್ಚು ಸುರಕ್ಷಿತವಾಗಿದೆ
-ನವನೀತ್‌ ಮುನೋತ್‌, ಎಸ್‌ಬಿಐ ಫಂಡ್‌ ಮ್ಯಾನೇಜ್‌ಮೆಂಟ್‌ನ ಮುಖ್ಯ ಹೂಡಿಕೆದಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT