ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ಕುಂಟೆಗಳಲ್ಲಿ ಹನಿ ನೀರು ಇಲ್ಲ, ಆತಂಕ

Last Updated 18 ಜನವರಿ 2018, 8:37 IST
ಅಕ್ಷರ ಗಾತ್ರ

ವಿಜಯಪುರ: ತೀವ್ರ ಬರಗಾಲಕ್ಕೆ ತುತ್ತಾಗಿರುವ ಬಯಲು ಸೀಮೆ ಭಾಗಗಳಾದ ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿನ ಜಲಮೂಲಗಳಾದ ಕೆರೆ, ಕುಂಟೆಗಳಲ್ಲಿ ಒಂದು ಹನಿ ನೀರಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತ ಮುಖಂಡರಾದ ಹರ್ಷವರ್ಧನ್, ನಾರಾಯಣಸ್ವಾಮಿ, ಬಚ್ಚರಾಯಪ್ಪ ಬೇಸರ ವ್ಯಕ್ತಪಡಿಸಿದರು.

ಬಯಲು ಸೀಮೆ ಭಾಗಗಳಲ್ಲಿ ಆವ್ಯಾಹತವಾಗಿ ನಡೆದಿರುವ ಅಕ್ರಮ ಮರಳು ಗಣಿಗಾರಿಕೆ, ನೀಲಗಿರಿ ಮರಗಳ ಬೆಳವಣಿಗೆ, ಜಾಲಿಮರಗಳಿಂದ ಅಂತರ್ಜಲ ಮಟ್ಟ 2012 ರಲ್ಲಿ 700 ರಿಂದ 800 ಅಡಿಗಳಲ್ಲಿತ್ತು. ಐದು ವರ್ಷಗಳಲ್ಲಿ 1600 ಅಡಿಗಳಿಗೆ ಗಣನೀಯವಾಗಿ ಕುಸಿದಿದೆ. ಅಂತರ್ಜಲವನ್ನು ವೃದ್ಧಿಸಲು ಜಲ ಸಂಪನ್ಮೂಲ ಇಲಾಖೆ, ಕೆರೆ ಸಂಜೀವಿನಿ ಯೋಜನೆಯಂತಹ ಹಲವಾರು ಯೋಜನೆಗಳಲ್ಲಿ ಕೋಟ್ಯಂತರ ರೂಪಾಯಿಗಳ ಅನುದಾನ ಬಿಡುಗಡೆ ಮಾಡುತ್ತಿದ್ದರೂ ಯೋಜನೆ ಸಮರ್ಪಪಕವಾಗಿ ಬಳಕೆಯಾಗದ ಕಾರಣ ಬಹುತೇಕ ಕೆರೆಗಳಲ್ಲಿ ನೀರಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಕೆರೆಗಳಲ್ಲಿ ದಟ್ಟವಾಗಿ ಬೆಳೆದು ನಿಂತಿರುವ ನೀಲಗಿರಿ ಮರಗಳು, ಸರ್ಕಾರದ ಆದೇಶವಿದ್ದರೂ ಇದುವರೆಗೂ ತೆರವುಗೊಳಿಸದ ನೀಲಗಿರಿ ಮರಗಳು ಅಂತರ್ಜಲದ ಮಟ್ಟ ತೀವ್ರವಾಗಿ ಕುಸಿಯಲು ಕಾರಣವಾಗಿವೆ. 2017 ರ ಸೆಪ್ಟೆಂಬರ್, ಅಕ್ಟೋಬರ್ ತಿಂಗಳಿನಲ್ಲಿ ಬಿದ್ದಿದ್ದ ಉತ್ತಮ ಮಳೆಯಿಂದ ಹಲವಾರು ಕೆರೆಗಳಿಗೆ ನೀರು ಬಂದಿದ್ದರೂ ಕೆಲವು ಕೆರೆಗಳಲ್ಲಿ ಹೇರಳವಾಗಿರುವ ಜಾಲಿಮರಗಳಿಂದ ನೀರು ಉಳಿಯದಂತಹ ಸ್ಥಿತಿ ನಿರ್ಮಾಣವಾಗಿದೆ.

ನೀಲಗಿರಿಗಿಂತಲೂ ವೇಗವಾಗಿ ಅಂತರ್ಜಲವನ್ನು ಹೀರಬಲ್ಲ ಸಾಮರ್ಥ್ಯವುಳ್ಳ ಜಾಲಿಮರಗಳನ್ನು ಕೆರೆಗಳಲ್ಲಿ ತೆರವುಗೊಳಿಸಬೇಕು ಎಂದು ಅನೇಕ ಬಾರಿ ಅರಣ್ಯ ಇಲಾಖೆ ಅಧಿಕಾರಿಗಳು, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು, ಸೇರಿದಂತೆ ಗ್ರಾಮ ಪಂಚಾಯಿತಿಗಳಿಗೆ ಮನವಿ ಕೊಟ್ಟರೂ ಇದುವರೆಗೂ ಯಾರೂ ಗಮನಹರಿಸಿಲ್ಲ ಎಂದು ರೈತ ಮುಖಂಡ ದೊಡ್ಡೇಗೌಡ ಅಧಿಕಾರಿಗಳ ಕಾರ್ಯವೈಖರಿಗೆ ಬೇಸರ ವ್ಯಕ್ತಪಡಿಸಿದರು.

ನೀಲಗಿರಿ ತೋಪುಗಳ ಪಕ್ಕಗಳಲ್ಲಿ ರೈತರು ಇಟ್ಟಿರುವ ಬೆಳೆಗಳು ಶೇ 80 ರಷ್ಟು ನಷ್ಟವಾಗುತ್ತಿವೆ. ಬೆಳೆಗಳು ಇಳುವರಿ ಬರುತ್ತಿಲ್ಲ, ಲಕ್ಷಾಂತರ ರೂಪಾಯಿಗಳ ಸಾಲವನ್ನು ತಲೆಯ ಮೇಲೆ ಎಳೆದುಕೊಳ್ಳುವಂತಾಗಿದೆ. ಹಲವು ಕಡೆಗಳಲ್ಲಿ ರೈತರೇ ಸ್ವಯಂ ಪ್ರೇರಿತರಾಗಿ ನೀಲಗಿರಿ ಮರಗಳನ್ನು ಕಿತ್ತುಹಾಕಿದ್ದಾರೆ ಎಂದರು.

ಕೆರೆಗಳನ್ನು ಸಿದ್ಧಗೊಳಿಸಿಲ್ಲ: ನಾಗವಾರ ಪ್ರದೇಶದ ಹೆಬ್ಬಾಳದ ಕೆರೆಗಳ ನೀರನ್ನು ಸಂಸ್ಕರಿಸಿದ ನಂತರ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿನ ಕೆರೆಗಳಿಗೆ ತುಂಬಿಸಿ, ಅಂತರ್ಜಲದ ಮಟ್ಟವನ್ನು ಏರಿಕೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹೇಳುತ್ತಿರುವ ಸರ್ಕಾರ, ಈವರೆಗೂ ಒಂದು ಕೆರೆಯಲ್ಲಿನ ಹೂಳು ತೆಗೆದಿಲ್ಲ, ಶಿಥಿಲವಾಗಿರುವ ಕೆರೆಗಳನ್ನು ದುರಸ್ಥಿ ಮಾಡುವಂತಹ ಕೆಲಸ ಮಾಡಿಲ್ಲ, ಎತ್ತಿನಹೊಳೆ ಯೋಜನೆಯಿಂದ ನೀರು ತರುವುದಾಗಿ ₹ 13 ಸಾವಿರ ಕೋಟಿ ರೂಪಾಯಿಗಳ ಅನುದಾನ ಮೀಸಲಿಟ್ಟು ಅದರಲ್ಲಿ ₹ 2 ಸಾವಿರ ಕೋಟಿಗಳನ್ನು ಸಿ.ಸಿ.ರಸ್ತೆಗಳ ಅಭಿವೃದ್ಧಿಗಾಗಿ ಬಿಡುಗಡೆ ಮಾಡುವ ಮೂಲಕ ಹಣವನ್ನು ಪೋಲು ಮಾಡುವ ಮೂಲಕ ಯೋಜನೆಯ ಬಗ್ಗೆ ಸರ್ಕಾರಕ್ಕೆ ಎಷ್ಟರಮಟ್ಟಿಗೆ ಬದ್ಧತೆಯಿದೆ ಎಂಬುದನ್ನು ತೋರಿಸಿದೆ ಎಂದು ರೈತ ಮುಖಂಡ ಭೈರೇಗೌಡ ಬೇಸರ ವ್ಯಕ್ತಪಡಿಸಿದರು.

ಬೇಸಿಗೆಯಲ್ಲಿ ಕೆರೆಗಳಲ್ಲಿ ಹೂಳು ತೆಗೆಯುವ ಮೂಲಕ ಮುಂದಿನ ಮಳೆಗಾಲದಲ್ಲಿ ಬರುವ ಮಳೆಯ ನೀರನ್ನು ಇಂಗಿಸಿ ಅಂತರ್ಜಲ ವೃದ್ಧಿ ಮಾಡಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT