ಆನ್‌ಲೈನ್‌ ವಂಚನೆಗೊಳಗಾದವರು ಬ್ರಹ್ಮಕುಮಾರಿ ಸದಸ್ಯರಲ್ಲ: ಸ್ಪಷ್ಟನೆ

7

ಆನ್‌ಲೈನ್‌ ವಂಚನೆಗೊಳಗಾದವರು ಬ್ರಹ್ಮಕುಮಾರಿ ಸದಸ್ಯರಲ್ಲ: ಸ್ಪಷ್ಟನೆ

Published:
Updated:

ಬೆಂಗಳೂರು: ಉಡುಗೊರೆ ಕೊಡುವುದಾಗಿ ನಂಬಿಸಿ ₹ 1.11 ಲಕ್ಷ ಪಡೆದು ವಂಚನೆಗೊಳಗಾದ ಸನ್ಯಾಸಿನಿ, ಅಮ್ಮ ತೇಜಸ್ವಿನಿ ತಾವು ಬ್ರಹ್ಮಕುಮಾರಿ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

‘ಜಿ.ಎಂ.ಪಾಳ್ಯದ ಭೈರಸಂದ್ರ ಮುಖ್ಯರಸ್ತೆಯ ಬಳಿ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದು ಬಸವಣ್ಣನ ಅನುಯಾಯಿಯಾಗಿದ್ದೇನೆ. ಅಧ್ಯಾತ್ಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸಂಸ್ಥೆಗೂ ತಮಗೂ ಯಾವುದೇ ಸಂಬಂಧ ಇಲ್ಲ’ ಎಂದು ಅವರು ಪ್ರಜಾವಾಣಿಗೆ ತಿಳಿಸಿದ್ದಾರೆ.

ಅಮ್ಮ ತೇಜಸ್ವಿನಿ ಅವರ ಫೇಸ್‌ಬುಕ್‌ ಖಾತೆಗೆ ಜಾನ್‌ ಹೆನ್ರಿ ಎಂಬಾತ ಸ್ನೇಹ ಕೋರಿ ಸಂದೇಶ ಕಳುಹಿಸಿದ್ದ. ಬಳಿಕ ಉಡುಗೊರೆ ಕಳುಹಿಸುವುದಾಗಿ ಹೇಳಿ ಹಂತಹಂತವಾಗಿ ಸುಮಾರು ₹ 80 ಸಾವಿರ ಪಡೆದಿದ್ದ.

‘ನನಗೆ ಯಾವುದೇ ಉಡುಗೊರೆ ಬೇಡ. ಅಧ್ಯಾತ್ಮ ಜೀವನ ನಡೆಸುವವರಿಗೆ ಅದರ ಅವಶ್ಯಕತೆ ಇಲ್ಲ ಎಂದು ಮೊದಲೇ ಸ್ಪಷ್ಟಪಡಿಸಿದ್ದೆ. ಆದರೆ, ಆ ವ್ಯಕ್ತಿ ತಾನು ಅಧ್ಯಾತ್ಮ ಕ್ಷೇತ್ರದಲ್ಲಿರುವವರಿಗೆ ಏನಾದರೂ ಸಹಾಯ ಮಾಡಬೇಕು ಎಂಬ ಉದ್ದೇಶದಿಂದ ನೀಡುತ್ತಿರುವುದಾಗಿ ಒತ್ತಾಯಿಸಿದ. ಅನಿವಾರ್ಯವಾಗಿ ಅವನ ಕೋರಿಕೆಗೆ ಒಪ್ಪಿಕೊಳ್ಳಬೇಕಾಯಿತು. ಪಾರ್ಸೆಲ್‌ ಬಂದ ಬಳಿಕ ಅದನ್ನು ಪಡೆಯದಿದ್ದರೆ ಕಾನೂನು ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಬೆದರಿಸಿದ. ವಂಚನೆಯ ಸುಳಿವು ಅರಿತ ನಾನು ಬೇರೆಯವರು ಈ ರೀತಿ ತೊಂದರೆಗೆ ಒಳಗಾಗಬಾರದು ಎಂಬ ಉದ್ದೇಶದಿಂದ ದೂರು ನೀಡಿದ್ದೇನೆ. ಪ್ರಕರಣದ ಬಗ್ಗೆ ಸೈಬರ್‌ ಪೊಲೀಸರು ತನಿಖೆ ನಡೆಸುತ್ತಿದ್ದಾರೆ’ ಎಂದಿದ್ದಾರೆ.

ಈ ನಡುವೆ ಆರೋಪಿ ಜಾನ್‌ ಹೆನ್ರಿ ಎಂಬಾತ ತೇಜಸ್ವಿನಿ ಅವರಿಗೆ ಮತ್ತೆ ಸಂದೇಶ ಕಳುಹಿಸಿದ್ದಾನೆ. ‘ನನ್ನ ಮೊಬೈಲ್‌ ಕಳೆದುಹೋಗಿತ್ತು. ಹೀಗಾಗಿ ನಿಮ್ಮನ್ನು ಸಂಪರ್ಕಿಸಲಾಗಲಿಲ್ಲ’ ಎಂದು ಬರೆದಿದ್ದಾನೆ. ಮತ್ತೆ ಕರೆ ಮಾಡಿದ್ದಾನೆ. ಅವನ ಕರೆ ಸ್ವೀಕರಿಸಲಿಲ್ಲ ಎಂದು ತೇಜಸ್ವಿನಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry