ಭಗವದ್ಗೀತೆಯಲ್ಲಿ ಕ್ಯಾನ್ಸರ್‌ ಗೆಡ್ಡೆ–ದನಿಗೂಡಿಸಿದ ಹಂಸಲೇಖ

7
ಎಸ್‌.ಕೆ. ಭಗವಾನ್‌, ವೇಣು, ರೇಖಾ ಕಾಖಂಡಕಿ, ರಾಮಕೃಷ್ಣಗೆ ಪ್ರಶಸ್ತಿ

ಭಗವದ್ಗೀತೆಯಲ್ಲಿ ಕ್ಯಾನ್ಸರ್‌ ಗೆಡ್ಡೆ–ದನಿಗೂಡಿಸಿದ ಹಂಸಲೇಖ

Published:
Updated:

ಬೆಂಗಳೂರು: ‘ಭಗವದ್ಗೀತೆಯಲ್ಲಿ ಕೆಲವು ಕ್ಯಾನ್ಸರ್‌ ಗೆಡ್ಡೆಗಳು ಇವೆ ಎಂದು ಸಾಹಿತಿ ದೇವನೂರು ಮಹಾದೇವ ಹೇಳಿದ್ದರಲ್ಲಿ ತಪ್ಪೇನಿದೆ’ ಎಂದು ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಪ್ರಶ್ನಿಸಿದ್ದಾರೆ.

ಬರಗೂರು ಪ್ರತಿಷ್ಠಾನ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜಿ.ರಾಮಕೃಷ್ಣ (ವಿಚಾರ–ವಿಮರ್ಶೆ) ಹಾಗೂ ರೇಖಾ ಕಾಖಂಡಕಿ (ಕಾದಂಬರಿಗಾರ್ತಿ) ಅವರಿಗೆ ‘ರಾಜಲಕ್ಷ್ಮಿ ಬರಗೂರು ಪುಸ್ತಕ ಪ್ರಶಸ್ತಿ’ ಹಾಗೂ ಸಿನಿಮಾ ಕ್ಷೇತ್ರದ ಸಾಧನೆಗೆ ಎಸ್‌.ಕೆ.ಭಗವಾನ್‌, ಸಾಹಿತ್ಯ ಕ್ಷೇತ್ರದ ಕೊಡುಗೆ ಗುರುತಿಸಿ ಬಿ.ಎಲ್‌.ವೇಣು ಅವರಿಗೆ ‘ಬರಗೂರು’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಹಂಸಲೇಖ, ‘ಎಲ್ಲವನ್ನೂ ವಿಮರ್ಶಿಸಿ ತೂಗುವ ಸ್ವಾತಂತ್ರ್ಯ ನಮಗಿದೆ’ ಎಂದು ಪ್ರತಿಪಾದಿಸಿದರು.

ಪ್ರಶಸ್ತಿ ಪ್ರದಾನ ಮಾಡಿದ ಹಿರಿಯ ನಟಿ ಬಿ. ಸರೋಜಾದೇವಿ, ‘ನಾನು ಪತಿಯನ್ನು ಕಳೆದುಕೊಂಡಾಗ ತುಂಬಾ ಸಂಕಷ್ಟದಲ್ಲಿದ್ದೆ. ಆದರೆ, ಮಕ್ಕಳಿಗಾಗಿ ಧೈರ್ಯ ತಂದುಕೊಂಡೆ. ಬರಗೂರು ಅವರು ರಾಜಲಕ್ಷ್ಮಿ ಅವರನ್ನು ದೈಹಿಕವಾಗಿ ಕಳೆದುಕೊಂಡಿದ್ದಾರೆ. ಈ ನೋವಿನಲ್ಲಿ ಅವರು ತಮ್ಮ ಸಾಹಿತ್ಯ ಸೇವೆಯಿಂದ ವಿಮುಖರಾಗದೆ ಇನ್ನಷ್ಟು ಕೆಲಸ ಮಾಡಬೇಕು’ ಎಂದು ಆಶಿಸಿದರು.

‘ನಾನು ಸಿನಿಮಾ

ರಂಗದಲ್ಲಿ ಸಾಕಷ್ಟು ಹೆಸರು ಮಾಡಿದೆ. ಆದರೆ ಭಗವಾನ್‌ ಅವರು ನನಗೆ ಒಂದೂ ಅವಕಾಶ ನೀಡಲಿಲ್ಲ. ನನಗೆ ಈಗಲೂ ಅವರ ಮೇಲೆ ಕೋಪ ಇದೆ. ಒಂದು ಸಿನಿಮಾದಲ್ಲಿ ಅಜ್ಜಿಯ ಪಾತ್ರ ಕೊಟ್ಟಿದ್ದರು. ಕೂದಲಿಗೆ ಬಿಳಿ ಬಣ್ಣ ಹಚ್ಚಿಕೊಳ್ಳಲು ಹೇಳಿದರು’ ಎಂದು ಅಲ್ಲೇ ಕೂತಿದ್ದ ಭಗವಾನ್ ಅವರನ್ನು ನೋಡಿ ನಸುನಕ್ಕರು.

ಸಾಹಿತಿ ಬಿ.ಎಲ್‌.ವೇಣು; ‘ಇಂದಿನ ದಿನಗಳಲ್ಲಿ ಕಾದಂಬರಿ ಆಧಾರಿತ ಚಿತ್ರಗಳು ಕಡಿಮೆಯಾಗಿವೆ. ನಾನು ಆರಂಭದಲ್ಲಿ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಾಗ ಬಹುತೇಕರು ನನ್ನ ವಿರುದ್ಧ ಮಾತನಾಡಿದ್ದರು. ಇವನು ಸಿನಿಮಾ ಸಾಹಿತಿ ಎಂದು ಉಡಾಫೆಯಾಗಿ ಮೂದಲಿಸಿದ್ದರು. ಈಗ ಅವರೇ ಈ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಹಾತೊರೆಯುತ್ತಿದ್ದಾರೆ’ ಎಂದು ತಮ್ಮ ವೃತ್ತಿಯ ಆರಂಭದ ದಿನಗಳನ್ನು ನೆನೆದರು.

ಎಸ್‌.ಕೆ.ಭಗವಾನ್‌ ಮಾತನಾಡಿ, ‘ಒಂದು ಕಾದಂಬರಿ ಆಧಾರಿತ ಸಿನಿಮಾ ತೆಗೆಯಬೇಕಾದರೆ 10ಕ್ಕಿಂತ ಹೆಚ್ಚು ಪುಸ್ತಕಗಳನ್ನು ಓದಬೇಕಾಗುತ್ತಿತ್ತು. ಇದು ನನ್ನ ಜ್ಞಾನವನ್ನು ವಿಸ್ತರಿಸಿತು. ಆದರೆ ಇಂದಿನ ದಿನಗಳ ನಿರ್ದೇಶಕರು ಓದುವುದನ್ನೇ ಮರೆತಿದ್ದಾರೆ’ ಎಂದು ವಿಷಾದಿಸಿದರು.

‘ಭಗವಾನ್‌, ನನಗೆ ಅವಕಾಶ ಕೊಡಲಿಲ್ಲ’ ಎಂಬ ಸರೋಜಾದೇವಿ ಆಕ್ಷೇಪಕ್ಕೆ ಪ್ರತಿಯುತ್ತರ ನೀಡಿದ ಅವರು, ‘ಅಂದಿನ ದಿನಗಳಲ್ಲಿ ಸರೋಜಾ ದೇವಿ ತುಂಬಾ ದೊಡ್ಡ ನಟಿ ಎನಿಸಿದ್ದರು. ಅವರ ಕಾಲ್‌ಶೀಟ್‌ ಸಿಗುವುದೇ ಕಷ್ಟವಿತ್ತು. ನಂತರ ಒಂದು ಸಿನಿಮಾದಲ್ಲಿ ಅವರಿಗೆ ಅಜ್ಜಿಯ ಪಾತ್ರ ಕೊಟ್ಟೆ. ಪಾತ್ರಕ್ಕೆ ಸರಿಯಾಗುವಂತೆ ಕೂದಲಿಗೆ ಬಿಳಿ ಬಣ್ಣ ಹಚ್ಚಿಕೊಳ್ಳಿ ಎಂದು ಹೇಳಿದರೆ ಅಲ್ಲಿಯೇ ಇದ್ದ ಪಾರ್ವತಮ್ಮ ರಾಜ್‌ಕುಮಾರ್‌ ಅವರನ್ನು ತೋರಿಸಿ, ನೋಡಿ ಇವರಿಗೂ ವಯಸ್ಸಾಗಿದೆ. ಇವರ ಕೂದಲೇನು ಬೆಳ್ಳಗಿದೆಯಾ, ನಾನೇಕೆ ತಲೆಗೆ ಬಿಳಿ ಬಣ್ಣ ಹಚ್ಚಿಕೊಳ್ಳಲಿ ಎಂದು ಪ್ರಶ್ನಿಸಿದ್ದರು’ ಎಂದು ಪ್ರಸಂಗವನ್ನು ಮೆಲುಕು ಹಾಕಿದರು.

ಸಾಹಿತಿ ಎಚ್‌.ಎಸ್‌.ವೆಂಕಟೇಶ ಮೂರ್ತಿ, ‘ಭಗವಾನ್‌ ಹಾಗೂ ಸರೋಜಾದೇವಿ ಅವರ ಜಗಳವನ್ನು ನೋಡಲು ಖುಷಿಯಾಗುತ್ತದೆ. ಅವರ ವಾಗ್ವಾದದಲ್ಲೂ ಒಬ್ಬರ ಮೇಲೆ ಒಬ್ಬರಿಗೆ ಇರುವ ಗೌರವ ಹಾಗೂ ಪ್ರೇಮ ಎದ್ದು ಕಾಣುತ್ತದೆ. ಇಂದಿನವರಲ್ಲಿ ನಾವು ಇದನ್ನು ನಿರೀಕ್ಷಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry