ಬಿಹಾರಕ್ಕೆ ಪೊಲೀಸರ ತಂಡ

7
ಉದ್ಯಮಿಗೆ ಗುಂಡೇಟು ಪ್ರಕರಣ

ಬಿಹಾರಕ್ಕೆ ಪೊಲೀಸರ ತಂಡ

Published:
Updated:

ಬೆಂಗಳೂರು: ಕೋರಮಂಗಲದಲ್ಲಿ ಉದ್ಯಮಿ ಕನ್ಹಯ್ಯಲಾಲ್ ಅಗರ್ವಾಲ್ (54) ಮೇಲೆ ಗುಂಡು ಹಾರಿಸಿ ಪರಾರಿಯಾದ ಆರೋಪಿಗಳ ಪತ್ತೆಗಾಗಿ ಪೊಲೀಸರ ವಿಶೇಷ ತಂಡ ಬಿಹಾರಕ್ಕೆ ತೆರಳಿದೆ.

‘ಫಾರ್ಮ್ ಇಂಡಿಯಾ ಇಂಪೆಕ್ಸ್’ ಕಂಪನಿ ನಿರ್ದೇಶಕರಾದ ಕನ್ಹಯ್ಯಲಾಲ್, ರಹೇಜಾ ಆರ್ಕೇಡ್‌ನಲ್ಲಿ ಕಚೇರಿ ಹೊಂದಿದ್ದಾರೆ. ಆ ಕಚೇರಿಗೆ ನುಗ್ಗಿದ್ದ ನಾಲ್ವರು ಅವರ ಮೇಲೆ ಗುಂಡು ಹಾರಿಸಿದ್ದರು. ತೀವ್ರ ಗಾಯಗೊಂಡ ಸದ್ಯ ಅವರು ಸೇಂಟ್ ಜಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದ್ದು, ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.

‘ರಾಜ್ಯ ಹಾಗೂ ಹೊರರಾಜ್ಯಗಳ ರೈತರಿಂದ ಮೆಕ್ಕೆಜೋಳ ಖರೀದಿಸುತ್ತಿದ್ದ ಕನ್ಹಯ್ಯಲಾಲ್, ವಿದೇಶಕ್ಕೆ ರಫ್ತು ಮಾಡುತ್ತಾರೆ. ಬಿಹಾರದ ರೈತರಿಂದ ಮೆಕ್ಕೆಜೋಳ ಖರೀದಿಸುವ ವಿಷಯವಾಗಿ, ಸ್ಥಳೀಯ ಏಜೆಂಟ್‌ ರಾಜೇಂದ್ರ ಅಗರ್ವಾಲ್‌ ಜತೆ ಗಲಾಟೆ ನಡೆದಿತ್ತು. ತಮ್ಮೂರಿಗೆ ಬಂದು ಜೋಳ ಖರೀದಿ ಮಾಡದಂತೆ ರಾಜೇಂದ್ರ ಬೆದರಿಕೆ ಹಾಕಿದ್ದ. ಅದಾದ 15 ದಿನಗಳಲ್ಲೇ ಈ ಘಟನೆ ನಡೆದಿದ್ದು, ರಾಜೇಂದ್ರ ಮೇಲೆಯೇ ಅನುಮಾನವಿದೆ’ ಎಂದು ತನಿಖಾಧಿಕಾರಿಗಳು ಹೇಳಿದರು.

‘ಜೂನ್ 2ರಂದು ಮಧ್ಯಾಹ್ನ ಕಚೇರಿಗೆ ಹೋಗಿ ಕೃತ್ಯ ಎಸಗಿದ್ದ ನಾಲ್ವರು ದುಷ್ಕರ್ಮಿಗಳನ್ನು ಕೆಲಸಗಾರರು ನೋಡಿದ್ದಾರೆ. ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಸಂಗ್ರಹಿಸಿದ್ದು, ಅದರಲ್ಲೂ ಆರೋಪಿಗಳ ಮುಖಚಹರೆ ಸೆರೆಯಾಗಿದೆ. ಅವರೆಲ್ಲರೂ ಬಿಹಾರದವರು ಎಂಬುದು ಗೊತ್ತಾಗಿದೆ. ಜತೆಗೆ, ರಾಜೇಂದ್ರ ಸಹ ಬಿಹಾರದಲ್ಲಿರುವ ಮಾಹಿತಿ ಇದೆ’ ಎಂದು ಪೊಲೀಸರು ಹೇಳಿದರು.

‘ರಹೇಜಾ ಆರ್ಕೇಡ್‌ ಕಟ್ಟಡಕ್ಕೆ ಬಂದಿದ್ದ ದುಷ್ಕರ್ಮಿಗಳು, ಲಿಫ್ಟ್‌ನಲ್ಲೇ ಕಚೇರಿಗೆ ಹೋಗಿದ್ದರು. ಗಾಜಿನ ಬಾಗಿಲುಗಳನ್ನು ಒಡೆದು ಕನ್ಹಯ್ಯಲಾಲ್‌ ಅವರ ಕೊಠಡಿಗೆ ನುಗ್ಗಿ ನಾಲ್ಕು ಗುಂಡು ಹಾರಿಸಿದ್ದರು. ಅದರಲ್ಲಿ ಒಂದು ಮಾತ್ರ ಉದ್ಯಮಿಗೆ ಬಿದಿದ್ದು, ಉಳಿದವು ಗುರಿ ತಪ್ಪಿವೆ. ಕೃತ್ಯದ ಬಳಿಕ ಆರೋಪಿಗಳು ಲಿಫ್ಟ್‌ನಲ್ಲೇ ಹೋಗಿದ್ದರು. ಸ್ಥಳದಲ್ಲಿದ್ದ ಕೆಲಸಗಾರರು, ಅವರನ್ನು ಹಿಡಿಯುವ ಯತ್ನ ಮಾಡಿಲ್ಲ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry