ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಲ್‌ಬಾಗ್‌ನಲ್ಲಿ ತ್ಯಾಜ್ಯಕ್ಕೆ ಬೆಂಕಿ– ಆಕ್ರೋಶ

Last Updated 19 ಜನವರಿ 2018, 19:21 IST
ಅಕ್ಷರ ಗಾತ್ರ

ಬೆಂಗಳೂರು: ಲಾಲ್‌ಬಾಗ್‌ನಲ್ಲಿ ನಡೆದ ಸುಗ್ಗಿ–ಹುಗ್ಗಿ ಕಾರ್ಯಕ್ರಮದಿಂದ ಉಂಟಾದ ತ್ಯಾಜ್ಯವನ್ನು ಸರಿಯಾದ ರೀತಿ ವಿಲೇವಾರಿ ಮಾಡದೇ ಅದನ್ನು ಉದ್ಯಾನದಲ್ಲಿಯೇ (ಬಂಡೆ ಬಳಿ) ಬೆಂಕಿ ಹಚ್ಚಿ ಸುಡಲಾಗಿದೆ.

3000 ದಶಲಕ್ಷ ವರ್ಷದಷ್ಟು ಪುರಾತನ ಹಾಗೂ ಐತಿಹಾಸಿಕವಾದ ಈ ಬಂಡೆಯನ್ನು ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ 'ರಾಷ್ಟ್ರೀಯ ಭೌಗೋಳಿಕ ಸ್ಮಾರಕ' ಎಂದು ಗುರುತಿಸಿದೆ. ಬೆಂಗಳೂರು ನಿರ್ಮಾಪಕ ಕೆಂಪೇಗೌಡ ಗೋಪುರವೂ ಇಲ್ಲಿದೆ. ಇಂತಹ ಐತಿಹಾಸಿಕ ಬಂಡೆ ಪಕ್ಕದಲ್ಲಿ ತ್ಯಾಜ್ಯ ಸುರಿದು ಬೆಂಕಿ ಹಾಕಿರುವ ಬಗ್ಗೆ ನಿತ್ಯ ವಿಹಾರಕ್ಕೆ ಬರುವವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಉದ್ಯಾನದಲ್ಲಿ ಬೆಂಕಿ ಹಾಕಬಾರದು ಎಂದು ನಿಯಮವಿದ್ದರೂ ಅದು ಪಾಲನೆಯಾಗುತ್ತಿಲ್ಲ. ತ್ಯಾಜ್ಯಕ್ಕೆ ಬೆಂಕಿ ಹಾಕಿರುವುದು ಇದೇ ಮೊದಲಲ್ಲ. ಅನೇಕ ಬಾರಿ ಈ ರೀತಿ ಬೇಜವಾಬ್ದಾರಿಯುತ ಕೆಲಸಗಳು ನಡೆಯುತ್ತಲೇ ಇವೆ’ ಎಂದು ಶಿವಾನಂದ್‌ ದೂರಿದರು.

ಕಟ್ಟುನಿಟ್ಟಿನ ನಿರ್ದೇಶನವಿಲ್ಲ: ಸುಗ್ಗಿ–ಹುಗ್ಗಿ ಕಾರ್ಯಕ್ರಮವನ್ನು ಈ ಬಾರಿ ಲಾಲ್‌ಬಾಗ್‌ನ ಬಂಡೆ ಪ್ರದೇಶ ಸುತ್ತಮುತ್ತಲು ದೊಡ್ಡಮಟ್ಟದಲ್ಲಿ ಆಯೋಜಿಸಲಾಗಿತ್ತು. ಸಾಕಷ್ಟು ಆಹಾರ ಮಳಿಗೆಗಳು ಇಲ್ಲಿದ್ದವು. ಅಂದು ಉದ್ಯಾನಕ್ಕೆ ಸುಮಾರು 1 ಲಕ್ಷ ಮಂದಿ ಭೇಟಿ ನೀಡಿದ್ದರು. ತೋಟಗಾರಿಕೆ ಇಲಾಖೆ ಆಯೋಜಕರಿಗೆ ಕಟ್ಟುನಿಟ್ಟಿನ ಆದೇಶ ನೀಡದ ಪರಿಣಾಮ, ಕಾರ್ಯಕ್ರಮದ ಭಾಗವಾಗಿ ಉತ್ಪತ್ತಿಯಾಗಿದ್ದ ತ್ಯಾಜ್ಯವನ್ನು (ರಾಶಿ ಅಡಿಕೆ ಹಾಳೆಗಳು, ಪ್ಲಾಸ್ಟಿಕ್‌ ಬಾಟಲಿಗಳು, ಐಸ್‌ಕ್ರೀಂ ಕಪ್‌ಗಳು) ಬಂಡೆ ಬಳಿಯೇ ಸುರಿಯಲಾಗಿತ್ತು ಎಂದು ಲಾಲ್‌ಬಾಗ್‌ ನಡಿಗೆದಾರರು ಹೇಳಿದ್ದಾರೆ.

ಪಕ್ಷಿಗಳಿಗೆ ಆಪತ್ತು: ಲಾಲ್‌ಬಾಗ್‌ ಸಸ್ಯೋದ್ಯಾನದಲ್ಲಿ ಏಷ್ಯನ್ ಪ್ಯಾರಡೈಸ್-ಫ್ಲೈಕ್ಯಾಚರ್, ಬ್ಲಾಕ್ ಕೈಟ್, ಆಶಿ ಡ್ರೊಂಗೊ, ಏಷ್ಯನ್ ಪಾಮ್ ಸ್ವಿಫ್ಟ್, ಬೂಟೆಡ್ ಈಗಲ್, ಬ್ರೌನ್ ಶ್ರೈಕ್, ಕಾಮನ್ ಮೈನಾ, ಗ್ರೇಟ್ ಟಿಟ್, ಗ್ರೇಟರ್ ಕೌಕ್ಯಾಲ್, ಗ್ರೇ ಹೆರನ್, ಹೌಸ್ ಕ್ರೌವ್, ಇಂಡಿಯನ್ ಪಾಂಡ್ ಹೆರನ್, ಜಂಗಲ್ ಕ್ರೌವ್, ಜಂಗಲ್ ಮೈನಾ, ರೋಸಿ ಸ್ಟರ್ಲಿಂಗ್ ಹೀಗೆ ನೂರಾರು ಬಗೆಯ ಪಕ್ಷಿ ಸಂಕುಲವಿದೆ. ಬೆಂಕಿ ಹೊಗೆಯಿಂದ ಪಕ್ಷಿಗಳಿಗೂ ತೊಂದರೆಯಾಗುತ್ತದೆ.

ಲಾಲ್‌ಬಾಗ್ ಮನರಂಜನಾ ಪಾರ್ಕ್ ಅಲ್ಲ. ಅದು  ಸಸ್ಯೋದ್ಯಾನ. ಇಂತಹ ಅತ್ಯಮೂಲ್ಯ ಸ್ಥಳದಲ್ಲಿ ಉತ್ಸವಗಳನ್ನು ನಡೆಸುವುದು ಸರಿಯಲ್ಲ
–ಚಿರಂಜೀವಿ ಸಿಂಗ್‌, ನಿವೃತ್ತ ಐಎಎಸ್ ಅಧಿಕಾರಿ

ನಮ್ಮ ಗಮನಕ್ಕೆ ಬಾರದೆ ಈ ರೀತಿಯಾಗಿದೆ. ಮುಂದೆ ಇದು ಮರುಕಳಿಸದಂತೆ ನೋಡಿಕೊಳ್ಳುತ್ತೇವೆ
ಎಂ.ಚಂದ್ರಶೇಖರ್‌, ಲಾಲ್‌ಬಾಗ್‌ ಉಪನಿರ್ದೇಶಕ

ಉದ್ಯಾನದಲ್ಲಿ ಹೆಚ್ಚುತ್ತಿವೆ ಮೇಳಗಳು..

‘ಲಾಲ್‌ಬಾಗ್‌ನಲ್ಲಿ ಸಸ್ಯಾಭಿವೃದ್ಧಿ ಚಟುವಟಿಕೆಗಳು ಇತ್ತೀಚೆಗೆ ಕಡಿಮೆಯಾಗಿದೆ. ಮೇಳಗಳ ಮೂಲಕ ಜನರನ್ನು ಆಕರ್ಷಿಸುತ್ತಿದ್ದಾರೆ. ಉದ್ಯಾನಕ್ಕೆ ಒಮ್ಮೆಗೆ ಹೆಚ್ಚು ಜನ ಬಂದಾಗ ಪಕ್ಷಿಗಳು ಗಲಿಬಿಲಿಗೊಳಗಾಗುತ್ತವೆ’ ಎಂದು ಪಕ್ಷಿ ತಜ್ಞ ಡಾ. ಎಂ.ಬಿ. ಕೃಷ್ಣ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT