‘ನನಗೆ ಹಣ ಮಾಡುವ ಹುಚ್ಚು ಇಲ್ಲ’

7
ಭ್ರಷ್ಟಾಚಾರ ನಿರ್ಮೂಲನೆ ಕಷ್ಟ: ಎಚ್‌.ಡಿ. ಕುಮಾರಸ್ವಾಮಿ

‘ನನಗೆ ಹಣ ಮಾಡುವ ಹುಚ್ಚು ಇಲ್ಲ’

Published:
Updated:
‘ನನಗೆ ಹಣ ಮಾಡುವ ಹುಚ್ಚು ಇಲ್ಲ’

ಬೆಂಗಳೂರ: ‘ಭ್ರಷ್ಟಾಚಾರ ಸಂಪೂರ್ಣ ನಿಮೂರ್ಲನೆ ಮಾಡಲು ಹೋದರೆ, ನನ್ನನ್ನು ಅಧಿಕಾರದಲ್ಲಿ ಮುಂದುವರಿಯಲು ಪಟ್ಟಭದ್ರರು ಬಿಡುವುದಿಲ್ಲ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಸೋಮವಾರ ನಗರದ ಗಾಂಧಿ ಭವನದಲ್ಲಿ ಮಾತನಾಡಿ, ‘ನನಗೆ ಹಣ ಮಾಡುವ ಹುಚ್ಚು ಇಲ್ಲ. ಎರಡು ಬಾರಿ ಶಸ್ತ್ರಚಿಕಿತ್ಸೆ ಆಗಿದೆ. ಎಷ್ಟು ದಿನ ಬದುಕುತ್ತೀನೊ ಗೊತ್ತಿಲ್ಲ’ ಎಂದು ಹೇಳಿದರು.

‘ಯಾವ ಇಲಾಖೆ ಹೇಗೆ ನಡೆಯುತ್ತಿದೆ. ಅಲ್ಲಿ ಹೇಗೆ ಲೂಟಿ ನಡೆಯುತ್ತಿದೆ ಎಂಬುದನ್ನು ಕಳೆದ ಒಂದು ತಿಂಗಳಿನಿಂದ ನೋಡಿದ್ದೇನೆ. ನನಗಿರುವ ಮಾನವೀಯತೆ ಅಧಿಕಾರಿಗಳಿಗೆ ಇಲ್ಲ. ಬೇರು ಬಿಟ್ಟಿರುವ ಭ್ರಷ್ಟಾಚಾರವನ್ನು ಪೂರ್ಣವಾಗಿ ಮುಕ್ತಗೊಳಿಸುವುದು ಸುಲಭವಲ್ಲ. ಅಧಿಕಾರಿ ಮತ್ತು ನೌಕರರ ವರ್ಗಾವಣೆಯಿಂದಲೇ ಭ್ರಷ್ಟಾಚಾರ ಆರಂಭವಾಗುತ್ತದೆ. ಪ್ರತಿ ವರ್ಗಾವಣೆಗೆ ₹ 5 ಲಕ್ಷದಿಂದ ₹10 ಲಕ್ಷ ನಡೆಯುತ್ತಿದೆ’ ಎಂದು ಅವರು ಹೇಳಿದರು.

ಶೃಂಗೇರಿ ಜಗದ್ಗುರುಗಳು, ಭ್ರಷ್ಟಾಚಾರ ನಿಲ್ಲಿಸಿ ಎಂದರು. ನನ್ನ ಮಟ್ಟದಲ್ಲಿ ನಿಲ್ಲಿಸುತ್ತೇನೆ. ಆದರೆ ವ್ಯಾಪಕವಾಗಿರುವ ಭ್ರಷ್ಟಾಚಾರ ತಡೆಯಲು ಕಷ್ಟ ಇದೆ ಎಂದೂ ಕುಮಾರಸ್ವಾಮಿ ಹೇಳಿದರು.

ನಾನು ಕೈಚೆಲ್ಲಿ ಕೂರುವುದಿಲ್ಲ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು.  ಪೂರ್ಣ ಬಹುಮತವಿಲ್ಲದೆ ಭ್ರಷ್ಟಾಚಾರ ನಿರ್ಮೂಲನೆ ಮಾಡುವುದು ಕಷ್ಟ. ಆಡಳಿತ ಚುರುಕುಗೊಳಿಸಲು ಎರಡು–ಮೂರು ದಿನಗಳಲ್ಲಿ ಸಭೆಯನ್ನು ಕರೆಯುವುದಾಗಿ ಅವರು ಹೇಳಿದರು.

‘ಇಲ್ಲಿಯವರೆಗೆ ಲೂಟಿ ಮಾಡಿದ್ದೀರಿ. ಇನ್ನು ಮುಂದಾದರೂ ಸರಿಯಾಗಿರಿ ಎಂದರೆ ಅಧಿಕಾರಿಗಳಿಗೆ ಅರ್ಥವಾಗುತ್ತಿಲ್ಲ.  ವೇತನ ಆಯೋಗವೂ ಶಿಫಾರಸಿ

ನಂತೆ ಕೈತುಂಬಾ ಸಂಬಳ ಸಿಗುತ್ತಿದೆ. ಕೆಳಹಂತದ ಜನರ ಬಗ್ಗೆ ಪ್ರಾಮಾಣಿಕವಾಗಿ ಯೋಚನೆ ಮಾಡಬೇಕಲ್ಲವೆ’ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ಮಾತನಾಡಿ,  ಕುಮಾರಸ್ವಾಮಿ ಅವರದು ಸ್ಥಿರವಾದ ಮನಸ್ಸು. ಎಂಥ ಅಗ್ನಿಪರ್ವತ ಸಿಡಿದರೂ ಉದ್ರೇಕರಾಗುವುದಿಲ್ಲ. ಈ ಮೊದಲು ಇದ್ದದ್ದಕ್ಕಿಂತ ಹೆಚ್ಚು ಅನುಭವ ಕುಮಾರಸ್ವಾಮಿ ಅವರಿಗಿದೆ ಎಂದು ಹೇಳಿದರು.

‘ಮಂತ್ರಿ ಸ್ಥಾನ ಅವರಪ್ಪನ ಆಸ್ತಿ ಅಲ್ಲ. ಆದ್ದರಿಂದ ಕೆಲವರು ಪ್ರತಿಭಟನೆ ಮಾಡುತ್ತಾರೆ. ಕೆಲವರು ಪ್ರಪಂಚವನ್ನೇ ಕಳೆದುಕೊಂಡವರಂತೆ ಆಡುತ್ತಿದ್ದಾರೆ. ಬೆದರಿಕೆ ಹಾಕುತ್ತಿದ್ದಾರೆ. ಇಂತಹ ನಡವಳಿಕೆ ಪ್ರಜಾಪ್ರಭುತ್ವದಲ್ಲಿ ಶೋಭೆ ತರುವುದಿಲ್ಲ. ಶಾಸನ ಸಭೆಯನ್ನು ಕೆಡಿಸುವ ಕೆಲಸ ಮಾಡಬೇಡಿ. ಸರ್ಕಾರ ಬಿದ್ದು ಹೋಗುವುದಿಲ್ಲ, ಮುಂದೆ ಸರಿ ಹೋಗುತ್ತದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಪತ್ರಕರ್ತ ಪಾಟೀಲ ಪುಟ್ಟಪ್ಪ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೊಡೇ ಪಿ.ಕೃಷ್ಣ, ಪತ್ರಕರ್ತ ಪಿ. ರಾಮಯ್ಯ, ಸ್ವಾತಂತ್ರ್ಯ ಹೋರಾಟಗಾರ್ತಿ ಚನ್ನಮ್ಮ ಹಳ್ಳೀಕೇರಿ,ಹಿರಿಯ ಕಾಂಗ್ರೆಸ್‌ ಮುಖಂಡ ಹನುಮಂತಪ್ಪ ಇದ್ದರು.

‘ಕಾಂಗ್ರೆಸ್‌ ಹಠದಿಂದ ಸಿ.ಎಂ ಆದೆ’

‘ಸಮ್ಮಿಶ್ರ ಸರ್ಕಾರ ರಚನೆ ಸಂದರ್ಭ ಮುಖ್ಯಮಂತ್ರಿ ಆಗಲು ನನಗೆ ಇಷ್ಟ ಇರಲಿಲ್ಲ. ಆದರೆ, ಕಾಂಗ್ರೆಸ್‌ನವರೇ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಬೇಕು ಅಂತಾ ಪಟ್ಟು ಹಿಡಿದರು’ ಎಂದು ಕುಮಾರಸ್ವಾಮಿ ಹೇಳಿದರು.

‘ನಾನು ಮುಖ್ಯಮಂತ್ರಿ ಆಗೊದು ಬೇಡ ಎಂದು ನಮ್ಮ ತಂದೆಯವರೂ ಹೇಳಿದ್ದರು. ಈ ಸಂಬಂಧ ಕಾಂಗ್ರೆಸ್‌ ಹೈಕಮಾಂಡ್‌ ಬಳಿ ಅವರು ಮಾತಾನಾಡಿ, ಮಗನ ಆರೋಗ್ಯ ಸರಿ ಇಲ್ಲ, ಎರಡು ಸಲ ಹೃದಯ ಶಸ್ತ್ರ ಚಿಕಿತ್ಸೆ ಆಗಿದೆ. ನಿಮ್ಮವರೇ ಮುಖ್ಯಮಂತ್ರಿ ಆಗಲಿ ಎಂದರು. ಕಾಂಗ್ರೆಸ್‌ ಒಪ್ಪಲಿಲ್ಲ’ ಎಂದು ಹೇಳಿದರು.

* ನಿಮಗೆ ಟಿ. ಆರ್. ಪಿ ಬೇಕಾಗಿರಬಹುದು. ಆದರೆ, ಸಮಾಜಕ್ಕೆ ಮತ್ತು ಸರ್ಕಾರಕ್ಕೆ ಶಾಂತಿ ಬೇಕು

–ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry