ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಓದಲು ಮಾಡಿದ್ದ ಸಾಲ ಕಟ್ಟಿದ್ದು ಕ್ರಿಕೆಟ್‌ ಹಣದಿಂದ’

Last Updated 19 ಜನವರಿ 2018, 19:28 IST
ಅಕ್ಷರ ಗಾತ್ರ

ಬೆಂಗಳೂರು: ‘ಕ್ರಿಕೆಟ್‌ ಆಡಿದರೆ ಓದಲು ಆಗುವುದಿಲ್ಲ. ಓದಿನಲ್ಲಿ ತೊಡಗಿಸಿಕೊಂಡರೆ ಕ್ರಿಕೆಟ್‌ ಆಡಲು ಆಗುವುದಿಲ್ಲ ಎನ್ನುತ್ತಾರೆ. ಆದರೆ ನಾನು ಕಾಲೇಜು ಶುಲ್ಕ ಕಟ್ಟಲು ಸಾಲ ಮಾಡಿದ್ದೆ. ಸಾಲ ತೀರಿಸಲು ನೆರವಾದದ್ದು ಕ್ರಿಕೆಟ್‌’ ಎಂದು ಕ್ರಿಕೆಟ್‌ ಆಟಗಾರ ಅನಿಲ್‌ ಕುಂಬ್ಳೆ ತಿಳಿಸಿದರು.

ನಗರದಲ್ಲಿ ಶುಕ್ರವಾರ ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜಿನ (ಯುವಿಸಿಇ) 100 ವರ್ಷಾಚರಣೆ ಹಾಗೂ 6ನೇ ವರ್ಷದ ವಿದ್ಯಾರ್ಥಿವೇತನ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನೀವು ಎಂಜಿನಿಯರಿಂಗ್‌ ಅಭ್ಯಾಸ ಮಾಡಿದ್ದೀರಾ ಎಂದು ಜನ ಕೇಳುತ್ತಾರೆ. 18 ವರ್ಷಗಳು ಪ್ರತಿದಿನ ನಾನು ಎಂಜಿನಿಯರಿಂಗ್‌ ಅಭ್ಯಾಸ ಮಾಡುತ್ತಿದ್ದೆ. ಅದರಿಂದ ಕ್ರಿಕೆಟ್‌ ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತಿದ್ದೆ’  ಎಂದರು.

‘2008ರಲ್ಲಿ ಕ್ರಿಕೆಟ್‌ನಿಂದ ನಿವೃತ್ತಿ ಪಡೆದಾಗ, ಮಾಧ್ಯಮದವರು ಇಷ್ಟು ವರ್ಷ ಚೆಂಡನ್ನು ತಿರುಗಿಸದೆ ಹೇಗೆ ಆಡಿದಿರಿ ಎಂದು ಪ್ರಶ್ನಿಸಿದರು.
ನಾನು ಚೆಂಡನ್ನು ತಿರುಗಿಸುತ್ತಿರಲಿಲ್ಲ ಎಂದು ಬ್ಯಾಟ್‌ ಮಾಡುವವರಿಗೆ ಇನ್ನೂ ಅರ್ಥ ಆಗಿಲ್ಲ ಎಂದೆ. ಚೆಂಡನ್ನು ಹೇಗೆಲ್ಲ ತಿರುಗಿಸಿದರು ಎಂದು ಕ್ರಿಕೆಟ್‌ ಕಾಮೆಂಟರಿಯಲ್ಲಿ ವರ್ಣಿಸುತ್ತಿರುತ್ತಾರೆ. ಚೆಂಡು ತಿರುಗಿಸುವುದಕ್ಕಿಂತ ವಿಕೆಟ್‌ ಪಡೆಯುವುದು ಮುಖ್ಯ’ ಎಂದಾಗ ಸಭೆಯಲ್ಲಿ ನಗೆ ಉಕ್ಕಿತು. 

‘ನಿಮ್ಮ ಬದುಕಿನ ತತ್ವ ಏನು’ ಎಂಬ ವಿದ್ಯಾರ್ಥಿನಿ ಕೀರ್ತಿ ಅವರ ಪ್ರಶ್ನೆಗೆ ಉತ್ತರಿಸಿದ ಕುಂಬ್ಳೆ, ’ನನ್ನ ಬಗ್ಗೆ ನಂಬಿಕೆ ಕಳೆದುಕೊಳ್ಳದೆ, ಕೊನೆ ಗಳಿಗೆಯವರೆಗೂ ಹೋರಾಡುವುದು. 11 ಬಾರಿ ಸೋತರೂ ಮತ್ತೆ
ಪ್ರಯತ್ನಿಸಬೇಕು. 12ನೇ ಬಾರಿ ಗೆಲುವು ಸಿಗುತ್ತದೆ. ಆತ್ಮವಿಶ್ವಾಸದಿಂದ ಮುಂದುವರಿಯಬೇಕು’ ಎಂದು ಉತ್ತರಿಸಿದರು.

ಬದ್ಧತೆಯಿಂದ ಕಲಿಯಿರಿ.ಗಮನವಿಟ್ಟು ಓದಿ, ನಿಮ್ಮ ಗಮನವನ್ನು ಬೇರೆಡೆ ಸೆಳೆಯುವ ಗ್ಯಾಜೆಟ್‌ಗಳಿಂದ ದೂರ ಇರಿ ಎಂದು ಎಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ಕಿವಿಮಾತುಹೇಳಿದರು.

ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ಮಾಜಿ ಅಥ್ಲೀಟ್‌ ಅಶ್ವಿನಿ ನಾಚಪ್ಪ, ‘ಅಪ್ಪ ಕೆಲಸ ಮಾಡುತ್ತಿದ್ದ ಕಾರ್ಖಾನೆ ಹಲವು ತಿಂಗಳ ಕಾಲ ಮುಚ್ಚಿತ್ತು. ಶಾಲೆಗೆ ಶುಲ್ಕ ಕಟ್ಟುವುದೂ ಕಷ್ಟವಾಗಿತ್ತು. ಕ್ರೀಡೆಯಲ್ಲಿ ಮುಂಚೂಣಿ ಯಲ್ಲಿದ್ದರಿಂದ 5ನೇ ತರಗತಿಯಿಂದ ಉಚಿತ ಶಿಕ್ಷಣ ದೊರೆಯಿತು. ಹೀಗಾಗಿ ವಿದ್ಯಾರ್ಥಿವೇತನದಿಂದ ಸಾಕಷ್ಟು ವಿದ್ಯಾರ್ಥಿಗಳಿಗೆ ಉಪಯೋಗವಾಗುತ್ತಿದೆ’ ಎಂದರು.

ಹೆಚ್ಚು ಅಂಕ ಪಡೆದ 229 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT