ಪತ್ನಿಯ ಕಳುಹಿಸದಿದ್ದಕ್ಕೆ ಅತ್ತೆಯ ಕತ್ತು ಕೊಯ್ದ

7

ಪತ್ನಿಯ ಕಳುಹಿಸದಿದ್ದಕ್ಕೆ ಅತ್ತೆಯ ಕತ್ತು ಕೊಯ್ದ

Published:
Updated:

ಬೆಂಗಳೂರು: ಮುನಿಸಿಕೊಂಡು ತವರು ಮನೆಯಲ್ಲಿದ್ದ ಪತ್ನಿಯನ್ನು ತನ್ನ ಜತೆ ಕಳುಹಿಸಲಿಲ್ಲವೆಂಬ ಕಾರಣಕ್ಕೆ ಪ್ರದೀಪ್‌ಲಾಲ್‌ ಎಂಬಾತ, ಅತ್ತೆ ಲಕ್ಷ್ಮಿ (36) ಎಂಬುವರ ಕತ್ತು ಕೊಯ್ದು ಕೊಲೆಗೆ ಯತ್ನಿಸಿದ್ದಾನೆ.

ಘಟನೆಯಲ್ಲಿ ಗಾಯಗೊಂಡಿರುವ ಲಕ್ಷ್ಮಿಗೆ ಎಚ್‌.ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಅವರ ಹೇಳಿಕೆ ಆಧರಿಸಿ ಎಫ್‌ಐಆರ್‌ ದಾಖಲಿಸಿಕೊಂಡಿದ್ದೇವೆ. ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಕೆಂಗೇರಿ ಪೊಲೀಸರು ತಿಳಿಸಿದರು.

ಬಿಜಿಎಸ್ ಆಸ್ಪತ್ರೆಯಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ಲಕ್ಷ್ಮಿ, ತಾಯಿ ಹಾಗೂ ಮಕ್ಕಳ ಜತೆಯಲ್ಲಿ ವಾಸವಿದ್ದಾರೆ. ಅವರು ತಮ್ಮ ಮಗಳು ಮಾಧುರಿಯನ್ನು ಸಂಬಂಧಿಯೇ ಆದ ಮೈಸೂರಿನ ಪ್ರದೀಪ್‌ಲಾಲ್‌ಗೆ ಮೂರು ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದರು. ಆತ, ಆಟೊ ಚಾಲಕ. ದಂಪತಿಗೆ ಮಗುವಿದೆ.

ಮದುವೆ ಬಳಿಕ ಪತ್ನಿಯೊಂದಿಗೆ ಗಲಾಟೆ ಮಾಡುತ್ತಿದ್ದ ಆರೋಪಿ, ಕಿರುಕುಳ ನೀಡುತ್ತಿದ್ದ. ಬೇಸತ್ತ ಮಾಧುರಿ, ತವರು ಮನೆಗೆ ಬಂದು ಉಳಿದುಕೊಂಡಿದ್ದರು. ಬಳಿಕ, ಆರೋಪಿಯೇ ಪತ್ನಿಯನ್ನು ಮಾತನಾಡಿಸಲು ಆಗಾಗ ಬೆಂಗಳೂರಿಗೆ ಬಂದು ಹೋಗುತ್ತಿದ್ದ ಎಂದು ಪೊಲೀಸರು ಹೇಳಿದರು.

ಜೂನ್ 9ರಂದು ಸಂಜೆ 5.30 ಗಂಟೆ ಸುಮಾರಿಗೆ ಮನೆಗೆ ಹೋಗಿದ್ದ ಆರೋಪಿ, ಬಾಗಿಲು ಬಡಿದಿದ್ದ. ನಂತರ ಲಕ್ಷ್ಮಿಯನ್ನು ಹಿಡಿದುಕೊಂಡು ಬ್ಲೇಡ್‌ನಿಂದ ಕತ್ತು ಕೊಯ್ದಿದ್ದ. ಅವರ ಎಡಗೈ ಹಾಗೂ ಕಣ್ಣಿಗೂ ಬ್ಲೇಡ್‌ನಿಂದ ಕೊಯ್ದು ಗಾಯ ಮಾಡಿದ್ದ. ಲಕ್ಷ್ಮಿಯ ಚೀರಾಟ ಕೇಳಿ ಸ್ಥಳೀಯರು ಸಹಾಯಕ್ಕೆ ಬರುವಷ್ಟರಲ್ಲೇ ಆರೋಪಿ ಓಡಿಹೋಗಿದ್ದ ಎಂದರು.

ಆಟೊದಲ್ಲೇ ಲಕ್ಷ್ಮಿಯವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಪ್ರಕರಣ ದಾಖಲಾದ ದಿನವೇ ಆರೋಪಿಯನ್ನು ಬಂಧಿಸಲಾಗಿದೆ. ‘ಪತ್ನಿಯನ್ನು ತನ್ನೊಂದಿಗೆ ಕಳುಹಿಸಲು ಅತ್ತೆ ಹಿಂದೇಟು ಹಾಕುತ್ತಿದ್ದಳು. ಹೀಗಾಗಿ, ಈ ಕೃತ್ಯ ಎಸಗಿದೆ’ ಎಂದು ಆರೋಪಿ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry