ಮಹಿಳಾ ಕಾನ್‌ಸ್ಟೆಬಲ್ ಮೇಲೆ ಅತ್ಯಾಚಾರ; ಆರೋಪಿಗಾಗಿ ಶೋಧ

7

ಮಹಿಳಾ ಕಾನ್‌ಸ್ಟೆಬಲ್ ಮೇಲೆ ಅತ್ಯಾಚಾರ; ಆರೋಪಿಗಾಗಿ ಶೋಧ

Published:
Updated:

ಬೆಂಗಳೂರು: ನಗರದ ಠಾಣೆಯೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಕಾನ್‌ಸ್ಟೆಬಲ್‌ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಅಮೀನ್‌ಸಾಬ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಾಗಿ ಉಪ್ಪಾರಪೇಟೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.

‘ಕೆಲ ವರ್ಷಗಳ ಹಿಂದೆ ಪರಿಚಯವಾಗಿದ್ದ ಅಮೀನ್‌ಸಾಬ್‌, ಮದುವೆ ಆಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದಾನೆ. ಅದನ್ನು ಪ್ರಶ್ನಿಸಿದ್ದಕ್ಕೆ ನನ್ನ ಜಾತಿಯನ್ನು ನಿಂದಿಸಿ ಬೈದಿದ್ದಾನೆ’ ಎಂದು ಕಾನ್‌ಸ್ಟೆಬಲ್‌ ದೂರು ನೀಡಿದ್ದರು. ಆರೋಪಿ ಹಾಗೂ ಆತನ ಕುಟುಂಬದವರ ವಿರುದ್ಧ ‘ದಲಿತರ ಮೇಲಿನ ದೌರ್ಜನ್ಯ ತಡೆ ಮತ್ತು ಪರಿಹಾರ ಕಾಯ್ದೆ’ ಅಡಿ, ಅತ್ಯಾಚಾರ ಮತ್ತು ವಂಚನೆ ಪ್ರಕರಣ ದಾಖಲಿಸಿಕೊಂಡಿದ್ದೇವೆ’ ಎಂದು ಪೊಲೀಸರು ತಿಳಿಸಿದರು.

ಸಂತ್ರಸ್ತೆಯು ಪಿಎಸ್‌ಐ ಹಾಗೂ ಕೆಎಎಸ್ ತರಬೇತಿಗಾಗಿ 2015ರ ನವೆಂಬರ್ 3ರಂದು ವಿಜಯಪುರಕ್ಕೆ ಹೋಗಿದ್ದರು. ಅಲ್ಲಿಯೇ  ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಅಮೀನ್‌ ಸಾಬ್‌ನ ಪರಿಚಯವಾಗಿತ್ತು. ಬಳಿಕ, ಅವರಿಬ್ಬರು ಪ್ರೀತಿಸಲಾರಂಭಿಸಿದ್ದರು.  ಕೆಲ ತಿಂಗಳ ನಂತರ, ಸಂತ್ರಸ್ತೆಯು ತರಬೇತಿಗಾಗಿ ವಾಪಸ್‌ ಬೆಂಗಳೂರಿಗೆ ಬಂದಿದ್ದರು. ಅವರ ಜತೆಯೇ ಬಂದಿದ್ದ ಆರೋಪಿ, ಸಂತ್ರಸ್ತೆಗೆ ಪೇಯಿಂಗ್‌ ಗೆಸ್ಟ್‌ ಕಟ್ಟಡ ಹುಡುಕಿಕೊಟ್ಟಿದ್ದ. ಅದಕ್ಕಾಗಿ ಸಂತ್ರಸ್ತೆಯ ತಾಯಿಯಿಂದ ₹20 ಸಾವಿರ ಪಡೆದುಕೊಂಡಿದ್ದ ಎಂದರು.

2016ರಲ್ಲಿ ಸಂತ್ರಸ್ತೆಯ ಸಂಬಂಧಿಕರ ಮನೆಗೆ ಹೋಗಿದ್ದ ಆರೋಪಿ, ಮನೆಯಲ್ಲಿ ಯಾರೂ ಇಲ್ಲದ ವೇಳೆ ಲೈಂಗಿಕ ಸಂಪರ್ಕಕ್ಕೆ ಒತ್ತಾಯಿಸಿದ್ದ. ಅದಕ್ಕೆ ಒಪ್ಪದಿದ್ದಾಗ ಸಂತ್ರಸ್ತೆ ಮೇಲೆ ಹಲ್ಲೆ ಮಾಡಿದ್ದ. 2016ರ ಡಿಸೆಂಬರ್‌ 19ರಂದು ಬೆಂಗಳೂರಿಗೆ ಬಂದಿದ್ದ ಆರೋಪಿ, ಸಂತ್ರಸ್ತೆಯನ್ನು ವಸತಿಗೃಹವೊಂದಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದ ಎಂದರು.

2017ರ ಜೂನ್‌ 22ರಂದು ಬೇರೊಂದು ವಸತಿಗೃಹಕ್ಕೆ ಕರೆದೊಯ್ದು ಎರಡನೇ ಬಾರಿ ಅತ್ಯಾಚಾರ ಮಾಡಿದ್ದ. ಸಂತ್ರಸ್ತೆಯಿಂದಲೇ ₹9 ಸಾವಿರ ಪಡೆದುಕೊಂಡು ಊರಿಗೆ ವಾಪಸ್ ಹೋಗಿದ್ದ. ಅಲ್ಲಿಂದಲೇ ಸಂತ್ರಸ್ತೆಗೆ ಕರೆ ಮಾಡಿದ್ದ ಆರೋಪಿ, ‘ಕೀಳು ಜಾತಿಯವಳು ನೀನು. ನಿನ್ನನ್ನು ಮದುವೆ ಆಗೊಲ್ಲ’ ಎಂದಿದ್ದ. ಆತನ ಕುಟುಂಬದವರು ಸಂತ್ರಸ್ತೆಗೆ ಬೆದರಿಕೆ ಹಾಕಿದ್ದರು ಎಂದು ಪೊಲೀಸರು ಹೇಳಿದರು.

ಅಶ್ಲೀಲ ಚಿತ್ರ ರವಾನೆ: ವಾಟ್ಸ್‌ಆ್ಯಪ್‌ನಲ್ಲಿ ಸಂತ್ರಸ್ತೆ ಜತೆ ಚಾಟ್ ಮಾಡುತ್ತಿದ್ದ ಆರೋಪಿ, ಅಶ್ಲೀಲ ಚಿತ್ರಗಳನ್ನು ಕಳುಹಿಸುತ್ತಿದ್ದ. ಅದೇ ರೀತಿಯಲ್ಲೇ ಅಂಗಾಂಗ ತೋರಿಸುವಂತೆ ಸಂತ್ರಸ್ತೆಯನ್ನು ಒತ್ತಾಯಿಸುತ್ತಿದ್ದ ಎಂದು ಪೊಲೀಸರು ಹೇಳಿದರು.

‘ಆರೋಪಿ ಹಾಗೂ ಅವನ ಕುಟುಂಬದವರು ತಲೆಮರೆಸಿಕೊಂಡಿದ್ದಾರೆ. ಹೊರ ರಾಜ್ಯಕ್ಕೆ ಹೋಗಿರುವ ಮಾಹಿತಿ ಇದ್ದು, ಅವರನ್ನು ಪತ್ತೆ ಹಚ್ಚುತ್ತಿದ್ದೇವೆ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry