ಕೆಪಿಸಿಸಿ ಚುಕ್ಕಾಣಿಗಾಗಿ ಪೈಪೋಟಿ

7
ನಾನೂ ಹಿರಿಯವ: ದಿನೇಶ್‌ ಗುಂಡೂರಾವ್‌ ತಿರುಗೇಟು

ಕೆಪಿಸಿಸಿ ಚುಕ್ಕಾಣಿಗಾಗಿ ಪೈಪೋಟಿ

Published:
Updated:
ಕೆಪಿಸಿಸಿ ಚುಕ್ಕಾಣಿಗಾಗಿ ಪೈಪೋಟಿ

ಬೆಂಗಳೂರು: ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಗಾದಿಗೆ ಪಕ್ಷದ ಕೆಲವು ಹಿರಿಯ ನಾಯಕರು ತೆರೆಮರೆಯಲ್ಲಿ ಲಾಬಿ ಆರಂಭಿಸಿರುವ ಬೆನ್ನಲ್ಲೇ, ‘ನಾನೂ ಪ್ರಬಲ ಆಕಾಂಕ್ಷಿ’ ಎಂಬ ಸಂದೇಶವನ್ನು ದಿನೇಶ್ ಗುಂಡೂರಾವ್ ರವಾನಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳ ಜೊತೆ ಮಂಗಳವಾರ ಮಾತನಾಡಿದ ಅವರು, ‘ಐದು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿರುವ ನಾನು ಕೂಡಾ ಪಕ್ಷದಲ್ಲಿ ಹಿರಿಯನೇ. ಅಲ್ಲದೆ, ಕಾರ್ಯಾಧ್ಯಕ್ಷನಾಗಿಯೂ ಕೆಲಸ ಮಾಡುತ್ತಿದ್ದೇನೆ. ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರೂ ಖಂಡಿತವಾಗಿಯೂ ನಿಭಾಯಿಸಿದ್ದೇನೆ. ಹಿಂದೆಯೂ ನಿಭಾಯಿಸಿದ್ದೇನೆ’ ಎಂದರು.

‘ಕೆಪಿಸಿಸಿ ಅಧ್ಯಕ್ಷರಾಗಿರುವ ಜಿ. ಪರಮೇಶ್ವರ ಉಪ ಮುಖ್ಯಮಂತ್ರಿ ಸ್ಥಾನದ ಜೊತೆಗೆ, ಎರಡು ಪ್ರಮುಖ ಖಾತೆಗಳನ್ನು ವಹಿಸಿಕೊಂಡಿದ್ದಾರೆ. ಹೀಗಾಗಿ, ಅಧ್ಯಕ್ಷರ ಬದಲಾವಣೆ ನಿಶ್ಚಿತವಾಗಿದ್ದು, ಹೊಸಬರಿಗೆ ಅವಕಾಶ ಸಿಗಲಿದೆ’ ಎಂದೂ ಹೇಳಿದರು.

‌‘ಕೆಪಿಸಿಸಿ ಅಧ್ಯಕ್ಷರು ಯಾರಾಗಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸಲಿದೆ’ ಎಂದು ದಿನೇಶ್‌ ಸ್ಪಷ್ಟಪಡಿಸಿದರು.

‘ನನ್ನ ಬಗ್ಗೆ ಪಕ್ಷದಲ್ಲಿ ಎಲ್ಲರಿಗೂ ಗೊತ್ತಿದೆ. ನನಗೆ ಅಧ್ಯಕ್ಷ ಸ್ಥಾನ ನೀಡಿದರೆ ಪಕ್ಷದ ಇತರ ನಾಯಕರು ಸಹಕಾರ ನೀಡುವುದಿಲ್ಲ ಎಂಬ ಆತಂಕ ಇಲ್ಲ’ ಎಂದರು.

‘ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಹೀಗಾಗಿ, ಪಕ್ಷವನ್ನು ಬಲಿಷ್ಠಗೊಳಿಸಬೇಕಿದೆ. ಕೆಲವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪ್ರಯತ್ನ ನಡೆಸುತ್ತಿರಬಹುದು. ಅದು ಅವರವರ ಪ್ರಯತ್ನ. ಅದು ತಪ್ಪು ಎಂದು ನಾನು ಹೇಳುವುದಿಲ್ಲ’ ಎಂದೂ ಹೇಳಿದರು.

ಇತ್ತೀಚಿಗೆ ನಡೆದ ಪಕ್ಷದ ಸಂಸದರ ಸಭೆಯಲ್ಲಿ ಹಿರಿಯರು ಹಾಗೂ ಅನುಭವಿಗಳನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನೇಮಿಸಬೇಕೆಂಬ ಒತ್ತಾಯ ಕೇಳಿಬಂದಿತ್ತು. ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ದಿನೇಶ್‍ ಗುಂಡೂರಾವ್‍ ಪರ ಇದ್ದಾರೆ ಎನ್ನಲಾಗಿದೆ. ಆದರೆ, ಪರಮೇಶ್ವರ, ಡಿ.ಕೆ.ಶಿವಕುಮಾರ್ ಹಿರಿಯರನ್ನು ನೇಮಿಸುವಂತೆ ಒತ್ತಡ ಹೇರುತ್ತಿದೆ ಎಂದೂ ಹೇಳಲಾಗಿದೆ. ಈ ಮಧ್ಯೆ, ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಪಟ್ಟಿಯಲ್ಲಿ ಸಂಸದರಾದ ಕೆ.ಎಚ್. ಮುನಿಯಪ್ಪ, ಬಿ.ಕೆ. ಹರಿಪ್ರಸಾದ್, ಎಸ್.ಆರ್. ಪಾಟೀಲ ಹೆಸರೂ ಕಾಣಿಸಿಕೊಂಡಿದೆ.

ಸತೀಶ ಜಾರಕಿಹೊಳಿ ರಾಜೀನಾಮೆ

ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ ಜಾರಕಿಹೊಳಿ ಎಐಸಿಸಿ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅವರಿಗೆ ತೆಲಂಗಾಣ ರಾಜ್ಯದ ಕಾಂಗ್ರೆಸ್‌ ಉಸ್ತುವಾರಿಯೂ ಆಗಿದ್ದರು.

ಸಮ್ಮಿಶ್ರ ಸರ್ಕಾರದ ಸಂಪುಟದಲ್ಲಿ ಸ್ಥಾನ ಸಿಗದ ಕಾರಣಕ್ಕೆ ಅವರು ಮುನಿಸಿಕೊಂಡಿದ್ದರು. ರಾಜೀನಾಮೆ ಪತ್ರವನ್ನು ಪಕ್ಷದ ವರಿಷ್ಠರಿಗೆ ‘ಸೋಮವಾರವೇ ರವಾನಿಸಿದ್ದೇನೆ’ ಎಂದು ಅವರು ‘ಪ್ರಜಾವಾಣಿ’ಗೆ ಖಚಿತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry