ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಗತಿಯೆಂಬ ಮಾಯಾಲೋಕ!

Last Updated 21 ಜನವರಿ 2018, 19:30 IST
ಅಕ್ಷರ ಗಾತ್ರ

ಶಿಕ್ಷಣ ವ್ಯವಸ್ಥೆಯಲ್ಲಿ ಬಹು–ರೂಪವನ್ನೂ ಬಹು–ಅರ್ಥವನ್ನೂ ಹೊಂದಿರುವ ಪದ ‘ತರಗತಿ’. ಇದು ನಾನಾ ನೆಲೆಯಲ್ಲಿ, ನಾನಾ ಸ್ತರದಲ್ಲಿ ಓದುಗನ ಮತ್ತು ಕೇಳುಗನ ಸಂವಾದ–ಸಂದರ್ಭಕ್ಕನುಗುಣವಾಗಿ ಧ್ವನಿತವಾಗುವ ಪದ. ‘ನೀನು ಎಷ್ಟನೇ ತರಗತಿಯಲ್ಲಿ ಓದುತ್ತಿದ್ದೀಯಾ?’, ‘ಓಹ್! ತಡವಾಯಿತು. ದಿನದ ಮೊದಲ ತರಗತಿ ತಪ್ಪಿಹೋಯಿತು’,  ‘ನನಗೆ ತುರ್ತುಕಾರ್ಯ ಒದಗಿದೆ, ನನ್ನ ಬದಲು ನೀವು ತರಗತಿಯನ್ನು ನಿರ್ವಹಿಸಲು ಸಾಧ್ಯವೆ?’, ‘ತರಗತಿಯಲ್ಲಿ ನಿಶ್ಶಬ್ದತೆಯನ್ನು ಕಾಪಾಡಿ’, ‘ಅವನು ಉತ್ತಮ ಅಂಕದಿಂದ ತರಗತಿಯಲ್ಲಿ ತೇರ್ಗಡೆ ಹೊಂದಿದ’ – ಎಂಬೀ ವಾಕ್ಯಗಳಲ್ಲಿ ಅದು ಹೇಗೆ ಭಿನ್ನ ಭಿನ್ನ ಅರ್ಥಪರಂಪರೆ ಹೊರಡಿಸುತ್ತದೆ ಎಂಬುದನ್ನು ಗಮನಿಸಿ.

ತರಗತಿ ಎಂಬುದು ಮಾಯಾಲೋಕ ಎಂಬುದನ್ನು ಉತ್ತಮ ಶಿಕ್ಷಕ ಅರಿತಿರುತ್ತಾನೆ. ತನ್ನ ತರಗತಿಯಲ್ಲಿ ಮಕ್ಕಳು ಪಡೆದುಕೊಳ್ಳುವ ಅನುಭವ ಅವರ ಮನಸ್ಸಿನಲ್ಲಿ ದಾಖಲಾಗುತ್ತದೆ ಎಂಬ ಅರಿವಿರುವ ಶಿಕ್ಷಕ ಅದನ್ನು ಹೇಗೆ ಪರಿಣಾಮಕಾರಿಯಾಗಿ ಮಾಡಬಹುದು ಎಂಬುದನ್ನು ಯೋಚಿಸಿರುತ್ತಾನೆ, ಯೋಜಿಸಿರುತ್ತಾನೆ. ತರಗತಿಯಲ್ಲಿ ಮಕ್ಕಳ ಮನಸ್ಸನ್ನು ಮುರಿಯಲೂಬಹುದು, ಕಟ್ಟಲೂಬಹುದು.

ಮೊನ್ನೆ ಮೊನ್ನೆ ಭೇಟಿಯಾದ ಹೆಣ್ಣುಮಗಳೊಬ್ಬಳು ನನಗೆ ‘ಸಾರ್! ನೀವು ಭಾಷಾ ಅಧ್ಯಾಪಕರಾಗುವ ಬದಲು ಗಣಿತದ ಅಧ್ಯಾಪಕರಾಗಬೇಕಿತ್ತು’ ಎಂದಳು. ‘ಯಾಕಮ್ಮಾ?’ ಎಂದೆ.  ‘ನಾನು ಎಷ್ಟು ಕಷ್ಟಪಟ್ಟರೂ ಗಣಿತ ತಲೆಗೆ ಹತ್ತಲಿಲ್ಲ ಸಾರ್. ನಾನು ಕ್ಲಾಸ್ ಟೆಸ್ಟ್ ಅಲ್ಲಿ ಫೇಲಾದಾಗ ಗಣಿತ ಅಧ್ಯಾಪಕರು ನನ್ನನ್ನು ತುಂಬಿದ ತರಗತಿಯಲ್ಲಿ ಅವಮಾನ ಮಾಡಿದರು . ‘ಇವಳು ಅಂತಿಮ ಪರೀಕ್ಷೆಯಲ್ಲಿ ಪಾಸಾದರೆ ನಾನು ಅರ್ಧ ತಲೆ ಬೋಳಿಸಿಕೊಳ್ಳುತ್ತೇನೆ’ ಎಂದಿದ್ದರು ಸಾರ್’.

‘ಗೊತ್ತಾಯ್ತು ಬಿಡು. ಅವರು ಅರ್ಧ ತಲೆ ಬೋಳಿಸಿಕೊಳ್ಳುವ ಕಷ್ಟದಿಂದ ನೀನವರನ್ನು ಪಾರು ಮಾಡಿದೆ ಅಲ್ಲವೆ?’

‘ಹ ಹ ಹ... ಹೌದು ಸಾರ್. ಆ ದಿನ ನಾನೆಷ್ಟು ಕುಗ್ಗಿಹೋದೆ ಎಂದರೆ, ಜೀವನವಿಡೀ ಗಣಿತವನ್ನು ಕಂಡರೆ ಹೀಕರಿಸಿಕೊಳ್ಳುವಂತಾಯಿತು.’

ಇಲ್ಲಿ ನಾನು ಹೆಚ್ಚಿಗೆ ಬಿಡಿಸಿ ಹೇಳುವ ಅಗತ್ಯವಿಲ್ಲ. ವಿಷಯದ ಮೇಲೆ ಪ್ರೀತಿ ಹುಟ್ಟಿಸುವುದು ಅಧ್ಯಾಪಕರ ಮೊದಲ ಕೆಲಸ. ಅದು ಆಗಬೇಕಾದ್ದು ತರಗತಿಯಲ್ಲಿ. ತರಗತಿಯ ಹೊರಗೂ ಮೆಲ್ಲನೆ ಅದು ಪಸರಿಸಬೇಕು. ನಾನು ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಆಂಗ್ಲಪದ್ಯವೊಂದನ್ನು ಕನ್ನಡಕ್ಕೆ ಯಾರಾದರೂ ಅನುವಾದಿಸಿ ಎಂದು ನಮ್ಮ ಅಧ್ಯಾಪಕರು ತರಗತಿಯಲ್ಲಿ ಸುಮ್ಮನೆ ಸಾಂದರ್ಭಿಕವಾಗಿ ಹೇಳಿದರು. ನಾನು ಅನುವಾದಿಸಿದೆ, ಅಧ್ಯಾಪಕರ ಕೊಠಡಿಗೆ ಹೋಗಿ ತೋರಿಸಿದೆ. ‘ಭೇಷ್, ಚೆನ್ನಾಗಿದೆ!’ ಎಂದರು. ನಾನು ಅದನ್ನು ಅಲ್ಲಿಗೆ ಮರೆತೆ. ಬಳಿಕ ಎರಡು ದಿನ ಬಿಟ್ಟು ಅವರು ಮತ್ತೆ ನಮ್ಮ ತರಗತಿಗೆ ಬಂದಾಗ, ‘ನಿಮ್ಮ ಮಿತ್ರನೊಬ್ಬ ಪದ್ಯವನ್ನು ಕನ್ನಡಕ್ಕೆ ಅನುವಾದಿಸಿದ್ದಾನೆ. ಅದನ್ನು ಓದುತ್ತಾನೆ ಕೇಳಿ’ ಎಂದರು. ನಾನು ಗಾಬರಿಯಿಂದಲೇ ನಡುಗುವ ದನಿಯಲ್ಲಿ ಅನುವಾದವನ್ನು ಓದಿದೆ; ಆದರೆ ಓದಿ ಮುಗಿಸಿದ ಬಳಿಕ ಜೋರು ಚಪ್ಪಾಳೆ ಬಿತ್ತು.

ಅದಾದ ಬಳಿಕ ನನ್ನನ್ನು ನಾಟಕಶಿಬಿರ, ಸಾಹಿತ್ಯಕಮ್ಮಟಗಳಿಗೆ ಕಳಿಸಿಕೊಡುತ್ತಿದ್ದವರು ಅದೇ ಅಧ್ಯಾಪಕರು. ವಿಧಿಸಿದ್ದ ಪಠ್ಯಕ್ಕಿಂತ ಹೆಚ್ಚಿನ ಓದನ್ನು ಬೆಳೆಸುವ ಬಗೆಯನ್ನು ಕಲಿಸಿದರು. ಕವಿಯೊಬ್ಬರು ಬೆಂಗಳೂರಿಗೆ ಬಂದು ಕಾರ್ಯಕ್ರಮವೊಂದರಲ್ಲಿ ಭಾಗವಹಿಸುತ್ತಾರೆಂದು ತಿಳಿದಾಗ ವಿದ್ಯಾರ್ಥಿಗಳಾಗಿದ್ದ ನಮ್ಮನ್ನೆಲ್ಲ ಆ ಕಾರ್ಯಕ್ರಮಕ್ಕೆ ಕರೆದೊಯ್ದರು. ಹೀಗೆ ವಿಜ್ಞಾನದ ವಿದ್ಯಾರ್ಥಿಯಾದವನೊಬ್ಬ ಭಾಷಾ ಅಧ್ಯಾಪಕನಾಗುವಲ್ಲಿ ಅವರು ಬಹಳ ಮುಖ್ಯಪಾತ್ರವಹಿಸಿದ್ದರು. ಈಗಲೂ ಯಾರಿಂದಾದರೂ ನನ್ನ ವೃತ್ತಿಯ ಬಗ್ಗೆ ಪ್ರಶಂಸೆ ಬಂದಾಗ ನಾನು ಮೊದಲಿಗೆ ನೆನೆಯುವುದು ವಿ. ಎಸ್. ಶ್ರೀಧರ ಅವರನ್ನು. ಸಾಹಿತ್ಯಲೋಕಕ್ಕೆ ನನ್ನನ್ನು ತೆರೆದಿಟ್ಟವರು ಅವರು.

ತರಗತಿಯ, ಶಿಷ್ಟಕಲಿಕೆಯ ಸೊಗಸನ್ನು ಕಾಲೇಜಿನಲ್ಲಿ ಅನುಭವಿಸಿದೆನಾದರೂ ಅದು ಮತ್ತಷ್ಟು ವಿಸ್ತಾರವಾದದ್ದು ರಾಮಕೃಷ್ಣ ಆಶ್ರಮದ ಭಾನುವಾರದ ಅನೌಪಚಾರಿಕ ತರಗತಿಗಳಲ್ಲಿ. ಸ್ವಾಮಿ ಪುರುಷೋತ್ತಮಾನಂದಜಿಯವರು ಆಗ ನಡೆಸುತ್ತಿದ್ದ ತರಗತಿಗಳು ಅತ್ಯಂತ ಆಕರ್ಷಕವೂ ಪರಿಣಾಮಕಾರಿಯೂ ನಿರ್ಮಾಣಕಾರಿಯೂ ಆಗಿರುತ್ತಿದ್ದವು. ಇದೆಲ್ಲದರ ಪರಿಣಾಮ ತಕ್ಷಣದ್ದಲ್ಲವಾದರೂ ತಾತ್ಕಾಲಿಕವಂತೂ ಖಂಡಿತ ಅಲ್ಲ. ಬದುಕನ್ನು ಕಟ್ಟಿಕೊಡುವುದು ಕೇವಲ ಶಾಲೆ/ಕಾಲೇಜಿನ ತರಗತಿಗಳಲ್ಲ, ಅದರಲ್ಲಿ ಇಂತಹ ಅನೌಪಚಾರಿಕ ತರಗತಿಗಳ ಪಾತ್ರವೂ ಇದೆ ಎಂಬುದನ್ನು ತಿಳಿಸಲು ನಾನು ಆಶ್ರಮದ ತರಗತಿಯನ್ನು ಉದಹರಿಸಿದೆ. ಇದಲ್ಲದೆ ವಿಸ್ತಾರ ಅರ್ಥದಲ್ಲಿ ಲೋಕಶಿಕ್ಷಣ ಎಂಬುದಿದೆ; ಎಂದರೆ ವಿಶ್ವವೇ ಒಂದು ವಿದ್ಯಾಲಯವಾಗಿ ಮಾರ್ಪಡುವ ಅವಸ್ಥೆ, ವ್ಯವಸ್ಥೆ. ಆಗ ನೀರಿನಲ್ಲಿ ಕುಳಿತ ಬಕವೂ ನಮಗೆ ಧ್ಯಾನವನ್ನು ಕಲಿಸುವ ಗರುವಾಗುತ್ತದೆ. ತರಗತಿ ಎಂಬ ಕಲ್ಪನೆ ನಾವು ಭಾವಿಸಿದಷ್ಟೂ ಹಿಗ್ಗುವ ಕಲಿಕೆಯ ಕಲ್ಪನೆ.

ತರಗತಿ ಎಂದಮಾತ್ರಕ್ಕೆ ಅದು ಘನಗಂಭೀರವೂ ರುದ್ರರೋದನವೂ ಆಗಿರಬೇಕಿಲ್ಲ. ಅದು ಆರೋಹಣ–ಅವರೋಹಣಗಳಿಂದ ಕೂಡಿದ ಸೊಗಸಾದ ಸಂಗೀತಕಛೇರಿಯಂತೆ. ಅಧ್ಯಾಪಕನಾದವನು ಸಂಯಮಿಯೂ, ಶಿಸ್ತುಪಾಲಕನೂ ಮತ್ತು ತೆಳುಹಾಸ್ಯಶೀಲನೂ ಏಕಕಾಲದಲ್ಲಿ ಆಗಿರಬೇಕಾಗುತ್ತದೆ. ಕೆಲವೊಮ್ಮೆ ಅತ್ಯಂತ ಗಂಭೀರ ಪ್ರಸಂಗಗಳನ್ನು ಹಾಸ್ಯದಿಂದ ಹಾರಿಸಬಿಡಬೇಕಾಗುತ್ತದೆ. ಅಧ್ಯಾಪನಕ್ಕೆ ಕಾಲಿಟ್ಟ ಹೊಸತು. ಗ್ರಾಮಾಂತರ ಪ್ರದೇಶದ ಕಾಲೇಜು. ಹಸಿದ ಹೊಟ್ಟೆಗಳು ಅರ್ಧ, ಅರೆತುಂಬಿದ ಹೊಟ್ಟೆಗಳು ಹಲವು, ಸಿಕ್ಕಿದ್ದನ್ನು ತುಂಬಿಸಿಕೊಂಡು ಬಂದ ಕೆಲವು. ನಾನು ಅವರಿಗೆ ಇಂಗ್ಲಿಷ್ ವ್ಯಾಕರಣ ಕಲಿಸುತ್ತಿದ್ದೆ. ಇದ್ದಕ್ಕಿದ್ದಂತೆ ಒಬ್ಬ ಹುಡುಗ ವಾಂತಿ ಮಾಡಿಬಿಟ್ಟ. ಪಕ್ಕದಲ್ಲಿದ್ದವರು ಪುಸ್ತಕಗಳನ್ನು ಬಚಾವು ಮಾಡಿಕೊಂಡರೂ ಡೆಸ್ಕಿನಡಿಯಲ್ಲಿ ಕಟ್ಟಿ ನಿಂತಿತು ಅದು. ನೆನೆಪಿರಲಿ, ಅದು ಕಾಲೇಜಿನ ತರಗತಿ; ಶಾಲೆಯಲ್ಲ. ಅವನು ಬೆಳೆದ ಹುಡುಗ, ಸಹಪಾಠಿಗಳೆದುರು ತಲೆತಗ್ಗಿಸಿ ನಿಂತಿದ್ದಾನೆ. ತಡೆದರೂ ಬಿಡದೆ ವಾಂತಿಯಾಗಿಬಿಟ್ಟಿದೆ. ಪಶ್ಚಾತ್ತಾಪದಿಂದ ನೆಲವನ್ನು ನೋಡುತ್ತ ನಿಂತಿದ್ದಾನೆ. ಮಕ್ಕಳ ಕುತೂಹಲ; ಶಿಸ್ತು, ಅಚ್ಚುಕಟ್ಟು ಎಂದು ಹಲುಬುವ ಅಧ್ಯಾಪಕ ಏನು ಹೇಳಿಯಾನು ಎಂದು. ಅಲ್ಲಿ ಹೆಚ್ಚು ಯೋಚಿಸಲೂ ಸಮಯವಿಲ್ಲ. ಸಮಯಸ್ಫೂರ್ತಿಯಿಂದ ನುಡಿದೆ, ‘ಕ್ಷಮಿಸಿಬಿಡು. ನಿನಗೆ ವ್ಯಾಕರಣ ಇಷ್ಟೊಂದು ಅಲರ್ಜಿ ಅಂತ ಗೊತ್ತಿರಲಿಲ್ಲ. ಹೋಗಿ ಬಾಯಿ, ಮುಖ ತೊಳೆದು ಬಾ. ಹಾಗೇ ಅಟೆಂಡರನ್ನು ಬರಹೇಳು’. ಇಡೀ ತರಗತಿ ನಕ್ಕಿತು, ಅಪಹಾಸ್ಯದಿಂದಲ್ಲ, ಅದೊಂದು ಹಾಸ್ಯವೆಂದು. ಅವನೂ ನಗುತ್ತ ಹೊರಗೋಡಿದ. ಮುಜುಗರದಿಂದ ನಮ್ಮೆಲ್ಲರನ್ನು ಪಾರು ಮಾಡಿದ್ದು ಸಮಯಸ್ಫೂರ್ತಿಯಿಂದ ಮೂಡಿದ ಆ ಸಾಲುಗಳು. ಅದು ಅಭ್ಯಾಸದಿಂದ ಬರುವಂತಹವಲ್ಲ, ಅನುಭವದಿಂದ, ಪ್ರೀತಿಯಿಂದ, ಮಕ್ಕಳು ನಮ್ಮವರೆಂಬ ಅಂತಃಕರಣದಿಂದ ಮೂಡುವ ಮಾತುಗಳವು.

ತರಗತಿಯೆಂಬ ಕಲಿಕೆಯ ಆವರಣದ ತೋರಣ ಮತ್ತು ಹೂರಣ – ಎರಡೂ ತೃಪ್ತಿಕರವಾಗಿರಬೇಕಾದರೆ ಅಲ್ಲಿ ದ್ವಿಮುಖಿ ಸಂವಹನ ನಡೆಯುತ್ತಿರಬೇಕು. ಅಂದರೆ ಏಕಕಾಲದಲ್ಲಿ ಕಲಿಸುವ ಮತ್ತು ಕಲಿಯುವ ಪ್ರಕ್ರಿಯೆ ನಡೆಯುತ್ತಿರಬೇಕು. ಇದರರ್ಥ ಶಿಕ್ಷಕನು ಕಲಿಸುವುದರ ಜೊತೆಗೆ ಪ್ರತಿ ಕ್ಷಣವೂ ಕಲಿಯುತ್ತಿರಬೇಕು ಮತ್ತು ವಿದ್ಯಾರ್ಥಿಗಳು ಕಲಿಯುವುದರ ಜೊತೆಗೆ ಕಲಿಸುತ್ತಿರಬೇಕು. ಇಂದಿಗೂ ನನ್ನ ಕೆಲವು ಸಾಹಿತ್ಯಸಾಹಸಗಳನ್ನು ಓದಿ ಮೆಚ್ಚುಗೆ, ತಿದ್ದುಗೆ ಪ್ರಶಂಸೆ, ಮಾಡುತ್ತಿರುವವರ ಸಾಲಿನಲ್ಲಿ ನನ್ನ ಹಲವಾರು ಅಧ್ಯಾಪಕರು ಇದ್ದಾರೆ. ಕಾಲೇಜು ಕಲಿಕೆ ಮುಗಿದು ನಾನೇ ಅಧ್ಯಾಪನ ವೃತ್ತಿಯಲ್ಲಿದ್ದರೂ, ಅರ್ಧ ಆಯಸ್ಸು ಕಳೆದಿದ್ದರೂ, ನಾನವರ ತರಗತಿಯಲ್ಲಿದ್ದೇನೆ ಮತ್ತು ಅವರು ನನ್ನ ತರಗತಿಯಲ್ಲಿ ಇದ್ದಾರೆ, ಇದಲ್ಲವೆ ತರಗತಿಯೆಂಬ ಮಾಯಾಲೋಕ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT